ದಿಲ್ಲಿ: ಕುಸಿಯುತ್ತಿರುವ ಗಾಳಿಯ ಗುಣಮಟ್ಟ; ಮಾಸ್ಕ್ ಧರಿಸುವಂತೆ ವಿದ್ಯಾರ್ಥಿಗಳಿಗೆ ಸಲಹೆ

Update: 2019-10-30 16:23 GMT

ಹೊಸದಿಲ್ಲಿ, ಅ.30: ದಿಲ್ಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಗಾಳಿಯ ಗುಣಮಟ್ಟ ನಿರಂತರ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಮಾಸ್ಕ್(ಮುಖ ಕವಚ) ತೊಡಿಸಿ ಶಾಲೆಗೆ ಕಳುಹಿಸುವಂತೆ ಆಡಳಿತ ವರ್ಗ ಪೋಷಕರಿಗೆ ಸಲಹೆ ನೀಡಿದೆ.

ದಿಲ್ಲಿ- ಎನ್‌ಸಿಆರ್ (ರಾಷ್ಟ್ರೀಯ ರಾಜಧಾನಿ ಪ್ರದೇಶ) ನಲ್ಲಿ ವಾಯು ಗುಣಮಟ್ಟ ತೀವ್ರ ಕಳಪೆ ಮಟ್ಟಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ಹೊರಾಂಗಣ ಚಟುವಟಿಕೆಗಳನ್ನು ಒಳಾಂಗಣಕ್ಕೆ ಸ್ಥಳಾಂತರಿಸುವಂತೆ ಸೂಚಿಸಲಾಗಿದೆ.

ದೀಪಾವಳಿ ರಜೆ ಕಳೆದು ಬುಧವಾರ ಶಾಲಾ ಕಾಲೇಜು ಪುನರಾರಂಭಗೊಂಡಿದ್ದು, ವಿದ್ಯಾರ್ಥಿಗಳಿಗೆ ಮುಖಕವಚ ತೊಡಿಸಿ ಶಾಲೆಗೆ ಕಳುಹಿಸುವಂತೆ ಪೋಷಕರಿಗೆ ಸಲಹಾ ಪತ್ರ ರವಾನಿಸಲಾಗಿದೆ ಎಂದು ಗುರ್ಗಾಂವ್‌ನ ಶಾಲೆಯೊಂದರ ಪ್ರಾಂಶುಪಾಲರು ಹೇಳಿದ್ದಾರೆ. ಶಾಲೆಯ ಮೈದಾನದಲ್ಲಿ ಬೆಳಿಗ್ಗೆ ನಡೆಯುವ ಪ್ರಾರ್ಥನೆಯನ್ನು ಒಳಾಂಗಣಕ್ಕೆ ಸ್ಥಳಾಂತರಿಸಲಾಗಿದೆ. ಶಾಲೆಗೆ ಮಾತ್ರವಲ್ಲ, ಮಕ್ಕಳು ಮನೆಬಿಟ್ಟು ಹೊರಗೆ ಹೋಗುವಾಗ ಮುಖಕವಚ ಧರಿಸುವುದು ಸೂಕ್ತ ಎಂದು ಅವರು ಹೇಳಿದ್ದಾರೆ.

ಅಂಗವೈಕಲ್ಯ ಇರುವ ಮಕ್ಕಳು ಹಾಗೂ ಉಸಿರಾಟದ ಸಮಸ್ಯೆ ಇರುವ ಮಕ್ಕಳಿಗೆ ವಿಶೇಷ ರಜೆಯ ಸೌಲಭ್ಯ ನೀಡಲಾಗಿದೆ. ಪರಿಸರದ ವಾಯುಮಾಲಿನ್ಯದ ಮಟ್ಟವನ್ನು ಪರಿಗಣಿಸಿ ಕ್ರೀಡಾ ಸ್ಪರ್ಧೆ ಮತ್ತಿತರ ಚಟುವಟಿಕೆಗಳನ್ನು ನಡೆಸುವಂತೆ ತಿಳಿಸಲಾಗಿದೆ. ಮಧ್ಯಾಹ್ನ ನಡೆಯುವ ಕ್ರೀಡಾಸ್ಪರ್ಧೆಗೆ ಬೆಳಿಗ್ಗಿನ ಅವಧಿಯಲ್ಲಿ ನಡೆಯುವ ತರಬೇತಿ ರದ್ದಾದರೆ ಆ ಕುರಿತು ಪೋಷಕರಿಗೆ ಮಾಹಿತಿ ನೀಡಲಾಗುತ್ತಿದೆ ಎಂದು ಹೆರಿಟೇಜ್ ಎಕ್ಸ್‌ಪೀರಿಯಂಟಲ್ ಲರ್ನಿಂಗ್ ಸ್ಕೂಲ್‌ನ ಪ್ರಾಂಶುಪಾಲೆ ನೀನಾ ಕೌಲ್ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News