‘ಕ್ಯಾರ್’ ಚಂಡಮಾರುತದ ಪ್ರಭಾವ: ಕೇರಳ, ಕರ್ನಾಟಕದಲ್ಲಿ 3 ದಿನ ಮಳೆ ಸಾಧ್ಯತೆ

Update: 2019-10-29 18:17 GMT

 ಹೊಸದಿಲ್ಲಿ, ಅ.29: ‘ಕ್ಯಾರ್’ ಚಂಡಮಾರುತದ ಪ್ರಭಾವ ತಗ್ಗಿದ್ದರೂ ಮುಂದಿನ ಮೂರು ದಿನಗಳಲ್ಲಿ ದಕ್ಷಿಣ ಕೇರಳ ದಕ್ಷಿಣ ತಮಿಳುನಾಡು, ಕರ್ನಾಟಕದ ಒಳನಾಡಿನಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

 ಕ್ಯಾರ್ ಚಂಡಮಾರುತದ ವೇಗ ತಗ್ಗಿದ್ದು ಬುಧವಾರ ಬೆಳಗ್ಗೆ ಇದು ಅತ್ಯಂತ ತೀವ್ರವಾದ ಬಿರುಗಾಳಿಯ ರೂಪವನ್ನು ಮತ್ತು ಗುರುವಾರ ಸಂಜೆಯ ವೇಳೆಗೆ ತೀವ್ರವಾದ ಬಿರುಗಾಳಿಯ ರೂಪಕ್ಕೆ ತಿರುಗಲಿದೆ . ಮಂಗಳವಾರ ಬೆಳಿಗ್ಗೆ ಮುಂಬೈಯಿಂದ ಸುಮಾರು 990 ಕಿ.ಮೀ ಪಶ್ಚಿಮದಲ್ಲಿದ್ದ ಕ್ಯಾರ್ ಚಂಡಮಾರುತ ಒಮಾನ್‌ನತ್ತ ಚಲಿಸುತ್ತಿದೆ. ಮುಂದಿನ ಮೂರು ದಿನದಲ್ಲಿ ದಕ್ಷಿಣ ಒಮಾನ್ ಮತ್ತು ಯೆಮೆನ್ ತೀರದತ್ತ ಚಲಿಸಲಿದೆ ಎಂದು ಇಲಾಖೆ ತಿಳಿಸಿದೆ.

ಚಂಡಮಾರುತ ಭಾರತದ ಕರಾವಳಿಯಿಂದ ದೂರ ಸರಿದಿದ್ದರೂ ಅರಬ್ಬಿ ಸಮುದ್ರದಲ್ಲಿ ಕಡಿಮೆ ಒತ್ತಡದ ಸ್ತಿತಿ ನಿರ್ಮಾಣವಾಗಿರುವುದರಿಂದ ಮುಂದಿನ 24 ಗಂಟೆಗಳಲ್ಲಿ ಲಕ್ಷದ್ವೀಪ- ಮಾಲ್ದೀವ್ಸ್ ಪ್ರದೇಶದಲ್ಲಿ ವಾಯುಭಾರ ಕುಸಿತವಾಗಲಿದೆ. ಇದರ ಪರಿಣಾಮ ರಾಯಲಸೀಮಾ, ತಮಿಳುನಾಡು, ಪುದುಚೇರಿ, ಕೇರಳ, ದಕ್ಷಿಣ ಕರ್ನಾಟಕದ ಒಳನಾಡಿನಲ್ಲೂ ಭಾರೀ ಮಳೆಯಾಗಲಿದೆ . ಅಕ್ಟೋಬರ್ 31ರ ಬಳಿಕ ಮಳೆಯಬ್ಬರ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪೂರ್ವ ಮಧ್ಯ ಅರಬಿ ಸಮುದ್ರಕ್ಕೆ ಅ.30ರವರೆಗೆ ಹಾಗೂ ಪಶ್ಚಿಮ ಮಧ್ಯ ಅರಬಿ ಸಮುದ್ರಕ್ಕೆ ನವೆಂಬರ್ 2ರವರೆಗೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News