ಶಿವಸೇನೆ ಜೊತೆ ಮೈತ್ರಿ ಬಗ್ಗೆ ಶರದ್ ಪವಾರ್ ಪ್ರತಿಕ್ರಿಯಿಸಿದ್ದು ಹೀಗೆ…
ಮುಂಬೈ, ಅ.24: ವಿಧಾನಸಭಾ ಚುನಾವಣೆಯಲ್ಲಿ 220ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಬಿಜೆಪಿ-ಶಿವಸೇನೆ ಪ್ರಯತ್ನವನ್ನು ಮಹಾರಾಷ್ಟ್ರದ ಜನರು ವಿಫಲಗೊಳಿಸಿದ್ದಾರೆ ಎಂದು ಎನ್‌ಸಿಪಿ ವರಿಷ್ಠ ಶರದ್ ಪವಾರ್ ಅವರು ಗುರುವಾರ ಇಲ್ಲಿ ಹೇಳಿದರು.
ಪ್ರತಿಪಕ್ಷವು ಕಠಿಣವಾಗಿ ಶ್ರಮಿಸಿತ್ತು. ಕಾಂಗ್ರೆಸ್-ಎನ್‌ಸಿಪಿ ಮತ್ತು ಮಿತ್ರಪಕ್ಷಗಳ ಎಲ್ಲ ಸದಸ್ಯರು ತಮ್ಮ ಅತ್ಯುತ್ತಮ ಪ್ರಯತ್ನಗಳನ್ನು ಮಾಡಿದ್ದಾರೆ. ಅವರಿಗೆ ತಾನು ಆಭಾರಿ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದ ಪವಾರ್,ಅಧಿಕಾರವು ಬರುತ್ತದೆ,ಹೋಗುತ್ತದೆ. ಆದರೆ ಹೋರಾಟಕ್ಕೆ ಬದ್ಧರಾಗಿರುವುದು ಮುಖ್ಯ ಎಂದರು.
ಸೊಕ್ಕು ಬಿಜೆಪಿ ಮತ್ತು ಶಿವಸೇನೆಯ ಚುನಾವಣಾ ಅವಕಾಶಗಳಿಗೆ ಹಾನಿಯನ್ನುಂಟು ಮಾಡಿದೆ. ಅವರಿಂದ ಅಧಿಕಾರದ ದುರುಪಯೋಗ ಮತ್ತು ಬೇಜವಾಬ್ದಾರಿ ಮಾತುಗಳನ್ನು ಜನರು ಒಪ್ಪಿಕೊಂಡಿಲ್ಲ ಎಂದ ಅವರು,ಕಾಂಗ್ರೆಸ್ ಮತ್ತು ಎನ್‌ಸಿಪಿಯಿಂದ ಪಕ್ಷಾಂತರಗೊಂಡಿದ್ದ ರಾಜಕಾರಣಿಗಳನ್ನು ಜನತೆ ಸ್ವೀಕರಿಸಿಲ್ಲ ಎಂದರು.
ಪಕ್ಷವು ಶೀಘ್ರವೇ ಬೆಂಬಲಿಗರ ಸಭೆಯನ್ನು ಕರೆದು ತನ್ನ ಭವಿಷ್ಯದ ಕ್ರಮವನ್ನು ನಿರ್ಧರಿಸಲಿದೆ. ಎನ್‌ಸಿಪಿಯು ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಮತ್ತು ಪ್ರತಿಪಕ್ಷದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಪವಾರ್ ತಿಳಿಸಿದರು.