ಪೌರತ್ವ ಮಸೂದೆ ಜಾರಿ ನಂತರ ದಿಗ್ಬಂಧನಾ ಶಿಬಿರಗಳಿಗೆ ಮುಸ್ಲಿಮೇತರರನ್ನು ಕಳುಹಿಸುವುದಿಲ್ಲ
ಗುವಾಹಟಿ, ಅ.24: ಪೌರತ್ವ (ತಿದ್ದುಪಡಿ) ಮಸೂದೆ ಜಾರಿಗೊಂಡ ನಂತರ ಯಾವುದೇ ಮುಸ್ಲಿಮೇತರ ವ್ಯಕ್ತಿಯನ್ನು ಅಕ್ರಮ ವಲಸಿಗರಿಗಿರುವ ದಿಗ್ಬಂಧನ ಶಿಬಿರಗಳಿಗೆ ಕಳುಹಿಸಲಾಗುವುದಿಲ್ಲ ಎಂದು ಅಸ್ಸಾಂ ಸಚಿವ ಹಾಗೂ ಬಿಜೆಪಿ ನಾಯಕ ಹಿಮಂತ ಬಿಸ್ವ ಶರ್ಮ ಹೇಳಿದ್ದಾರೆ.
ಗುವಾಹಟಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿ ಸಂದರ್ಭ ಮಾತನಾಡಿದ ಅವರು, "ಮಸೂದೆ ಅಂಗೀಕಾರಗೊಂಡ ನಂತರ ಅಸ್ಸಾಂನ ದಿಗ್ಬಂಧನಾ ಶಿಬಿರಗಳು ಹಿಂದುಗಳು, ಬೌದ್ಧರು, ಜೈನರು ಹಾಗೂ ಕ್ರೈಸ್ತರಿಗೆ ಮುಚ್ಚಲಾಗುವುದು. ಇತರರ ಕುರಿತಂತೆ ನ್ಯಾಯಾಲಯ ತೀರ್ಮಾನಿಸುವುದು. ಈ ದಿಗ್ಬಂಧನ ಶಿಬಿರಗಳನ್ನು ಕೋರ್ಟ್ ಆದೇಶದಂತೆ ಸ್ಥಾಪಿಸಲಾಗಿದೆಯೇ ಹೊರತು ರಾಜ್ಯ ಸರಕಾರಕ್ಕೆ ಬೇಕೆಂದು ಇವುಗಳನ್ನು ಸ್ಥಾಪಿಸಲಾಗಿಲ್ಲ'' ಎಂದು ಅವರು ಹೇಳಿದರು.
ಅಸ್ಸಾಂ ರಾಜ್ಯದಲ್ಲಿ ಸದ್ಯ ಆರು ದಿಗ್ಬಂಧನಾ ಕೇಂದ್ರಗಳಿದ್ದರೂ ಸುಮಾರು 1000ಕ್ಕೂ ಅಧಿಕ ಜನರನ್ನು ಜಿಲ್ಲಾ ಕಾರಾಗೃಹಗಳಲ್ಲಿರಿಸಲಾಗಿದೆ. ಅಕ್ರಮ ವಿದೇಶೀಯರನ್ನಿರಿಸಲೆಂದು ಏಳನೇ ದಿಗ್ಬಂಧನಾ ಕೇಂದ್ರ ಗೋಲ್ಪರ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದೆ.