ಜಮ್ಮು-ಕಾಶ್ಮೀರದಲ್ಲಿ ಇನ್ನೆಷ್ಟು ದಿನ ನಿರ್ಬಂಧ ಹೇರಲು ಬಯಸಿದ್ದೀರಿ: ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ
ಹೊಸದಿಲ್ಲಿ, ಅ.24: ವಿಧಿ 370ನ್ನು ರದ್ದುಪಡಿಸಿದ ಬಳಿಕ ಆಗಸ್ಟ್‌ನಿಂದ ಜಮ್ಮು-ಕಾಶ್ಮೀರದಲ್ಲಿ ವಿಧಿಸಲಾಗಿರುವ ನಿರ್ಬಂಧವನ್ನು ಇನ್ನೂ ಎಷ್ಟು ದಿನ ಮುಂದುವರಿಸಲು ಬಯಸಿದ್ದೀರಿ ಎಂದು ಸುಪ್ರೀಂಕೋರ್ಟ್ ಗುರುವಾರ ಕೇಂದ್ರ ಸರಕಾರವನ್ನು ಪ್ರಶ್ನಿಸಿದೆ.
ಎಷ್ಟು ದಿನಗಳ ಕಾಲ ನಿರ್ಬಂಧ ಹೇರಲು ಬಯಸಿದ್ದೀರಿ?ಈಗಾಗಲೇ ನಿರ್ಬಂಧ ವಿಧಿಸಿ 2 ತಿಂಗಳು ಕಳೆದಿದೆ. ನೀವು ಇದರ ಕುರಿತು ಸ್ಪಷ್ಟವಾದ ಬಳಿಕ ಬನ್ನಿ. ಇತರ ಪದ್ಧತಿಯತ್ತ ಗಮನ ಹರಿಸಿ. ರಾಷ್ಟ್ರೀಯ ಹಿತಾಸಕ್ತಿಯ ಹೆಸರಿನಲ್ಲಿ ಹೇರಲಾಗಿರುವ ನಿರ್ಬಂಧಗಳನ್ನು ಕಾಲಕಾಲಕ್ಕೆ ಮರುಪರಿಶೀಲನೆ ನಡೆಸಬೇಕು . ನೀವು ಆ ಕೆಲಸ ಮಾಡುತ್ತಿದ್ದೀರಾ? ಎಂದು ಜಮ್ಮು-ಕಾಶ್ಮೀರದ ಆಡಳಿತಕ್ಕೆ ಸುಪ್ರೀಂಕೋರ್ಟ್ ಗುರುವಾರ ಪ್ರಶ್ನಿಸಿದೆ.
ರಾಜ್ಯದಲ್ಲಿನ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಹೇರಲಾಗಿರುವ ನಿರ್ಬಂಧವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ಜಸ್ಟಿಸ್ ಎನ್‌ವಿ ರಮಣ ನೇತೃತ್ವದ ನ್ಯಾಯಪೀಠ ವಿಚಾರಣೆ ನಡೆಸುತ್ತಿದೆ.
‘‘ನಿರ್ಬಂಧಗಳನ್ನು ಪ್ರತಿದಿನ ಪರಿಶೀಲಿಸಲಾಗುತ್ತಿದೆ. ಸುಮಾರು ಶೇ.99ರಷ್ಟು ಪ್ರದೇಶದಲ್ಲಿ ನಿರ್ಬಂಧ ತೆರವುಗೊಳಿಸಲಾಗಿದೆ’’ ಎಂದು ಜಮ್ಮು-ಕಾಶ್ಮೀರ ರಾಜ್ಯವನ್ನು ಪ್ರತಿನಿಧಿಸಿದ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು.
ನ್ಯಾಯಪೀಠ ಮುಂದಿನ ವಿಚಾರಣೆಯನ್ನು ನ.5ಕ್ಕೆ ಮುಂದೂಡಿದೆ.