ಟಿಪ್ಪು ಹಿರಿಮೆಯನ್ನು ಹೇಳುವ 'ಜನಪದ ಲಾವಣಿಗಳು'

Update: 2019-11-02 05:54 GMT

ಮೈಸೂರು ಅರಮನೆಯನ್ನು ನೋಡುವಾಗ, ಚರಿತ್ರೆಯ ಎರಡು ವಿರುದ್ಧ ಸಂಗತಿಗಳು ಒಂದೇ ಕಡೆ ನೆಲೆಸಿರುವ ವಿಚಿತ್ರ ಅನುಭವವಾಗುತ್ತದೆ. ಈ ವೈರುಧ್ಯ ಉಂಟಾಗಿರುವುದು ಟಿಪ್ಪುವಿನ ಖಡ್ಗ ಹಾಗೂ ಅರಮನೆಯ ಗೋಡೆಗಳಲ್ಲಿರುವ ಭಿತ್ತಿಚಿತ್ರಗಳಿಂದ. ದರ್ಬಾರ್ ಸಭೆ, ಪಟ್ಟಾಭಿಷೇಕ ಉತ್ಸವ, ದಸರಾ, ಮದುವೆ, ರಾಜಕುವರರ ಹುಟ್ಟಿದಹಬ್ಬ ಇತ್ಯಾದಿ ಉತ್ಸವ ಮತ್ತು ಕಾರ್ಯಕ್ರಮಗಳಲ್ಲಿ, ಒಡೆಯರ ಜತೆ ಬ್ರಿಟಿಷ್ ಅಧಿಕಾರಿಗಳು ಕಾಲಮೇಲೆ ಕಾಲು ಹಾಕಿ ಸುಖಾಸೀನವಾಗಿ ಕುಳಿತಿರುವುದನ್ನು ಈ ವರ್ಣಚಿತ್ರಗಳು ಕಾಣಿಸುತ್ತವೆ.

ಒಂದೆಡೆ, ಬ್ರಿಟಿಷರ ಜತೆ, ಅವರು ದಯಪಾಲಿಸಿದ ಜೆಸಿಇಸಿ ಇತ್ಯಾದಿ ಬಿರುದುಗಳನ್ನು ಧರಿಸಿ, ವಿರಾಜಮಾನರಾಗಿ ಕುಳಿತಿರುವ ಒಡೆಯರ ಚಿತ್ರ; ಇನ್ನೊಂದೆಡೆ, ತಾನು ಸೋಲುವ ಮತ್ತು ಸಾಯುವ ಅರಿವಿದ್ದರೂ ಶರಣಾಗದೆ, ಮೈಸೂರು ರಾಜ್ಯವನ್ನು ಉಳಿಸಿಕೊಳ್ಳಲು ಸ್ವಾಭಿಮಾನದಿಂದ ರಣರಂಗದಲ್ಲಿ ಹೋರಾಡಿ, ಶ್ರೀರಂಗಪಟ್ಟಣದ ಬೀದಿಯಲ್ಲಿ ಪ್ರಾಣಬಿಟ್ಟ ಟಿಪ್ಪುವಿನ ಕೊನೆಯ ದಿನದ ರೂಪಕವಾಗಿರುವ ಖಡ್ಗದ ಚಿತ್ರ.

ತುಸುವೇ ರಾಜಿ ಮಾಡಿಕೊಂಡಿದ್ದರೆ, ಟಿಪ್ಪುಕೂಡ ತಿರುವಾಂಕೂರು, ಹೈದರಾಬಾದ್, ಅವಧ್, ಪೇಶ್ವೆ ಮುಂತಾದ ಸಂಸ್ಥಾನಿಕರಂತೆ, ಬ್ರಿಟಿಷರ ಜೊತೆ ‘ಗೌರವಾನ್ವಿತ ಒಪ್ಪಂದ’ ಮಾಡಿಕೊಂಡು, ‘ಸ್ವತಂತ್ರ’ ರಾಜನಾಗಿರಬಹುದಿತ್ತು. ಇಲ್ಲವೆ ಸವಣೂರಿನ ನವಾಬನಂತೆ ಪೆನ್ಶನ್ ಪಡೆದು ಬದುಕಿರಬಹುದಿತ್ತು.

