ದಂಡುಪಾಳ್ಯಂ 4: ಅಪರಾಧಗಳ ವೈಭವೀಕರಣ

Update: 2019-11-02 18:28 GMT

ದಂಡುಪಾಳ್ಯದ ಹೆಸರಿನಲ್ಲಿ ಇದುವರೆಗೆ ಮೂರು ಚಿತ್ರಗಳು ಬಂದಿವೆ. ನಾಲ್ಕನೇ ಭಾಗಕ್ಕೆ ‘ದಂಡುಪಾಳ್ಯಂ’ ಎಂದು ಹೆಸರಿಡಲಾಗಿದೆ ಎನ್ನುವುದನ್ನು ಬಿಟ್ಟರೆ ಅಂಥ ದೊಡ್ಡ ವ್ಯತ್ಯಾಸ ಏನಿಲ್ಲ. ಇಲ್ಲಿಯೂ ಅದೇ ಕೊಲೆ ಮತ್ತು ಅತ್ಯಾಚಾರವೇ ತುಂಬಿಕೊಂಡಿದೆ. ಆದರೆ ಹೊಸಬರಾದರೂ ಸೈಕೋ ಕೊಲೆಗಾರರಂತೆ ಚೆನ್ನಾಗಿ ನಟಿಸಬಲ್ಲ ಹೊಸ ಕಲಾವಿದರು ನಮ್ಮಲ್ಲಿದ್ದಾರೆ ಎನ್ನುವುದನ್ನು ಚಿತ್ರ ಸಾಬೀತು ಮಾಡಿದೆ.

 ಮೂರನೇ ಭಾಗದಲ್ಲಿ ದಂಡುಪಾಳ್ಯದ ತಂಡವಾಗಿ ಕಾಣಿಸಿಕೊಂಡವರಿಗೆ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿದ ಬಳಿಕದ ಕಥೆಯೊಂದಿಗೆ ಚಿತ್ರ ಸಾಗುತ್ತದೆ. ಬಂಧನದಲ್ಲಿರುವ ದಂಡುಪಾಳ್ಯದ ತಂಡವನ್ನು ಹೊರಗೆ ತರಲಿಕ್ಕಾಗಿ ಹೊರಗಡೆ ಅವರ ಸ್ನೇಹಿತರ ವರ್ಗದಿಂದ ಮತ್ತೊಂದು ತಂಡ ಪ್ರಯತ್ನ ಪಡುತ್ತಿರುತ್ತದೆ. ಅವರ ಪ್ರಯತ್ನ ವಕೀಲರ ಮೂಲಕವೇ ನಡೆಯುತ್ತಿರುತ್ತದೆ. ಆದರೆ ಆ ವಕೀಲರಿಗೆ ನೀಡಬೇಕಾದ ಹಣಕ್ಕಾಗಿ ಇವರು ಕೂಡ ಕೊಲೆಯ ದಾರಿಯನ್ನೇ ಹಿಡಿಯುವುದು ವಿಪರ್ಯಾಸ. ಈ ಹಿಂದಿನ ಚಿತ್ರಗಳಲ್ಲಿ ನೋಡಿದಂತೆ ಕೆಲಸಕ್ಕೆಂದು ಮನೆಗಳನ್ನು ಹುಡುಕುವುದು. ಒಂಟಿ ಹೆಂಗಸರು ಇರುವ ಮನೆ ಅಥವಾ ಹೆಂಗಸರು ಒಂಟಿಯಾಗಿರುವ ಸಂದರ್ಭವನ್ನೇ ಬಳಸಿಕೊಂಡು ಹಲ್ಲೆ, ಅತ್ಯಾಚಾರ ಮತ್ತು ದರೋಡೆ ಮಾಡಿ ಪರಾರಿಯಾಗಲು ಆರಂಭಿಸುತ್ತಾರೆ.

