ಆದಾಯ ತೆರಿಗೆ ಮರುಪಾವತಿಗೆ ಅರ್ಜಿ ಸಲ್ಲಿಸುವಂತೆ ಸಂದೇಶ ಬಂದಿದೆಯೇ?: ಎಚ್ಚರಿಕೆ, ಅದು ನಕಲಿ ಸಂದೇಶ

Update: 2019-11-02 14:21 GMT

ಆದಾಯ ತೆರಿಗೆ ಮರುಪಾವತಿಯನ್ನು ಕೋರಿ ವಿಧ್ಯುಕ್ತ ಅರ್ಜಿಯನ್ನು ಸಲ್ಲಿಸುವಂತೆ ಆದಾಯ ತೆರಿಗೆ ಇಲಾಖೆಯಿಂದ ಸಂದೇಶವೇನಾದರೂ ನಿಮಗೆ ಬಂದಿದೆಯೇ? ಎಚ್ಚರಿಕೆ,ಇದೊಂದು ನಕಲಿ ಸಂದೇಶವಾಗಿದ್ದು,ಎಂದಿಗೂ ಸ್ಪಂದಿಸುವ ಗೋಜಿಗೆ ಹೋಗಬೇಡಿ. ಇದು ವಂಚಕರ ತಂತ್ರವಾಗಿದ್ದು,ಇಂತಹ ಸಂದೇಶ ಬಂದಿದ್ದರೆ ಅದನ್ನು ಕೂಡಲೇ ವರದಿ ಮಾಡಿ.

ಎಸ್‌ಬಿಐ ಟ್ವೀಟ್‌ನಲ್ಲಿ ತನ್ನ ಗ್ರಾಹಕರಿಗೆ ಈ ಎಚ್ಚರಿಕೆಯನ್ನು ನೀಡಿದೆ.

ಯಾವುದೇ ಸಂಶಯಾಸ್ಪದ ಲಿಂಕ್ ಅನ್ನು ಕ್ಲಿಕ್ಕಿಸದಂತೆ,ಯಾರೊಂದಿಗೂ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳದಂತೆ ಗ್ರಾಹಕರನ್ನು ಆಗ್ರಹಿಸಿರುವ ಬ್ಯಾಂಕು,ಇಂತಹ ಸಂದೇಶಗಳನ್ನು ಸ್ವೀಕರಿಸಿದ ಬಳಿಕ ತಕ್ಷಣವೇ ಪೊಲೀಸರಿಗೆ ಮತ್ತು ಸೈಬರ್ ಸೆಲ್‌ಗೆ ವರದಿ ಮಾಡುವಂತೆ ಸೂಚಿಸಿದೆ.

 ವಂಚಕರು ನಿಮಗೆ ಕಳುಹಿಸಿರುವ ಲಿಂಕ್ ಅಥವಾ ಕೊಂಡಿಗಳನ್ನು ಕ್ಲಿಕ್ಕಿಸಿದರೆ ಅದು ನಿಮ್ಮನ್ನು ಬೇರೊಂದು ವೆಬ್‌ಸೈಟ್‌ಗೆ ಕರೆದೊಯ್ಯುತ್ತದೆ ಮತ್ತು ಅಲ್ಲಿ ಕಾದು ಕುಳಿತಿರುವ ವಂಚಕರು ನಿಮ್ಮ ಐಡಿ,ಪಾಸ್‌ವರ್ಡ್ ಮತ್ತು ಇತರ ವಿವರಗಳನ್ನು ಕೇಳುತ್ತಾರೆ. ಈ ಮಾಹಿತಿಗಳು ಅವರ ಕೈಸೇರಿದರೆ ಅದನ್ನು ಬಳಸಿ ನಿಮ್ಮ ಬ್ಯಾಂಕ್ ಖಾತೆಯಲ್ಲಿನ ಹಣವನ್ನು ದೋಚುತ್ತಾರೆ ಎಂದು ಎಸ್‌ಬಿಐ ವಿವರಿಸಿದೆ.

ಆದಾಯ ತೆರಿಗೆ ಮರುಪಾವತಿ ಪಡೆಯುವುದು ಹೇಗೆ?

ಓರ್ವ ವ್ಯಕ್ತಿ ಹೆಚ್ಚುವರಿ ತೆರಿಗೆಯನ್ನು ಪಾವತಿಸಿದ್ದರೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಮೂಲಕ ಅದನ್ನು ವಾಪಸ್ ಪಡೆಯಬಹುದು. ಅದು ಇಸಿಎಸ್ ವರ್ಗಾವಣೆಯ ಮೂಲಕ ವ್ಯಕ್ತಿಯ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.

ಆದಾಯ ತೆರಿಗೆ ಮರುಪಾವತಿಗಾಗಿ ಪ್ರತ್ಯೇಕ ಅರ್ಜಿಯನ್ನು ಸಲ್ಲಿಸುವಂತೆ ಇಲಾಖೆಯು ಎಂದಿಗೂ ತೆರಿಗೆದಾರರಿಗೆ ಸೂಚಿಸುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News