ಐರೋಪ್ಯ ಒಕ್ಕೂಟದ ನಿಯೋಗಕ್ಕೆ ಜಮ್ಮುಕಾಶ್ಮೀರ ಭೇಟಿಗೆ ಅವಕಾಶ: ಕೇಂದ್ರ ಸರಕಾರದ ನಿರ್ಧಾರ ಪ್ರಶ್ನಿಸಿದ ಶಿವಸೇನೆ

Update: 2019-10-30 14:16 GMT

ಮುಂಬೈ, ಅ. 30: ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡುವ ವಿಧಿ 370ನ್ನು ರದ್ದುಗೊಳಿಸಿದ ಬಳಿಕ ಪರಿಸ್ಥಿತಿ ಅವಲೋಕಿಸಲು ಕಾಶ್ಮೀರಕ್ಕೆ ಐರೋಪ್ಯ ಸಂಸತ್‌ನ ಸದಸ್ಯರ ನಿಯೋಗ ಭೇಟಿ ನೀಡಲು ಅವಕಾಶ ನೀಡಿದ ಕೇಂದ್ರ ಸರಕಾರದ ನಿರ್ಧಾರವನ್ನು ಶಿವಸೇನೆ ಬುಧವಾರ ಪ್ರಶ್ನಿಸಿದೆ.

ತನ್ನ ಮುಖವಾಣಿ ‘ಸಾಮ್ನಾ’ದಲ್ಲಿ ಶಿವಸೇನೆ, ‘‘ಜಮ್ಮು ಹಾಗೂ ಕಾಶ್ಮೀರದಲ್ಲಿ ಎಲ್ಲವೂ ಸಹಜ ಸ್ಥಿತಿಯಲ್ಲಿರುವಾಗ ಐರೋಪ್ಯ ಒಕ್ಕೂಟದ ನಿಯೋಗದ ಭೇಟಿಗೆ ಅವಕಾಶ ನೀಡುವ ಅಗತ್ಯವಾದರೂ ಏನು ? ಕಾಶ್ಮೀರ ಅಂತಾರಾಷ್ಟ್ರೀಯ ವಿಷಯ ಅಲ್ಲವಲ್ಲ’’ ಎಂದಿದೆ. ಕಾಶ್ಮೀರ ವಿಷಯದಲ್ಲಿ ವಿಶ್ವಸಂಸ್ಥೆ ಮಧ್ಯೆ ಪ್ರವೇಶಿಸುವುದನ್ನು ನಿರಾಕರಿಸಿದ ಕೇಂದ್ರ ಸರಕಾರ ಐರೋಪ್ಯ ಒಕ್ಕೂಟದ ನಿಯೋಗ ರಾಜ್ಯಕ್ಕೆ ಭೇಟಿ ನೀಡಲು ಅವಕಾಶ ನೀಡಿರುವುದು ಯಾಕೆ ?  ಐರೋಪ್ಯ ಒಕ್ಕೂಟ ಇದನ್ನು ಪರಿಶೀಲಿಸುತ್ತಿರುವುದು ಭಾರತದ ಸ್ವಾತಂತ್ರದ ಮೇಲಿನ ದಾಳಿಯಲ್ಲವೇ ? ಎಂದು ಸಂಪಾದಕೀಯ ಪ್ರಶ್ನಿಸಿದೆ.

ಭಾರತದ ರಾಜಕಾರಣಿಗಳಿಗೆ ಕಾಶ್ಮೀರಕ್ಕೆ ಭೇಟಿ ನೀಡಲು ಈಗಲೂ ಅವಕಾಶ ನೀಡುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಲು ಐರೋಪ್ಯ ಒಕ್ಕೂಟದ ನಿಯೋಗಕ್ಕೆ ಯಾಕೆ ಅವಕಾಶ ನೀಡಲಾಯಿತು ಎಂಬ ಪ್ರಶ್ನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರ ನೀಡಬೇಕು ಎಂದು ಶಿವಸೇನೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News