ಬಿಹಾರದಲ್ಲಿ ಗೆಲುವಿನ ಖಾತೆ ತೆರೆದ ಎಐಎಂಐಎಂ: ಕಿಶನ್ ಗಂಜ್ ನಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಮಣಿಸಿದ ಕಮರುಲ್ ಹುದಾ

Update: 2019-10-24 14:16 GMT

ಪಾಟ್ನಾ, ಅ.24: ಹೈದರಾಬಾದ್ ಸಂಸದ ಅಸದುದ್ದೀನ್ ಉವೈಸಿ ನೇತೃತ್ವದ ಎಐಎಂಐಎಂ ಗುರುವಾರ ಬಿಹಾರ ವಿಧಾನಸಭೆಯಲ್ಲಿ ಮೊದಲ ಗೆಲುವು ದಾಖಲಿಸಿದೆ. ಕಿಶನಗಂಜ್ ಕ್ಷೇತ್ರದಲ್ಲಿ ಎಐಎಂಐಎಂ ಅಭ್ಯರ್ಥಿ ಕಮರುಲ್ ಹುದಾ ಅವರು ಬಿಜೆಪಿಯ ಸ್ವೀಟಿ ಸಿಂಗ್ ಅವರನ್ನು 10,204 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.

ಮೇ ತಿಂಗಳಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನ ಜಾವೇದ್ ಆಲಂ ಅವರು ಲೋಕಸಭೆಗೆ ಆಯ್ಕೆಯಾದ ಬಳಿಕ ಕಿಶನಗಂಜ್ ವಿಧಾನಸಭಾ ಕ್ಷೇತ್ರವು ತೆರವಾಗಿತ್ತು. ಕಿಶನಗಂಜ್ ಸೇರಿದಂತೆ ದೇಶಾದ್ಯಂತ 51 ವಿಧಾನಸಭಾ ಕ್ಷೇತ್ರಗಳಲ್ಲಿ ಸೋಮವಾರ ಉಪಚುನಾವಣೆ ನಡೆದಿತ್ತು.

2015ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎಐಎಂಐಎಂ ಆರು ಸ್ಥಾನಗಳಿಗೆ ಸ್ಪರ್ಧಿಸಿತ್ತಾದರೂ ಜಯ ದಾಖಲಿಸುವಲ್ಲಿ ವಿಫಲಗೊಂಡಿತ್ತು. ಪಕ್ಷವು ಲೋಕಸಭಾ ಚುನಾವಣೆಯಲ್ಲಿ ತನ್ನ ರಾಜ್ಯಾಧ್ಯಕ್ಷ ಅಖ್ತರುಲ್ ಇಮಾನ್ ಅವರನ್ನು ಕಿಶನಗಂಜ್‌ನಿಂದ ಕಣಕ್ಕಿಳಿಸಿತ್ತಾದರೂ,ಅವರು ಮೂರನೇ ಸ್ಥಾನ ಪಡೆದಿದ್ದರು.

ಲೋಕಸಭೆಯಲ್ಲಿ ಇಬ್ಬರು,ತೆಲಂಗಾಣ ವಿಧಾನಸಭೆಯಲ್ಲಿ ಏಳು ಸದಸ್ಯರನ್ನು ಎಐಎಂಐಎಂ ಹೊಂದಿದೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಇಬ್ಬರು ಸದಸ್ಯರನ್ನು ಹೊಂದಿದ್ದ ಅದು ಸೋಮವಾರ ನಡೆದಿದ್ದ ಚುನಾವಣೆಯಲ್ಲಿ ಮೂರು ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಬಲವನ್ನು ಹೆಚ್ಚಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News