ನೀರು ಕೇಳುವುದು ಮತ್ತು ನೀರು ಕುಡಿಯಲು ಒಳಗೆ ಬಂದೊಡನೆ, ಬಾಗಿಲು ತೆರೆದಾಕೆಯ ತಲೆ ಒಡೆಯುತ್ತಾರೆ. ತಲೆ ಒಡೆದು ಬಿದ್ದಾಕೆಯನ್ನು ಅತ್ಯಾಚಾರಗೈದು ಕೊನೆಗೆ ಆಕೆಯ ಪ್ರಾಣ ತೆಗೆದು ಅಲ್ಲಿಂದ ಪರಾರಿಯಾಗುತ್ತಾರೆ. ಇಂತಹ ಹಲವಾರು ಘಟನೆಗಳು ಒಂದರ ಹಿಂದೊಂದಾಗಿ ಒಂದೇ ದೃಶ್ಯವೇ ರಿಪೀಟ್ ಆಗುತ್ತಿವೆಯೇನೋ ಎನ್ನುವ ಮಟ್ಟಕ್ಕೆ ನಡೆಯುತ್ತವೆ. ಮತ್ತು ಅಂತ್ಯದಲ್ಲಿ ಈ ಹಂತಕರಿಗೂ ಸರಿಯಾದ ಶಾಸ್ತಿಯಾಗುತ್ತದೆ ಎನ್ನುವುದೇ ಚಿತ್ರದ ಕತೆ. ಚಿತ್ರದಲ್ಲಿ ದಂಡುಪಾಳ್ಯಂ ತಂಡವಾಗಿ ಹೊಸಬರೇ ನಟಿಸಿದ್ದಾರೆ. ಅವರ ನಡುವೆ ಪ್ರಥಮ ಆಕರ್ಷಣೆಯೇ ಸುಂದರಿ ಹೆಸರಿನ ಕೊಲೆಗಡುಕಿಯಾಗಿ ನಟಿಸಿರುವ ಸುಮನ್ ರಂಗನಾಥ್. ಇದುವರೆಗೆ ನಾಯಕಿಯಾಗಿ, ಪೋಷಕ ನಟಿಯಾಗಿ ಮಾತ್ರ ನೋಡಿರುವ ಪ್ರೇಕ್ಷಕರಿಗೆ ಖಳನಾಯಕಿಯಾಗಿ ಸುಮನ್ ನಟನೆ ವಿಭಿನ್ನ ಅನುಭವ ನೀಡುತ್ತದೆ. ಬೀಡಿ ಸೇದಿ, ಚಾಕು ಚುಚ್ಚಿ ನಗಣ್ಯವಾಗಿ ಓಡಾಡುವ ಅವರ ಮ್ಯಾನರಿಸಮ್ ಇಷ್ಟವಾಗದೇ ಇರದು! ಅನಗತ್ಯವಾಗಿ ಪದಗಳ ಕೊನೆಗೆ ‘ಗಳು’ ಸೇರಿಸುವ ಅವರ ಮಾತಿನ ಶೈಲಿಯೂ ವಿಭಿನ್ನ.

