ಕಿರುತೆರೆಗೆ ಬಂದ ರಾಮಾಚಾರಿ !

Update: 2019-10-31 13:30 GMT

ಅಪ್ಪ ಮಾಡಿದ ಪಾತ್ರವನ್ನೇ ಮಗ ಕೂಡ ನಿರ್ವಹಿಸುವುದು ದೃಶ್ಯ ಮಾಧ್ಯಮದಲ್ಲಿ ಅಪರೂಪ. ಅದರಲ್ಲೂ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಪ್ರಮುಖ ಚಿತ್ರವೆಂದು ಚಲನಚಿತ್ರಕಾರರು ಗುರುತಿಸುವ ’ನಾಗರಹಾವು’ ಸಿನಿಮಾದ ಪ್ರಸಿದ್ಧ ’ಚಾಮಯ್ಯ ಮೇಷ್ಟ್ರು’ ಪಾತ್ರವನ್ನು ಈಗ ಮತ್ತೆ ನಿರ್ವಹಿಸುವುದು ಸವಾಲಿನ ಕೆಲಸ.

ಹೌದು 1972ರಲ್ಲಿ ಬಿಡುಗಡೆಯಾದ ನಾಗರಹಾವು ಸಿನಿಮಾದಲ್ಲಿ ಚಾಮಯ್ಯ ಮೇಷ್ಟ್ರು ಪಾತ್ರವನ್ನು ನಿಭಾಯಿಸಿದ್ದ ಕೆ.ಎಸ್‌. ಅಶ್ವತ್ಥ್‌ ಅವರು ಕನ್ನಡಿಗರ ಮನ ಗೆದ್ದಿದ್ದರು. ಈಗ ’ಕಲರ್ಸ್‌ ಸೂಪರ್‌’ ವಾಹಿನಿಯಲ್ಲಿ ಪ್ರಸಾರವಾಗಿ ಜನಮನ ಗೆದ್ದಿರುವ ’ಮಾಂಗಲ್ಯಂ ತಂತುನಾನೇನ’ ಧಾರವಾಹಿಯಲ್ಲಿ ಕೆ. ಎಸ್. ಅಶ್ವಥ್‌ ಪುತ್ರ ಶಂಕರ್ ಅಶ್ವಥ್ ಚಾಮಯ್ಯ ಮೇಷ್ಟ್ರಾಗಿ ಕಾಣಿಸಿಕೊಳ್ಳಲಿದ್ದಾರೆ!

ಮೇಷ್ಟರಿದ್ದಮೇಲೆ ಶಿಷ್ಯ ರಾಮಾಚಾರಿ ಇರಲೇಬೇಕಲ್ಲವೇ? ಈ ಧಾರವಾಹಿಯ ನಾಯಕ ತೇಜಸ್ವಿಯೇ ಇಲ್ಲಿ ಭುಸುಗುಡುವ ನಾಗರಹಾವು. ನಾಯಕಿ ಶ್ರಾವಣಿಯದ್ದು ಇಲ್ಲಿ ದ್ವಿಪಾತ್ರ. ರಾಮಾಚಾರಿ ಪ್ರೀತಿಸುವ ಮಾರ್ಗರೇಟ್ ಮತ್ತು ಅಲಮೇಲು ಈ ಎರಡೂ ಪಾತ್ರಗಳನ್ನು ಮಾಂಗಲ್ಯಂ ತಂತುನಾನೇದ ನಾಯಕಿ ಶ್ರಾವಣಿ ನಿರ್ವಹಿಸಲಿದ್ದಾರೆ.