ಟಿಪ್ಪುವನ್ನು ಕೊಂದ ಬಳಿಕ ಮೈಸೂರು ರಾಜ್ಯವನ್ನು ವಶಪಡಿಸಿಕೊಂಡ ಬ್ರಿಟಿಷರು, ಒಡೆಯರನ್ನು ಹೀನಾಯವಾಗಿ ನಡೆಯಿಸಿಕೊಂಡರು. ಕೆಲವು ಕಾಲ ಮುಮ್ಮಡಿಯನ್ನು ಸಿಂಹಾಸನದ ಮೇಲೆ ಕೂರಿಸಿದರೂ, ಏನೊ ನೆಪತೆಗೆದು (1831) ಕೆಳಗಿಳಿಸಿದರು. ಮುಂದಿನ 50 ವರ್ಷಗಳಕಾಲ ನಿಜವಾದ ಅಧಿಕಾರ ಬ್ರಿಟಿಷ್ ಕಮಿಶನರ್‌ಗಳ ಕೈಯಲ್ಲಿತ್ತು. ಅದರಲ್ಲೂ ಹಿಂದುಳಿದ ಜಾತಿಗಳಿಗೆ ಅವರು ಜಾರಿತಂದ ಮೀಸಲಾತಿಯ ದೃಷ್ಟಿಯಿಂದ ಅವರ ಕಾರ್ಯವನ್ನು ಬಹಳ ಗೌರವದಿಂದ ದಾಖಲಿಸಬೇಕಿದೆ. ಆದರೆ, ಒಡೆಯರು ಬ್ರಿಟಿಷರ ವಿರುದ್ಧ ಯಾವುದೇ ರಾಷ್ಟ್ರೀಯ ಹೋರಾಟವೂ ಮೈಸೂರು ಸೀಮೆಯಲ್ಲಿ ಏಳದಂತೆ ದಮನಿಸುವ ಕೆಲಸವನ್ನೂ ಮಾಡಬೇಕಾಯಿತು. ವಸಾಹತುಶಾಹಿಶಾಹಿ ವಿರೋಧಿಗಳಾಗಿದ್ದ ಸ್ವಾಮಿ ಅಪರಂಪಾರ, ಧೋಂಡಿಯಾವಾಘ್, ತರೀಕೆರೆಯ ಸರ್ಜಾ ರಂಗಪ್ಪನಾಯಕ, ಹನುಮಪ್ಪನಾಯಕ ಇವರೆಲ್ಲರನ್ನೂ ಅವರು ಕೊಂದರು. 1942ರ ಕ್ವಿಟ್ ಇಂಡಿಯಾ ಚಳುವಳಿ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಈಸೂರಿನಲ್ಲಿ ನಡೆದ ಹೋರಾಟದಲ್ಲಿ ಭಾಗಿಯಾದ 5 ಜನ ಹೋರಾಟಗಾರರು, ಜೀವದಾನ ಮಾಡಬೇಕೆಂದು ಅಪೀಲು ಸಲ್ಲಿಸಿದಾಗ, ಮೈಸೂರು ಅವರು ಕ್ಷಮಾದಾನ ಮಾಡಲಿಲ್ಲ. ಹಾಗೆ ಮಾಡುವುದು ಅವರ ಕೈಯಲ್ಲೂ ಇರಲಿಲ್ಲ.

ಕುತೂಹಲಕರವೆಂದರೆ, ಕರ್ನಾಟಕದ ಚರಿತ್ರೆಕಾರರು ಟಿಪ್ಪು ಹಾಗೂ ಮೈಸೂರು ಒಡೆಯರನ್ನು ಚಿತ್ರಿಸುವ ವಿಧಾನದಲ್ಲಿರುವ ತಾರತಮ್ಯ. ಬ್ರಿಟಿಷರು ಟಿಪ್ಪುವನ್ನು ‘ಕ್ರೂರಿ’ ಎಂದೂ, ಬಲಾತ್ಕಾರ ಮತಾಂತರ ಮಾಡಿಸಿದ ಮತಾಂಧನೆಂದೂ, ಮೈಸೂರರಸರ ಅಧಿಕಾರ ಕಿತ್ತುಕೊಂಡ ವಂಚಕನ ಮಗನೆಂದೂ ಯಾಕೆ ಚಿತ್ರಿಸಿದರು ಎಂಬುದು ಸುಲಭವಾಗಿ ಅರ್ಥವಾಗುತ್ತದೆ.

