ಯುರೋಪ್ ಸಂಸತ್ತು 29 ಸಂಸದರನ್ನು ಕಾಶ್ಮೀರಕ್ಕೆ ಕಳುಹಿಸಿಲ್ಲ, ಭಾರತ ಆಹ್ವಾನಿಸಲೂ ಇಲ್ಲ!

Update: 2019-10-29 18:31 GMT

#ಹಲವು ಗಂಭೀರ ಪ್ರಶ್ನೆಗಳನ್ನೆತ್ತಿದೆ ಯುರೋಪ್ ಸಂಸದರ ಕಾಶ್ಮೀರ ಭೇಟಿ

ಹೊಸದಿಲ್ಲಿ: ಅಕ್ಟೋಬರ್ 29ರಂದು ಯುರೋಪಿಯನ್ ಸಂಸದರ ನಿಯೋಗವೊಂದು ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಈ ನಿಯೋಗದ ಭಾರತ ಭೇಟಿಗೆ ವ್ಯವಸ್ಥೆಗಳನ್ನು ಮಾಡಿಕೊಟ್ಟಿರುವವರು ಯಾರು ಎನ್ನುವ ಪ್ರಶ್ನೆ ಭುಗಿಲೆದ್ದಿದೆ.

ಈ ಭೇಟಿಯನ್ನು ಯುರೋಪಿಯನ್ ಪಾರ್ಲಿಮೆಂಟ್ ಏರ್ಪಡಿಸಿರಲೂ ಇಲ್ಲ ಮತ್ತು ಭಾರತ ಸರಕಾರವೂ ಈ ನಿಯೋಗವನ್ನು ಆಹ್ವಾನಿಸಿರಲಿಲ್ಲ ಎನ್ನುವುದು ಇದೀಗ ಬಯಲಾಗಿದೆ.  

ಹೆಚ್ಚು ಬಲಪಂಥೀಯರೇ ಇರುವ ಈ ನಿಯೋಗದ ಪ್ರವಾಸವನ್ನು ಇಂಟರ್ ನ್ಯಾಶನಲ್ ಇನ್ ಸ್ಟಿಟ್ಯೂಟ್ ಫಾರ್ ನಾನ್ ಅಲೈನ್ಡ್ ಸ್ಟಡೀಸ್ ಆಯೋಜಿಸಿದೆ ಎಂದು ಬ್ರಿಟನ್ ನ ಲಿಬರಲ್ ಡೆಮಾಕ್ರಟಿಕ್ ಪಕ್ಷದ ಸದಸ್ಯ ಬಿಲ್ ನ್ಯೂಟನ್ ಡನ್ ಮಾಹಿತಿ ನೀಡಿದ್ದಾರೆ.

ಆದರೆ ತಾನು 'ಮೋದಿ ಸರಕಾರಕ್ಕಾಗಿ ಪ್ರಚಾರ ಸ್ಟಂಟ್ ನಲ್ಲಿ ಭಾಗಿಯಾಗುವುದಿಲ್ಲ' ಎಂದು ಹೇಳಿದ್ದ ಈ ನಿಯೋಗದಲ್ಲಿದ್ದ ಮತ್ತೊಬ್ಬ ಸಂಸದ ಕ್ರಿಸ್ ಡೇವೀಸ್ ಅವರು ಟ್ವೀಟ್ ಒಂದನ್ನು ಮಾಡಿದ್ದಾರೆ. ಈ ಟ್ವೀಟ್ ಪ್ರಕಾರ, "ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜೊತೆಗೆ ಪ್ರತಿಷ್ಠಿತ ವಿಐಪಿ ಸಭೆ'ಯ ಭರವಸೆ ಜೊತೆ ಈ 29 ಸಂಸದರನ್ನು ಆಹ್ವಾನಿಸಿದ್ದು ಮದಿ ಶರ್ಮಾ ಎನ್ನುವ ಮಹಿಳೆ.

ಮದಿ ಶರ್ಮಾ ಟ್ವಿಟರ್ ಖಾತೆಯಲ್ಲಿ ತನ್ನನ್ನು 'ಸಾಮಾಜಿಕ ಬಂಡವಾಳಶಾಹಿ, ಅಂತಾರಾಷ್ಟ್ರೀಯ ವ್ಯಾಪಾರ ದಲ್ಲಾಳಿ, ಶಿಕ್ಷಣೋದ್ಯಮಿ' ಎಂದು ಪರಿಚಯಿಸಿಕೊಂಡಿದ್ದಾರೆ. ಆಕೆ ಈ 29 ಮಂದಿಗೆ ಬರೆದ ಪತ್ರದಲ್ಲಿ 3 ದಿನಗಳ ಪ್ರವಾಸದ ಬಗ್ಗೆ ವಿವರಿಸಲಾಗಿದೆ. "ಅಕ್ಟೋಬರ್ 28ರಂದು ಪ್ರಧಾನಿ ಜೊತೆಗೆ ಭೇಟಿ, 29ರಂದು ಕಾಶ್ಮೀರ ಭೇಟಿ ಮತ್ತು 29ರಂದು ಸುದ್ದಿಗೋಷ್ಠಿ" ಎಂದು ಬರೆಯಲಾಗಿದೆ.  'ವಿಮಾನದ ವೆಚ್ಚ ಮತ್ತು ಎಲ್ಲಾ ವ್ಯವಸ್ಥೆಗಳನ್ನು ಇಂಟರ್ ನ್ಯಾಶನಲ್ ಇನ್ ಸ್ಟಿಟ್ಯೂಟ್ ಫಾರ್ ನಾನ್ - ಅಲೈನ್ಡ್ ಸ್ಟಡೀಸ್ ಭರಿಸಲಿದೆ' ಎಂದು ತಿಳಿಸಲಾಗಿದೆ.