ತ.ರಾ.ಸು ಅವರ ಕಾದಂಬರಿ ಆಧರಿಸಿ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದ ಈ ಕ್ಲಾಸಿಕ್ ಅನ್ನು ಆಯ್ದ ಭಾಗಗಳ ಮೂಲಕ ಕಿರುತೆರೆಯಲ್ಲಿ ಮರುಸೃಷ್ಟಿ ಮಾಡುವ ಹೊಚ್ಚ ಹೊಸ ಪ್ರಯತ್ನವನ್ನು ಕಲರ್ಸ್‌ ಸೂಪರ್ ವಾಹಿನಿ ಮಾಡುತ್ತಿದೆ. ಧಾರವಾಹಿಯ ಕತೆಯಲ್ಲಿ ಚರಿತ್ರೆಯನ್ನು ಬೋಧಿಸುವ ಲೆಕ್ಚರರ್‌ ಆಗಿ ಶ್ರಾವಣಿ ಇರುತ್ತಾಳೆ. ವಿದ್ಯಾರ್ಥಿಯಾಗಿ ನಾಯಕ ಇರುತ್ತಾನೆ. ಈ ಸಂದರ್ಭದಲ್ಲಿ ನಾಗರಹಾವು ಚಿತ್ರದ ಮರುಸೃಷ್ಟಿಯ ಸನ್ನಿವೇಶ ಬರುತ್ತದೆ.

ನಾಗರಹಾವು ಚಿತ್ರದ ಅಮರಗೀತೆಗಳಾದ ಬಾರೆ ಬಾರೆ, ಕನ್ನಡ ನಾಡಿನ ವೀರರಮಣಿಯ ಮತ್ತು ಕರ್ಪೂರದ ಗೊಂಬೆ ನಾನು ಹಾಡುಗಳಿಗೆ ಈ ತಂಡ ಮರುರೂಪ ಕೊಟ್ಟಿರುವುದು ಆಸಕ್ತಿಕರ.

ಒಂದು ಅಪೂರ್ವ ಕ್ಲಾಸಿಕ್ ಅನ್ನು ಅದರಲ್ಲೂ ಕನ್ನಡ ಚಲನಚಿತ್ರ ರಂಗದ ಮೈಲುಗಲ್ಲನ್ನು ಕಿರುತೆರೆಯಲ್ಲಿ ಮರುಸೃಷ್ಟಿ ಮಾಡುವುದು ಅತಿಕಷ್ಟ. ಆದರೆ ಕನ್ನಡದ ಮೇರುಕೃತಿಯನ್ನು ಮರಳಿ ಕನ್ನಡಿಗರ ಮನೆಮನೆಗೆ ತಲುಪಿಸುವ ಹೃತ್ಪೂರ್ವಕ ಪ್ರಯತ್ನಿವಿದು ಎನ್ನುತ್ತದೆ ಕಲಸ್‌ ಸೂಪರ್‌ ವಾಹಿನಿ. ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ಪುಟ್ಟಣ್ಣ ಕಣಗಾಲ್ ಅವರಿಗೆ ಇದು ಮಾಂಗಲ್ಯಮ್ ತಂತು ನಾನೇನಾದ ಪುಟ್ಟ ಗೌರವದ ಕಾಣಿಕೆ. ಕನ್ನಡ ರಾಜ್ಯೋತ್ಸವಕ್ಕೆ ವಿಶೇಷ ಕೊಡುಗೆ.

’ರಾಮಾಚಾರಿ ಇನ್ ಲವ್’ ಶೀರ್ಷಿಕೆಯಲ್ಲಿ ಇದೇ ಮಂಗಳವಾರ (ನವೆಂಬರ್ ೫ ರಿಂದ) ಪ್ರತಿ ರಾತ್ರಿ ೭.೩೦ಕ್ಕೆ ಮಾಂಗಲ್ಯಂ ತಂತುನಾನೇನ ಪ್ರಸಾರವಾಗಲಿದ್ದು ವೀಕ್ಷಕರಿಗೆ ಮನರಂಜನೆಯ ಹಬ್ಬ ಖಚಿತವೆನ್ನುತ್ತದೆ ’ಕಲರ್ಸ್‌ ಸೂಪರ್’ ವಾಹಿನಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News