ಮಹಾರಾಷ್ಟ್ರ: ಪರ್ಲಿಯಲ್ಲಿ ಬಿಜೆಪಿ ನಾಯಕಿ, ಸಚಿವೆ ಪಂಕಜಾ ಮುಂಢೆಗೆ ಸೋಲು

Update: 2019-10-24 17:14 GMT

ಮುಂಬೈ, ಅ.24: ಮಹಾರಾಷ್ಟ್ರದಲ್ಲಿ ತನ್ನ ಪ್ರಮುಖ ನಾಯಕಿ ಹಾಗೂ ಸಚಿವೆ ಪಂಕಜಾ ಮುಂಢೆ ಪರಾಭವಗೊಂಡಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಬೀಡ್ ಜಿಲ್ಲೆಯ ಪಾರ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಪಂಕಜಾ ಮುಂಢೆ ಅವರನ್ನು ಆಕೆಯ ಖಾಸಾ ಸೋದರಸಂಬಂಧಿ ಹಾಗೂ ಎನ್‌ಸಿಪಿ ಅಭ್ಯರ್ಥಿ ಧನಂಜಯ ಮುಂಢೆ ಅವರು 30,768 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಧನಂಜಯ್ ಮುಂಢೆ ಮಹಾರಾಷ್ಟ್ರ ವಿಧಾನಪರಿತ್‌ನಲ್ಲಿ ಪ್ರತಿಪಕ್ಷ ನಾಯಕನಾಗಿದ್ದಾರೆ. ಧನಂಜಯ ಅವರಿಗೆ 1,21,186 ಮತಗಳು ದೊರೆತರೆ, ಪಂಕಜಾಗೆ 90,418 ಮತಗಳು ಲಭಿಸಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿಯೂ ಪಂಕಜಾ ಹಾಗೂ ಧನಂಜಯ ನಡುವೆ ನಿಕಟ ಸ್ಪರ್ಧೆ ಏರ್ಪಟ್ಟಿತ್ತು.

ಚುನಾವಣಾ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆಯೇ ಅನಿರೀಕ್ಷಿತವಾದ ಸೋಲಿನಿಂದ ಆಘಾತಗೊಂಡಿದ್ದ ಪಂಕಜಾ ಮುಂಢೆ ಅವರು ದುಃಖ ತಡೆಯಲಾರದೆ ಗಳಗಳನೆ ಅತ್ತುಬಿಟ್ಟರು. ತನ್ನ ಸೋಲನ್ನು ಒಪ್ಪಿಕೊಂಡ ಅವರು, “ನನ್ನ ಕ್ಷೇತ್ರಕ್ಕಾಗಿ ಶ್ರಮಿಸಿದ್ದೆ. ನಾನು ಸರಕಾರದಲ್ಲಿದ್ದರೂ, ನನ್ನ ಕ್ಷೇತ್ರ ಹಾಗೂ ಜನತೆಯ ಕಲ್ಯಾಣಕ್ಕಾಗಿ ನಾನು ನಡೆಸುವ ಹೋರಾಟ ಮುಂದುವರಿಯಲಿದೆ” ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News