ಹೈದರ್ ಮತ್ತು ಟಿಪ್ಪು ಕುರಿತ ಅವರ ತಿರಸ್ಕಾರ ಎಂಥದ್ದೆಂದರೆ, ಕಡ್ಡಾಯವಾಗಿ ಮೈಸೂರು ಒಡೆಯರ ಬಗ್ಗೆ ಬಹುವಚನವನ್ನೂ, ಅಪ್ಪಮಕ್ಕಳಿಬ್ಬರಿಗೂ ಏಕವಚನವನ್ನೂ ಬಳಸುತ್ತಾರೆ; ಹೈದರನು ‘ಹಿಂದೂ’ ದೊರೆಗಳಿಂದ (ವಾಸ್ತವವಾಗಿ ದುರ್ಬಲರಾಗಿದ್ದ ಒಡೆಯರನ್ನು ಪಕ್ಕತಳ್ಳಿ ಆಳ್ವಿಕೆ ಮಾಡುತ್ತಿದ್ದ ದಳವಾಯಿಗಳಿಂದ) ಅಧಿಕಾರವನ್ನು ಕಸಿದುಕೊಂಡು ‘ಮುಸ್ಲಿಂ’ ಆಡಳಿತವನ್ನು ಆರಂಭಿಸಿದ ‘ಸರ್ವಾಧಿಕಾರಿ’ ಎಂದು ಬರೆಯುತ್ತಾರೆ. ಇತಿಹಾಸಕಾರರು, ಟಿಪ್ಪುನಂತರ ‘ಹಿಂದೂ’ ದೊರೆಗಳಾದ ಮೈಸೂರು ಒಡೆಯರನ್ನು ಬ್ರಿಟಿಷರು ನಡೆಸಿಕೊಂಡ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎನ್ನುವುದು ಕುತೂಹಲ ಹುಟ್ಟಿಸುತ್ತದೆ. ಒಡೆಯರನ್ನು ಬ್ರಿಟಿಷರು ಎಷ್ಟು ನಿಕೃಷ್ಟವಾಗಿ ನಡೆದುಕೊಂಡರು ಎಂಬುದಕ್ಕೆ ಅವರು ಚಾಮರಾಜ ಒಡೆಯರನ್ನು ಪಟ್ಟಕ್ಕೆ ತರುವಾಗ (1881) ಮಾಡಿಕೊಂಡ ಕರಾರು ಒಪ್ಪಂದದ ಕಲಮುಗಳೇ ಸಾಕ್ಷಿ.

ಚರಿತ್ರೆಯ ಮಾನವೀಕರಣದಲ್ಲಿ ಕರ್ನಾಟಕ ಜಾನಪದ ಮನಸ್ಸಿನ ಪಾತ್ರ ವಿಶೇಷವಾದುದು. ಟಿಪ್ಪುವಿನ ಮೇಲೆ ಬಂದ ಲಾವಣಿಗಳನ್ನು ಗಮನಿಸಬೇಕು. ಟಿಪ್ಪುವನ್ನು ಕೊಂದ (1799) ಕೆಲವೇ ವರ್ಷಗಳಲ್ಲಿ ಮೈಸೂರು ಸೀಮೆಯಲ್ಲಿ ಲಾವಣಿಗಳು ಹುಟ್ಟಿಕೊಂಡಿದ್ದವು. ಅಲ್ಲಿಂದ ಮುಂದೆ ಅನೇಕ ಲಾವಣಿಗಳು ಕರ್ನಾಟಕದ ತುಂಬಾ ಹುಟ್ಟಿಕೊಂಡವು. ಜಾನಪದ ಮನಸ್ಸು ಚರಿತ್ರೆಯನ್ನು ನಿಷ್ಠುರ ರಾಜಕೀಯ ಪ್ರಜ್ಞೆಯಲ್ಲಿ ಗ್ರಹಿಸುವುದಿಲ್ಲ. ಬದಲಿಗೆ ಮನುಷ್ಯ ಸ್ವಭಾವದ ಗುಣ ದೋಷಗಳಲ್ಲಿ, ನೈತಿಕತೆಯಲ್ಲಿ ಗ್ರಹಿಸುತ್ತದೆ. ಆದರೆ ಅದು ಶಕ್ತಿಶಾಲಿ ವ್ಯವಸ್ಥೆಯೊಂದರ ವಿರುದ್ಧ ಹೋರಾಡುವ ದುರ್ಬಲರ ಸೋಲು ನೋವು ಹಾಗೂ ಸಾವುಗಳ ಜತೆಯಲ್ಲಿ ಸದಾ ಇರುತ್ತದೆ; ಅವರ ಮಾನವೀಯ ಸಂಕಟಗಳನ್ನು ಆಪ್ತವಾಗಿ ಚಿತ್ರಿಸುತ್ತದೆ. ಕೋಮುವಾದಿ ಚರಿತ್ರೆ ತಳೆಯಲಾಗದ ನಿಲುವನ್ನು ಅದು ತಳೆಯುತ್ತದೆ.

