ಕೊಹ್ಲಿ ದಾಖಲೆ ಹಿಂದಿಕ್ಕಿದ ರೋಹಿತ್

Update: 2019-11-03 18:35 GMT

ಹೊಸದಿಲ್ಲಿ, ನ.3: ಬಾಂಗ್ಲಾದೇಶ ವಿರುದ್ಧ ರವಿವಾರ ನಡೆದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ರೋಹಿತ್ ಶರ್ಮಾ ಟಿ-20 ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಶ್ರೇಷ್ಠ ಸ್ಕೋರರ್ ಆಗಿರುವ ವಿರಾಟ್ ಕೊಹ್ಲಿಯವರನ್ನು ಮತ್ತೊಮ್ಮೆ ಹಿಂದಿಕ್ಕಿದರು.

 ಚುಟುಕು ಮಾದರಿ ಕ್ರಿಕೆಟ್‌ನಲ್ಲಿ ರೋಹಿತ್ ಹಾಗೂ ಕೊಹ್ಲಿ ಇಬ್ಬರು ಗರಿಷ್ಠ ರನ್ ಸ್ಕೋರರ್ ಆಗಿದ್ದಾರೆ. ಗರಿಷ್ಠ ಟಿ-20 ರನ್ ಗಳಿಸಿದ ಹಿರಿಮೆಗೆ ಪಾತ್ರರಾಗಲು ಇಬ್ಬರ ಮಧ್ಯೆ ಆರೋಗ್ಯಕರ ಪೈಪೋಟಿ ನಡೆಯುತ್ತಲಿದೆ.

ರವಿವಾರದ ಪಂದ್ಯದಲ್ಲಿ ರೋಹಿತ್ 9 ರನ್ ಗಳಿಸಿ ಶಫಿವುಲ್ ಬೀಸಿದ ಎಲ್ಬಿಡಬ್ಲು ಬಲೆಗೆ ಬಿದ್ದರು. ಈ ಪಂದ್ಯಕ್ಕಿಂತ ಮೊದಲು ಕೊಹ್ಲಿಯ ಗರಿಷ್ಠ ರನ್ ದಾಖಲೆ ಹಿಂದಿಕ್ಕಲು ರೋಹಿತ್‌ಗೆ 7 ರನ್ ಅಗತ್ಯವಿತ್ತು. ಇದೀಗ ಅವರು ಟಿ-20 ಕ್ರಿಕೆಟ್‌ನಲ್ಲಿ ಒಟ್ಟು 2,452 ರನ್ ಗಳಿಸಿದ್ದಾರೆ.

ರೋಹಿತ್(2,452) ಹಾಗೂ ಕೊಹ್ಲಿ(2,450ರನ್)ಟಿ-20 ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಶ್ರೇಷ್ಠ ರನ್ ಸ್ಕೋರರ್ ಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿದ್ದಾರೆ. ಮಾರ್ಟಿನ್ ಗಪ್ಟಿಲ್(2,283 ರನ್), ಶುಐಬ್ ಮಲಿಕ್(2263 ರನ್) ಹಾಗೂ ಬ್ರೆಂಡನ್ ಮೆಕಲಮ್(2140 ರನ್)ಆ ಬಳಿಕದ ಸ್ಥಾನದಲ್ಲಿದ್ದಾರೆ.

ರೋಹಿತ್‌ಗೆ 2,500 ಟಿ-20 ರನ್ ಗಳಿಸಲು ಇನ್ನು 48 ರನ್ ಅಗತ್ಯವಿದೆ. ಈಗ ನಡೆಯುತ್ತಿರುವ ಟಿ-20 ಸರಣಿಯಲ್ಲಿ ರೋಹಿತ್ ಈ ಸಾಧನೆ ಮಾಡಬಹುದು.

 ರೋಹಿತ್ ರವಿವಾರ 99ನೇ ಟಿ-20 ಪಂದ್ಯವನ್ನಾಡುವುದರೊಂದಿಗೆ ಭಾರತದ ಪರ ಗರಿಷ್ಠ ಟಿ-20 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದ ಎಂ.ಎಸ್. ಧೋನಿಯ ದಾಖಲೆ ಮುರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News