ಅಧಿಕಾರ ಹಂಚಿಕೆಯಲ್ಲಿ 50:50 ಸೂತ್ರಕ್ಕೆ ಇದು ಸಕಾಲ: ಉದ್ಧವ್ ಠಾಕ್ರೆ
ಮುಂಬೈ, ಅ.24: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ತನ್ನ ಪಕ್ಷದ ಭರ್ಜರಿ ಸಾಧನೆಯಿಂದ ಉತ್ತೇಜಿತರಾಗಿರುವ ಶಿವಸೇನಾ ವರಿಷ್ಠ ಉದ್ಧವ್ ಠಾಕ್ರೆ, ನೂತನ ಸರಕಾರದಲ್ಲಿ ಅಧಿಕಾರ ಹಂಚಿಕೆಯಲ್ಲಿ 50:50 ಸೂತ್ರವನ್ನು ಅನುಸರಿಸಲು ಇದು ಸಕಾಲ ಎಂದು ಹೇಳಿದ್ದಾರೆ.
ಎನ್‌ಡಿಎ ಮೈತ್ರಿಕೂಟದ ಅಂಗಪಕ್ಷವಾದ ಶಿವಸೇನೆ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ 126 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು, 58 ರಲ್ಲಿ ಜಯಗಳಿಸಿದೆ. 2014ರ ವಿಧಾನಸಭಾ ಚುನಾವಣೆಯಲ್ಲಿ ಅದು ಬಿಜೆಪಿ ಸಖ್ಯವನ್ನು ಕಡಿದುಕೊಂಡು ಏಕಾಂಗಿಯಾಗಿ ಸ್ಪರ್ಧಿಸಿದ್ದರೂ 63 ಸ್ಥಾನಗಳಲ್ಲಿ ಜಯಗಳಿಸಿತ್ತು.
ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, 126 ಸ್ಥಾನಗಳನ್ನು ಶಿವಸೇನೆಗೆ ಬಿಟ್ಟುಕೊಟ್ಟಿತು. ಪಕ್ಷವು ಅಧಿಕಾರಕ್ಕೇರಿದಲ್ಲಿ ಉಪಮುಖ್ಯಮಂತ್ರಿ ಸ್ಥಾನವನ್ನು ಶಿವಸೇನಾಗೆ ಬಿಟ್ಟುಕೊಡುವ ಭರವಸೆಯನ್ನು ಕೂಡಾ ಬಿಜೆಪಿ ನೀಡಿತ್ತು.
ಆದಾಗ್ಯೂ,ಇಂದು ಮತಏಣಿಕೆ ಪ್ರಗತಿ ಹೊಂದಿದಂತೆಲ್ಲಾ ಬಹುತೇಕ ಕ್ಷೇತ್ರಗಳಲ್ಲಿ ಶಿವಸೇನಾ ಅಭ್ಯರ್ಥಿಗಳು ಮುನ್ನಡೆ ಸಾಧಿಸಿರುವ ಸುದ್ದಿಗಳು ಬರುತ್ತಿದ್ದಂತೆಯೇ ಉದ್ಧವಂಠಾಕ್ರೆ ಹೇಳಿಕೆ ನೀಡಿ, ಅಧಿಕಾರಹಂಚಿಕೆಯಲ್ಲಿ 50:50 ಸೂತ್ರ ಅನುಸರಿಸಲು ಇದು ಸಕಾಲ ಎನ್ನುವ ಮೂಲಕ ತಾನು ಕೂಡಾ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವುದನ್ನು ಪರೋಕ್ಷವಾಗಿ ಸೂಚಿಸಿದೆ.
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅಮಿತ್ ಶಾ ಅವರು ನನ್ನ ಮನೆಗೆ ಆಗಮಿಸಿದ್ದಾಗ ನಾವು 50:50 ಸೂತ್ರವನ್ನು ಒಪ್ಪಿಕೊಂಡಿದ್ದೆವು. ಇದೀಗ ಅದನ್ನು ಅನುಷ್ಠಾನಕ್ಕೆ ತರಲು ಸಕಾಲ’’ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
ಬಿಜೆಪಿಯ ವಿನಂತಿಯ ಮೇರೆಗೆ ಶಿವಸೇನಾವು ಕಡಿಮೆ ಸಂಖ್ಯೆಯ ಸೀಟುಗಳಲ್ಲಿ ಸ್ಪರ್ಧಿಸಿತ್ತು. ಹಾಗೆಂದು ನಾವು ಯಾವಾಗಲೂ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲವೆಂದು ಅವರು ಹೇಳಿದರು.