ಇಲ್ಲೇ ಕೇಳಿಕೊಳ್ಳಬೇಕಾದ ಪ್ರಶ್ನೆಯೆಂದರೆ, ಚರಿತ್ರೆಕಾರರು ಹೆಮ್ಮೆಯಿಂದ ವರ್ಣಿಸುವ ಕರ್ನಾಟಕವನ್ನು ಆಳಿದ ಸುಪ್ರಸಿದ್ಧ ದೊರೆಗಳನ್ನು ಕುರಿತು ಜನ ಹಾಡು ಕಟ್ಟಲಿಲ್ಲ? ಯಾಕೆ ಕಂಪಿಲಿಯ ಕುಮಾರರಾಮ, ಪಿರಿಯಾಪಟ್ಟಣದ ವೀರರಾಜ, ಟಿಪ್ಪು, ಸುರಪುರದ ವೆಂಕಟಪ್ಪನಾಯಕ, ಚಿತ್ರದುರ್ಗದ ಮದಕರಿ ನಾಯಕ, ಸಂಗೊಳ್ಳಿ ರಾಯಣ್ಣ, ತರೀಕೆರೆಯ ಸರ್ಜಾ ಹನುಮಪ್ಪನಾಯಕ, ಕಿತ್ತೂರ ಚೆನ್ನಮ್ಮ, ಮುಂಡರಗಿ ಭೀಮರಾಯ, ಮೈಲಾರದ ಮಹದೇವಪ್ಪ, ಕನ್ನೇಶ್ವರದ ರಾಮ- ಮುಂತಾದ ಕೆಲವೇ ಚಾರಿತ್ರಿಕ ವ್ಯಕ್ತಿಗಳನ್ನು ಅದು ತನ್ನ ಸಾಂಸ್ಕೃತಿಕ ವೀರರನ್ನಾಗಿ ಸ್ವೀಕರಿಸಿತು? ಜಾನಪದವು ಒಬ್ಬ ವ್ಯಕ್ತಿಯನ್ನು ತಮ್ಮ ಹಾಡಿನ ನಾಯಕನಾಗಿ ಆಯ್ದುಕೊಳ್ಳಲು ಮುಖ್ಯವಾಗಿ ಎರಡು ಮಾನದಂಡಗಳನ್ನು ಇಟ್ಟುಕೊಂಡಂತೆ ಕಾಣುತ್ತದೆ. 1. ಸಾಮಾನ್ಯ ವ್ಯಕ್ತಿ ಅಸಾಮಾನ್ಯ ಸಾಹಸ-ಸಾಮರ್ಥ್ಯ ತೋರಿ ದೊಡ್ಡದಾಗಿ ಬೆಳೆಯುವುದು. ಜನಪದ ಕಥೆಗಳ ನಾಯಕರು ಕಡ್ಡಾಯವಾಗಿ ಇಂಥವರು. 2. ಬೃಹತ್ ಶಕ್ತಿಯೊಂದನ್ನು ಧೈರ್ಯದಿಂದ ಮುಖಾಮುಖಿ ಮಾಡುವುದು. ಸಂಘರ್ಷದ ಬಳಿಕ ಸೋಲುವುದು ಅಥವಾ ಸಾಯುವುದು. ಟಿಪ್ಪುವನ್ನೊಳಗೊಂಡಂತೆ ಮೇಲೆ ಉಲ್ಲೇಖಿಸಿದ ಸಾಂಸ್ಕೃತಿಕ ಮತ್ತು ಚಾರಿತ್ರಿಕ ನಾಯಕರು ಹೀಗೆ ಹೋರಾಡಿ ಹುತಾತ್ಮರಾದವರು.