ಮಿಷಿನ್ ರಾಜಣ್ಣನಾಗಿ ರಾಕ್‌ಲೈನ್ ಸುಧಾಕರ್, ಪೊಲೀಸ್ ಅಧಿಕಾರಿ ಜಗಪತಿಯಾಗಿ ರವಿಶಂಕರ್ ನಟನೆ ಗಮನ ಸೆಳೆಯುತ್ತದೆ. ನಿರ್ಮಾಪಕ ವೆಂಕಟ್ ಚಿತ್ರದಲ್ಲಿ ಖುದ್ದು ದಕ್ಷ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಆದರೆ ಆ ಪಾತ್ರವನ್ನು ಅವರ ಬದಲಾಗಿ ಬೇರೆ ಯಾರಾದರೂ ಜನಪ್ರಿಯ ತಾರೆಗೆ ನೀಡಿದ್ದರೆ ಚಿತ್ರದ ತೂಕ ಹೆಚ್ಚುತ್ತಿತ್ತು ಎನ್ನುವುದರಲ್ಲಿ ಸಂದೇಹವಿಲ್ಲ. ಉಳಿದ ಪೊಲೀಸ್ ಅಧಿಕಾರಿಗಳ ಪಾತ್ರದಲ್ಲಿ ವೀಣಾ ಪೊನ್ನಪ್ಪ, ವಿಕ್ಟರಿ ವಾಸು ಮೊದಲಾದವರು ನಟಿಸಿದ್ದಾರೆ. ಅತ್ಯಾಚಾರಕ್ಕೊಳಗಾಗುವ ಹಲವು ಮಹಿಳೆಯರಲ್ಲಿ ಕೊನೆಯವಳಾಗಿ ಐಟಂ ಡ್ಯಾನ್ಸರ್ ಖ್ಯಾತಿಯ ನಟಿ ಅನುಗೌಡ ಅಭಿನಯಿಸಿದ್ದಾರೆ. ಅಪರಾಧಿಗಳ ಪಡೆಯಲ್ಲಿ ರಂಗಭೂಮಿ ಕಲಾವಿದರಾದ ಬುಲೆಟ್ ಸೋಮು, ಸಂಜೀವ ನಾಯ್ಕಾ ಮೊದಲಾದವರು ಗಮನಾರ್ಹ ಅಭಿನಯ ನೀಡಿದ್ದಾರೆ.

ಸುಮಾರು ಕಡೆಗಳಲ್ಲಿ ಪಾತ್ರಧಾರಿಗಳು ಪಾತ್ರಕ್ಕೆ ತಕ್ಕಂತೆ ಮಾತಿನೊಳಗೆ ತೆಲುಗು ಸೇರಿಸಿದ್ದಾರೆ. ಬಹುಶಃ ಇದು ತೆಲುಗು ಡಬ್ಬಿಂಗ್‌ಗೆ ಕೂಡ ಸಹಾಯವಾದೀತು! ಆದರೆ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಚರ್ಚೆ ಎನ್ನುವ ಕಾರಣ ನೀಡಿ ನಿಮಿಷಗಟ್ಟಲೆ ಹಿಂದಿ ಮಾತ್ರ ಮಾತನಾಡಿರುವುದು ಅಕ್ಷಮ್ಯ. ಹಾಗೂ ಆ ಸಂದರ್ಭದಲ್ಲಿ ಕನ್ನಡದ ಸಬ್ ಟೈಟಲ್ ಕೂಡ ಇರುವುದಿಲ್ಲ ಎನ್ನುವುದು ಸತ್ಯ. ಇದು ಅಪರಾಧದ ವೈಭವೀಕರಣ ಇರುವ ಚಿತ್ರವೇನೋ ನಿಜ. ಆದರೆ ನೋಡಿದ ಪ್ರೇಕ್ಷಕರು ಹೀಗೂ ಅಪರಾಧ ಮಾಡುವವರಿದ್ದಾರೆ ಎಂದು ತಿಳಿದು ಎಚ್ಚರಿಕೆ ವಹಿಸುವ ಅವಕಾಶ ಇದೆ ಎನ್ನುವುದು ಚಿತ್ರತಂಡದ ಅಭಿಪ್ರಾಯ. ಒಂದು ವೇಳೆ ಅಂಥ ಎಚ್ಚರಿಕೆ ಮೊದಲೇ ನಿಮಗಿದ್ದರೆ ನೋಡುವ ಅಗತ್ಯ ಇಲ್ಲ ಎನ್ನಬಹುದು.

ತಾರಾಗಣ: ಸುಮನ್ ರಂಗನಾಥ್, ರವಿಶಂಕರ್
ನಿರ್ದೇಶನ: ಕೆ.ಟಿ ನಾಯಕ್
ನಿರ್ಮಾಣ: ವೆಂಕಟ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News