ಡಿಕೆಶಿಗೆ ಜಾಮೀನು ವಿರುದ್ಧ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ ಈ.ಡಿ.

Update: 2019-10-25 16:19 GMT

 ಹೊಸದಿಲ್ಲಿ, ಅ.25: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರಿಗೆ ಜಾಮೀನು ನೀಡಿರುವ ದಿಲ್ಲಿ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯವು ಶುಕ್ರವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಡಿ.ಕೆ.ಶಿವಕುಮಾರ್ ಅವರಿಗೆ ದಿಲ್ಲಿ ಹೈಕೋರ್ಟ್ ಬುಧವಾರ ಜಾಮೀನು ನೀಡಿತ್ತು.

   ಐಎನ್‌ಎಕ್ಸ್ ಮಿಡಿಯಾ ಪ್ರಕರಣದಲ್ಲಿ ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ಅವರಿಗೆ ಜಾಮೀನು ನೀಡಿರುವುದನ್ನು ಮರುಪರಿಶೀಲಿಸುವಂತೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ನಿರ್ಧರಿಸುವ ಬೆನ್ನಲ್ಲೇ ಜಾರಿ ನಿರ್ದೇಶನಾಲಯ ಈ ಹೆಜ್ಜೆಯನ್ನಿಟ್ಟಿದೆ.

 ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಸುಮಾರು 50 ದಿನಗಳ ಕಾಲ ಬಂಧನದಲ್ಲಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಬುಧವಾರ ದಿಲ್ಲಿ ನ್ಯಾಯಾಲಯ ಜಾಮೀನು ನೀಡಿತ್ತು. 57 ವರ್ಷ ವಯಸ್ಸಿನ ಶಿವಕುಮಾರ್ ಅವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳು ತನಿಖಾ ಸಂಸ್ಥೆಗಳ ಕೈಯಲ್ಲಿರುವುದರಿಂದ ಅವರಿಗೆ ಪುರಾವೆಗಳನ್ನು ತಿರುಚಲು ಸಾಧ್ಯವಿಲ್ಲವೆಂದು ನ್ಯಾಯಾಧೀಶರು ಅಭಿಪ್ರಾಯಿಸಿದ್ದರು.

 ತಾನು ಅಧಿಕಾರದಲ್ಲಿ ಇಲ್ಲದೇ ಇರುವುದರಿಂದ ತಾನಾಗಲಿ ಅಥವಾ ತನ್ನ ಕುಟುಂಬವಾಗಲಿ ಅಥವಾ ನಿಕಟವರ್ತಿಗಳಾಗಲಿ ಪುರಾವೆಗಳನ್ನು ತಿರುಚಲು ಸಾಧ್ಯವಿಲ್ಲವೆಂದು ಅವರ ವಕೀಲರು ವಾದಿಸಿದ್ದರು. ಆನಂತರ ನ್ಯಾಯಾಲಯವು 25 ಲಕ್ಷ ರೂ.ಗಳ ಹಾಗೂ ಅಷ್ಟೇ ಮೊತ್ತದ ಎರಡು ಶ್ಯೂರಿಟಿಗಳೊಂದಿಗೆ ಅವರಿಗೆ ಜಾಮೀನು ನೀಡಿತ್ತು. ಆದರೆ ವಿದೇಶಕ್ಕೆ ಪ್ರಯಾಣಿಸದಂತೆ ಅವರಿಗೆ ಶರತ್ತು ವಿಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News