ಯಾಕೆ ಕೃಷ್ಣದೇವರಾಯ ಅಥವಾ ಕಂಠೀರವ ನರಸರಾಯರ ಬಗ್ಗೆ ಲಾವಣಿ ಇಲ್ಲ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿ ತಾನೇ ಸ್ಪಷ್ಟವಾಗಿದೆ. ದೊಡ್ಡಶಕ್ತಿಯಾಗಿ ದುರ್ಬಲರನ್ನು ಹೊಸಕಿ ಹಾಕಿದವರು ಅಥವಾ ದೊಡ್ಡ ಶಕ್ತಿಯ ಜೊತೆಯ ರಾಜಿ ಮಾಡಿಕೊಂಡು ನಿರುಮ್ಮಳವಾಗಿ ಇದ್ದವರು, ಜನಪದರ ನಾಯಕರಾಗಲಿಲ್ಲ. ಬದಲಿಗೆ ತಮ್ಮ ಆಸ್ಥಾನ ಕವಿಗಳು ಬರೆದ ಕಾವ್ಯಗಳ ನಾಯಕರಾದರು, ಇಲ್ಲವೇ ಅರಮನೆಯ ಕಲಾವಿದರು ರಚಿಸಿದ ಭಿತ್ತಿಚಿತ್ರಗಳಿಗೆ ರೂಪದರ್ಶಿಗಳಾದರು. ಮೈಸೂರು ಅರಮನೆಯಲ್ಲಿರುವ ಭಿತ್ತಿಚಿತ್ರಗಳು ಇಂತಹವು.

ಬ್ರಿಟಿಷರು ಟಿಪ್ಪುವನ್ನು ಕೊಂದು ಮೈಸೂರು ರಾಜ್ಯ ವಶಪಡಿಸಿಕೊಂಡ ದಿನದಿಂದ ಈ ದೇಶ ಬಿಟ್ಟುಹೋಗುವ ತನಕ, ಬ್ರಿಟಿಷರ ವಿರುದ್ಧ ಹೋರಾಡಿದ ನಾಯಕರ ಸಂಕಟಗಳನ್ನು ಎದೆ ಬಿರಿಯುವಂತೆ ವರ್ಣಿಸುತ್ತಾ ಜನರ ನಡುವಿದ್ದ ಈ ಲಾವಣಿಗಳು, ಮೂಡಿಸಿರಬಹುದಾದ ರಾಜಕೀಯ ಪ್ರತಿರೋಧ ಎಂಥದ್ದಿರಬಹುದು? ಚರಿತ್ರೆಯನ್ನು ವರ್ತಮಾನದ ರಾಜಕೀಯ ಕ್ರಿಯೆಗಳಿಗೆ ಪ್ರೇರಣೆಯಾಗಿಸಿಕೊಳ್ಳುವ ಸಮುದಾಯದ ಪ್ರತಿಭೆಯ ಸ್ವರೂಪ ಎಂತಹುದ್ದು? ಇದನ್ನೆಲ್ಲ ಸರಳೀಕರಿಸದೆ ನೋಡಲು ಸಾಧ್ಯವಾಗಬೇಕಿದೆ. ಟಿಪ್ಪು ಲಾವಣಿಗಳಲ್ಲಿ ಎರಡು ಸಂಗತಿಗಳು ಮುಖ್ಯವಾಗಿ ಕಾಣುತ್ತವೆ.

Writer - ರಹಮತ್ ತರೀಕೆರೆ

contributor

Editor - ರಹಮತ್ ತರೀಕೆರೆ

contributor

Similar News