ಪ್ರಸಿದ್ಧ ಕೊರಿಯೊಗ್ರಾಫರ್ ರೆಮೊ ಡಿಸೋಜಾ ವಿರುದ್ಧ ಜಾಮೀನು ರಹಿತ ಬಂಧನಾದೇಶ

Update: 2019-10-24 14:58 GMT

ಗಾಝಿಯಾಬಾದ್, ಅ. 24: ವಂಚನೆ ಆರೋಪಕ್ಕೆ ಸಂಬಂಧಿಸಿ ಕೊರಿಯೋಗ್ರಾಫರ್ ರೆಮೊ ಡಿಸೋಜಾ ವಿರುದ್ಧ ಗಾಝಿಯಾಬಾದ್ ನ್ಯಾಯಾಲಯ ಗುರುವಾರ ಜಾಮೀನು ರಹಿತ ಬಂಧನಾದೇಶ ಜಾರಿ ಮಾಡಿದೆ.

 ಹೆಚ್ಚುವರಿ ಮುಖ್ಯ ನ್ಯಾಯಾಂಗ ದಂಡಾಧಿಕಾರಿ ಮಹೇಂದ್ರ ರಾವತ್ ಈ ಜಾಮೀನು ರಹಿತ ಬಂಧನಾದೇಶ ಜಾರಿಗೊಳಿಸಿದ್ದಾರೆ. ಮೀರತ್ ವಲಯದ ಐಜಿಪಿಯಿಂದ ಅನುಮತಿ ಪಡೆದು ಮುಂಬೈಯಲ್ಲಿರುವ ರೆಮೋ ಡಿ’ಸೋಜಾ ವಿರುದ್ಧ ಬಂಧನಾದೇಶ ಜಾರಿ ಮಾಡಲಾಗುವುದು ಎಂದು ಪೊಲೀಸ್ ಉಪ ಅಧೀಕ್ಷಕ ಅತೀಶ್ ಕುಮಾರ್ ಹೇಳಿದ್ದಾರೆ.

ಕಾನೂನು ಪ್ರಕಾರ ಇತರ ರಾಜ್ಯಗಳಲ್ಲಿ ಬಂಧನಾದೇಶ ಜಾರಿಗೊಳಿಸುವಾಗ ಐಜಿಪಿಯ ಅನುಮತಿಯ ಅಗತ್ಯ ಇದೆ ಎಂದು ಅವರು ಹೇಳಿದ್ದಾರೆ. “ರೆಮೊ ಡಿ’ಸೋಜಾ 2016ರಲ್ಲಿ ತನ್ನ ಚಿತ್ರ ‘ಅಮರ್ ಮಸ್ಟ್ ಡೈ’ ಚಿತ್ರಕ್ಕೆ ಹಣ ಹೂಡಲು ನನ್ನಿಂದ 5 ಕೋಟಿ ರೂಪಾಯಿ ಸಾಲ ತೆಗೆದುಕೊಂಡಿದ್ದರು” ಎಂದು ಗಾಝಿಯಾಬಾದ್‌ನ ರಾಜ್‌ನಗರದ ನಿವಾಸಿ ಸತ್ಯೇಂದ್ರ ತ್ಯಾಗಿ ದೂರು ನೀಡಿದ್ದರು.

ಚಿತ್ರ ಬಿಡುಗಡೆಯಾದ ಬಳಿಕ ಸಾಲ ನೀಡಿದ ಮೊತ್ತದ ದ್ವಿಗುಣ 10 ಕೋಟಿ ರೂಪಾಯಿ ನೀಡಲಾಗುವುದು ಎಂದು ರೆಮೊ ಡಿ’ಸೋಜಾ ಭರವವಸೆ ನೀಡಿದ್ದರು. ಆದರೆ, ಡಿ’ಸೋಜಾ ಇದುವರೆಗೆ ಹಣ ಹಿಂದಿರುಗಿಸಿಲ್ಲ ಎಂದು ತ್ಯಾಗಿ ಆರೋಪಿಸಿದ್ದಾರೆ.

ಡಿ’ಸೋಜಾ ನ್ಯಾಯಾಲಯದ ಮುಂದೆ ಹಾಜರಾಗಲು ವಿಫಲವಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಆತನ ವಿರುದ್ಧ ಜಾಮೀನು ರಹಿತ ಬಂಧನಾದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News