ಭ್ರಷ್ಟ ಶ್ರೀಮಂತರ ಜಾಗತಿಕ ಜಾಲಗಳು

Update: 2019-11-04 18:34 GMT

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಹೀಗೆ ಟ್ವೀಟ್ ಮಾಡಿದರು: ‘‘ನನ್ನನ್ನು ಎಷ್ಟು ಕೆಟ್ಟದಾಗಿ ನೋಡಿಕೊಳ್ಳಲಾಗಿದೆಯೋ ಅಷ್ಟು ಕೆಟ್ಟದಾಗಿ ಯಾವ ಇನ್ನೊಬ್ಬ ಅಧ್ಯಕ್ಷರನ್ನೂ ನಮ್ಮ ದೇಶದ ಇತಿಹಾಸದಲ್ಲಿ ನೋಡಿಕೊಂಡಿಲ್ಲ.’’ ಅವರನ್ನು ಮಾಧ್ಯಮಗಳು ಟೀಕಿಸುತ್ತಿರುವ ರೀತಿಯನ್ನು ಗಮನಿಸಿದರೆ ಅವರು ತನ್ನ ಸಿಟ್ಟನ್ನು ವ್ಯಕ್ತಪಡಿಸುವುದಕ್ಕೆ ಸಮರ್ಥನೆ ಇದೆ. ಆದರೆ ಅಮೆರಿಕದ ಇತಿಹಾಸದಲ್ಲಿ ಅವರಷ್ಟು ಹಗರಣಗಳ ಸುಳಿಯಲ್ಲಿ ಸಿಲುಕಿರುವ ಇನ್ನೊಬ್ಬ ಅಧ್ಯಕ್ಷರಿಲ್ಲ.

 ಅವರ ವಿರುದ್ಧ ಮಹಾ ವಿಚಾರಣೆ (ಇಂಪೀಚ್‌ಮೆಂಟ್) ನಡೆಸಬೇಕೆಂದು ಡೆಮಾಕ್ರಟ್ ಹಾಗೂ ಪ್ರಜಾಪ್ರತಿನಿಧಿ ಪಕ್ಷದ ಸ್ಪೀಕರ್ ನ್ಯಾನ್ಸಿ ಪಲೊಸಿ ಕರೆ ನೀಡಿದ್ದಾರೆ. ಅವರ ವಿರುದ್ಧ ಆಪಾದನೆಗಳ ಒಂದು ದೊಡ್ಡ ಪಟ್ಟಿಯೇ ಇದೆ. ಅಮೆರಿಕದ ಮಾಜಿ ಉಪಾಧ್ಯಕ್ಷ ಜೋ ಬಿಡೆನ್ ಅವರು ಟ್ರಂಪ್ ವಿರುದ್ಧ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದಾಗ ಅವರ ಪ್ರತಿಷ್ಠೆಗೆ ಮಸಿ ಬಳಿಯುವಲ್ಲಿ ಟ್ರಂಪ್ ಉಕ್ರೇನಿನ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್‌ಕಿಯ ಬೆಂಬಲ ಯಾಚಿಸಿದ್ದರೆಂದು ಅವರ ಮೇಲೆ ಆಪಾದಿಸಲಾಗಿದೆ. ಉಕ್ರೇನ್‌ಗೆ ಮಿಲಿಟರಿ ನೆರವು ನೀಡಲು ಇದು ಟ್ರಂಪ್ ಹಾಕಿದ್ದ ಷರತ್ತು. ಟ್ರಂಪ್ ರಾಜಕೀಯ ಲಾಭಕ್ಕಾಗಿ ಅಮೆರಿಕದ ರಾಷ್ಟ್ರೀಯ ಭದ್ರತೆ ಹಾಗೂ ಜನರು ಅವರಲ್ಲಿ ಇಟ್ಟಿದ್ದ ವಿಶ್ವಾಸಕ್ಕೆ ಈ ಮೂಲಕ ದ್ರೋಹ ಬಗೆದಿದ್ದಾರೆ ಎಂಬುದು ಅವರ ಮೇಲಿರುವ ಆಪಾದನೆ.

