ಗುಜರಾತ್ ಉಪ ಚುನಾವಣೆ: ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಜಯ

Update: 2019-10-24 17:53 GMT

 ಗಾಂಧಿನಗರ, ಅ. 24: ಗುಜರಾತ್‌ನಲ್ಲಿ ಆರು ವಿಧಾನ ಸಭಾ ಸ್ಥಾನಗಳಿಗೆ ಗುರುವಾರ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಕ್ಷೇತ್ರಗಳಲ್ಲಿ ಜಯ ಗಳಿಸುವಲ್ಲಿ ಸಫಲವಾಗಿದೆ.

 ರಾಧನಪುರ, ಬಯಾದ್ ಹಾಗೂ ತರಾದ್ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯ ಗಳಿಸಿದೆ. ಲುನಾವಾದ, ಖೆರಾಲು ಹಾಗೂ ಅಮ್ರೈವಾದಿ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜಯ ಗಳಿಸಿದೆ.

 ಶಾಸಕರಾಗಿದ್ದ ಅಲ್ಪೇಶ್ ಠಾಕೂರ್ ಹಾಗೂ ಧವಳ್ ಸಿನ್ಹ ಝಾಲಾ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿರುವುದರಿಂದ ಎರಡು ಸ್ಥಾನಗಳು ತೆರವಾಗಿತ್ತು. ತರಾದ್, ಲುನಾವಾಡ, ಖೆರಾಲು ಹಾಗೂ ಅಮ್ರೈವಾದಿಯ ಬಿಜೆಪಿ ಶಾಸಕರು ಈ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದ ಹಿನ್ನೆಲೆಯಲ್ಲಿ ಈ ಸ್ಥಾನಗಳು ತೆರವಾಗಿದ್ದವು. ಹೀಗೆ ಒಟ್ಟು 6 ಸ್ಥಾನಗಳು ತೆರವಾಗಿದ್ದವು.

ರಾದನಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿಯ ಅಲ್ಪೇಶ್ ಠಾಕೂರ್ ಕಾಂಗ್ರೆಸ್‌ನ ರಘುಭಾಯಿ ದೇಸಾಯಿಯಿಂದ ಪರಾಭವಗೊಂಡಿದ್ದಾರೆ. ಅಲ್ಪೇಶ್ ಠಾಕೂರ್ 2017ರ ವಿಧಾನಸಭೆ ಚುನಾವಣೆ ಮುನ್ನ ಕಾಂಗ್ರೆಸ್‌ನ ಕಾರ್ಯದರ್ಶಿಯಾಗಿ ನಿಯೋಜಿತರಾಗಿದ್ದರು. ಲೋಕಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿದ್ದರು. ಬಯಾದ್‌ನಲ್ಲಿ ಠಾಕೂರ್ ಅವರ ನಿಕಟವರ್ತಿ ಧವಳ್ ಸಿನ್ಹ ಝಾಲಾ ಕಾಂಗ್ರೆಸ್‌ನ ಜಶು ಪಟೇಲ್ ಅವರಿಂದ ಪರಾಭವಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News