ವಿಮೆನ್ಸ್ ಇಕನಾಮಿಕ್ ಆ್ಯಂಡ್ ಸೋಶಿಯಲ್ ತಿಂಕ್ ಟ್ಯಾಂಕ್ ಎನ್ನುವ ಎನ್ ಜಿಒ ಒಂದನ್ನು ತಾನು ನಡೆಸುತ್ತಿದ್ದೇನೆ ಎಂದು ಮದಿ ಶರ್ಮಾ ಹೇಳುತ್ತಾರೆ. ಆದರೆ ಈ ಮಹಿಳೆಗೆ ಸರಕಾರ ಮತ್ತು ಪ್ರಧಾನ ಮಂತ್ರಿ ಕಚೇರಿ ಜೊತೆಗಿನ ನಂಟೇನು ಎನ್ನುವುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ ಎಂದು 'ದ ಹಿಂದೂ' ವರದಿ ತಿಳಿಸಿದೆ.

"ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ನಾನು ಪ್ರತಿಷ್ಠಿತ ವಿಐಪಿ ಸಭೆಯನ್ನು ಆಯೋಜಿಸುತ್ತಿದ್ದೇನೆ. ಈ ಸಭೆಗೆ ನಿಮ್ಮನ್ನು ಆಹ್ವಾನಿಸುತ್ತಿದ್ದೇನೆ. ಭಾರತದ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಭರ್ಜರಿ ಜಯ ಗಳಿಸಿರುವುದು ನಿಮಗೆಲ್ಲಾ ತಿಳಿದಿರಬಹುದು. ಅವರು ಭಾರತ ಮತ್ತು ಅದರ ಜನರ ಅಭಿವೃದ್ಧಿಯ ಯೋಜನೆಯನ್ನು ಮುನ್ನಡೆಸಲು ಬಯಸಿದ್ದಾರೆ. ಅದಕ್ಕಾಗಿ ಯುರೋಪಿಯನ್ ಒಕ್ಕೂಟದ ಪ್ರಭಾವಶಾಲಿ ನಿರ್ಧಾರ ಕೈಗೊಳ್ಳುವವರನ್ನು ಭೇಟಿಯಾಗಲು ಬಯಸಿದ್ದಾರೆ" ಎಂದು ಮದಿ ಶರ್ಮಾ ಈ ಸಂಸದರಿಗೆ ಕಳುಹಿಸಿರುವ ಪತ್ರದಲ್ಲಿ ತಿಳಿಸಲಾಗಿದೆ.

ಈ ಭೇಟಿಯ ಜೊತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಸೋಮವಾರ ಸಚಿವಾಲಯವು ಸ್ಪಷ್ಟಪಡಿಸಿತ್ತು. ಆದರೆ ಈ ಸಂಸದರು ನಂತರ ಪ್ರಧಾನಿ ಮೋದಿ, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾಗಿದ್ದರು. ನಂತರ ಇವರಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಚೇರಿಯಿಂದ ಔತಣಕೂಟ ಏರ್ಪಡಿಸಲಾಗಿತ್ತು ಎಂದು 'ದ ಹಿಂದೂ' ವರದಿ ತಿಳಿಸಿದೆ.

ಇಬ್ಬರು ಸಂಸದರ ಆಹ್ವಾನ ಹಿಂದಕ್ಕೆ

ಯುರೋಪಿಯನ್ ಸಂಸದರ ಕಾಶ್ಮೀರ ಭೇಟಿ ವಿಚಾರದಲ್ಲಿನ ಮತ್ತೊಂದು ವಿವಾದವೆಂದರೆ 'ತಮಗೆ ನೀಡಲಾಗಿದ್ದ ಆಹ್ವಾನವನ್ನು ವಾಪಸ್ ಪಡೆಯಲಾಗಿದೆ' ಎಂದು ಲಿಬರಲ್ ಡೆಮಾಕ್ರಟ್ ಪಕ್ಷದ ಇಬ್ಬರು ಸಂಸದರು ಆರೋಪಿಸಿರುವುದು. ಕಾಶ್ಮೀರಿ ಜನರೊಂದಿಗೆ ಮುಕ್ತವಾಗಿ ಮಾತನಾಡಬೇಕು ಎಂದು ಬೇಡಿಕೆಯಿರಿಸಿದ ನಂತರ ತಮಗೆ ನೀಡಿದ್ದ ಆಹ್ವಾನವನ್ನು ರದ್ದುಗೊಳಿಸಲಾಗಿದೆ ಎಂದು ಸಂಸದರೊಬ್ಬರು ಆರೋಪಿಸಿದ್ದಾರೆ.

'ಈ ಎಲ್ಲಾ ಸಂಸದರಿಗೆ ಭದ್ರತೆ ನೀಡುವುದು ತನ್ನ ಜವಾಬ್ದಾರಿ' ಎಂದು ಮದಿ ಶರ್ಮಾ ಹೇಳಿದ್ದಾಗಿ ಸಂಸದರೊಬ್ಬರು ಹೇಳಿದ್ದಾರೆ. ಆದರೆ ಯಾರ ಸಂಸದರಿಗೆ ಭದ್ರತೆ ನೀಡುವ ವಿಚಾರದಲ್ಲಿ ಮದಿ ಶರ್ಮಾ ಹೇಗೆ ಭರವಸೆ ನೀಡಿದರು ಎನ್ನುವುದಕ್ಕೂ ಇನ್ನೂ ಉತ್ತರ ಸಿಕ್ಕಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News