ಅಸ್ಸಾಂ ಬಂಧನ ಕೇಂದ್ರದಲ್ಲಿದ್ದ ಮತ್ತೊಬ್ಬ ವ್ಯಕ್ತಿ ಸಾವು

Update: 2019-10-26 17:19 GMT

ಗುವಾಹಟಿ, ಅ.26: ಅಸ್ಸಾಂನಲ್ಲಿ ದಾಖಲೆಪತ್ರ ಇಲ್ಲದ ವಲಸಿಗರನ್ನು ಬಂಧನದಲ್ಲಿಡುವ ಕೇಂದ್ರಗಳ ಸ್ಥಿತಿಯನ್ನು ಪರಿಶೀಲಿಸಲು ರಾಜ್ಯ ಸರಕಾರ ಪರಿಶೀಲನಾ ಸಮಿತಿಯನ್ನು ರಚಿಸಿರುವುದಾಗಿ ಸುದ್ದಿಸಂಸ್ಥೆ ವರದಿ ಮಾಡಿದೆ.

ರಾಜ್ಯದ ಎಲ್ಲಾ ಬಂಧನ ಕೇಂದ್ರಗಳಿಗೆ ಸಮಿತಿ ಭೇಟಿ ನೀಡಲಿದ್ದು ಇಲ್ಲಿರುವ ಕಾನೂನು ಸಹಾಯ ಸ್ಥಿತಿ ಮತ್ತು ಆರೋಗ್ಯ ಪರಿಸ್ಥಿತಿಯನ್ನು ಪರಿಶೀಲಿಸಲಿದೆ. ಬಂಧನದಲ್ಲಿರುವವರಿಗೆ ಪೂರೈಸುವ ಆಹಾರ, ಅಲ್ಲಿಯ ಜೀವನಸ್ಥಿತಿ, ಬಂಧನದಲ್ಲಿರುವ ವ್ಯಕ್ತಿಗಳ ಮಕ್ಕಳಿಗೆ ಒದಗಿಸುವ ಶಿಕ್ಷಣದ ಬಗ್ಗೆಯೂ ಪರಿಶೀಲಿಸಿ ಬಳಿಕ ಅಗತ್ಯಬಿದ್ದರೆ ಕೈಗೊಳ್ಳಬೇಕಾದ ಸುಧಾರಣಾ ಕ್ರಮಗಳ ಬಗ್ಗೆ ಮೂರು ತಿಂಗಳ ಒಳಗೆ ವರದಿ ಸಲ್ಲಿಸಲಿದೆ ಎಂದು ಮುಖ್ಯಮಂತ್ರಿಗಳ ಕಚೇರಿಯ ಪ್ರಕಟಣೆ ತಿಳಿಸಿದೆ.

ಬಾರ್ಡರ್ ಪೊಲೀಸ್‌ನ ಡಿಐಜಿ ಸಮಿತಿಯ ಮುಖ್ಯಸ್ಥರಾಗಿರುತ್ತಾರೆ. ಬಂಧೀಖಾನೆ ಪ್ರಧಾನ ನಿರ್ದೇಶಕರು , ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ, ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿ ನೇಮಕ ಮಾಡಿರುವ ಪ್ರತಿನಿಧಿ ಹಾಗೂ ಸಮಿತಿ ಅಧ್ಯಕ್ಷರು ಆಯ್ಕೆ ಮಾಡುವ ಸದಸ್ಯರು ಸಮಿತಿಯಲ್ಲಿರುತ್ತಾರೆ.

 ಈ ಮಧ್ಯೆ, ಬಂಧನ ಕೇಂದ್ರದಲ್ಲಿದ್ದ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. 2017ರ ಜುಲೈಯಿಂದ ಬಂಧನ ಕೇಂದ್ರದಲ್ಲಿದ್ದ ನಲ್ಬಾರಿ ಜಿಲ್ಲೆಯ ನಿವಾಸಿ, 70 ವರ್ಷದ ಫಾಲು ದಾಸ್ ಎಂಬಾತ ಶುಕ್ರವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಅಸ್ವಸ್ಥನಾಗಿದ್ದ ಈತನನ್ನು ಅಕ್ಟೋಬರ್ 11ರಂದು ಸ್ಥಳೀಯ ಆಸ್ಪತ್ರೆಗೆ, ಬಳಿಕ ಗುವಾಹಟಿ ಮೆಡಿಕಲ್ ಕಾಲೇಜು ಮತ್ತು ಆಸ್ಪತೆಗೆ ದಾಖಲಿಸಲಾಗಿದ್ದು ಅ.25ರಂದು ಮೃತಪಟ್ಟಿರುವುದಾಗಿ ಸರಕಾರದ ಮೂಲಗಳು ತಿಳಿಸಿವೆ. ಆದರೆ, ಫಾಲು ದಾಸ್ ಅಸ್ವಸ್ಥನಾಗಿರುವ ಬಗ್ಗೆ ತಮಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಆತನ ಕುಟುಂಬದವರು ಮೃತದೇಹವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ.

  ಕಳೆದ ವರ್ಷ, ಸುಮಾರು 2 ವರ್ಷ ಬಂಧನ ಕೇಂದ್ರದಲ್ಲಿದ್ದ 65 ವರ್ಷದ ದುಲಾಲ್‌ಚಂದ್ರ ಪಾಲ್ ಎಂಬಾತ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದ. ಆತ ವಿದೇಶೀಯ ಎಂದು ಸರಕಾರ ಘೋಷಿಸಿರುವ ಕಾರಣ ಮೃತದೇಹವನ್ನು ಬಾಂಗ್ಲಾದೇಶಕ್ಕೆ ಕಳುಹಿಸಿ ಎಂದು ಕುಟುಂಬದ ಸದಸ್ಯರು ಪಟ್ಟು ಹಿಡಿದಿದ್ದರು. ಬಳಿಕ ಮುಖ್ಯಮಂತ್ರಿ ಮಧ್ಯಪ್ರವೇಶಿಸಿ ಮನ ಒಲಿಸಿದ ನಂತರ ಮೃತದೇಹದ ಅಂತ್ಯಸಂಸ್ಕಾರ ನಡೆಸಲು ಒಪ್ಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News