ಇದು ಗಂಭೀರವಾದ ಆಪಾದನೆಯೇ. ಆದರೆ ಮೂರು ವರ್ಷಗಳ ಕಾಲ ಶ್ವೇತ ಭವನ ಮತ್ತು ಅದರ ಭಾರೀ ಪ್ರಭಾವವನ್ನು ಅತ್ಯಂತ ಹೆಚ್ಚು ಹಣ ನೀಡಿದವರಿಗೆ ಮಾರಾಟಕ್ಕಿಡಲಾಗಿತ್ತು ಎಂಬುದನ್ನು ನಂಬುವುದು ಕಷ್ಟ. ಟ್ರಂಪ್ ಆರ್ಗನೈಜೇಷನ್ ಜೊತೆ ಅಂತರ್‌ರಾಷ್ಟ್ರೀಯ ವಾಣಿಜ್ಯ ವ್ಯವಹಾರ ಕುದುರಿಸಲು ಬಯಸುವವರಿಗಾಗಿ 2018ರ ಫೆಬ್ರವರಿಯಲ್ಲಿ ಒಂದು ಪ್ಲೇಟಿಗೆ 38,000 ಡಾಲರ್ ಬೆಲೆ ಔತಣ ಕೂಟವನ್ನು (ಡಿನ್ನರ್ ಪಾರ್ಟಿ) ಟ್ರಂಪ್ ಅತಿಥಿಗಳಿಗೆ ನೀಡಿದ್ದು ಭಾರತೀಯರಿಗೆ ನೆನಪಿರಬಹುದು. ಆ ಪಾರ್ಟಿಯ ಫಲವಾಗಿ ಗುರುಗ್ರಾಮದಲ್ಲಿ ಬರಲಿರುವ ಟ್ರಂಪ್ ಟವರ್ಸ್ ಯೋಜನೆಗೆ ರಾತ್ರಿ ಬೆಳಗಾಗುವುದರೊಳಗಾಗಿ ಹದಿನೈದು ಮಿಲಿಯ ಡಾಲರ್‌ಗಳ ವ್ಯಾಪಾರ ಕುದುರಿತು. ಆ ಪ್ರಾಪರ್ಟಿಯನ್ನು ಕೊಂಡುಕೊಂಡವರಿಗೆ ಇತರ ಯಾವ ಅಂತರ್‌ರಾಷ್ಟ್ರೀಯ ವ್ಯವಹಾರಗಳನ್ನು ಕುದುರಿಸುವ ಅವಕಾಶಗಳನ್ನು ಮಾಡಿ ಕೊಡಲಾಯಿತೆಂದು ನಮಗೆ ತಿಳಿದಿಲ್ಲ. ಈ ವ್ಯವಹಾರಗಳು ಹಾಗೂ ಇತರ ಇಂತಹ ಉದಾಹರಣೆಗಳು ಟ್ರಂಪ್ ಮತ್ತು ಅವರ ಕುಟುಂಬ ವಿಶ್ವಾದ್ಯಂತ ಸ್ಥಾಪಿಸಿರುವ ಪ್ರಬಲವಾದ ಹಾಗೂ ಸಂಕೀರ್ಣವಾದ ಕೊಂಡಿಗಳ ಜಾಲವನ್ನು ಸೂಚಿಸುತ್ತದೆ. ಈ ಜಾಲದಲ್ಲಿ ಬೃಹತ್ ತೈಲ ಹಾಗೂ ರಕ್ಷಣೆಗೆ ಸಂಬಂಧಿಸಿದ ವ್ಯವಹಾರಗಳು ಸೇರಿವೆ. ಇವುಗಳಲ್ಲಿ ಕೊಚ್ ಸಹೋದರರು ನಡೆಸುವ ಕಂಪೆನಿಗಳು ಫಾಕ್ಸ್ ನ್ಯೂಸ್‌ನಂತಹ ಮೀಡಿಯಾ ಔಟ್‌ಲೆಟ್‌ಗಳು, ವಿದೇಶಿ ವ್ಯಾಪಾರ/ ವಾಣಿಜ್ಯ ಹಾಗೂ ಚೀನಾ, ಮೆಕ್ಸಿಕೊ ಮತ್ತು ರಶ್ಯದ ರಾಜಕೀಯ ಗಣ್ಯರು, ಪ್ರಭಾವಿಗಳು (ಎಲೈಟ್ಸ್) ಸೇರಿದ್ದಾರೆ. ಅಲ್ಲದೆ ಭೂಗತ ಜಗತ್ತಿನೊಂದಿಗೆ ಗುಪ್ತ ಸಂಬಂಧ ಹೊಂದಿರಬಹುದಾದ ಜನರು ನಡೆಸುತ್ತಿರುವ ಹಲವು ನೂರು ಶೆಲ್ ಕಂಪನಿಗಳು, ಕಪ್ಪುಹಣ ಹಾಗೂ ಅಂತರ್‌ರಾಷ್ಟ್ರೀಯ ಸಿಂಡಿಕೇಟ್‌ಗಳೂ ಈ ಜಾಲದಲ್ಲಿವೆ. ಬ್ಯಾಂಕುಗಳು ಹಾಗೂ ಇತರ ಹಣಕಾಸು ಸಂಸ್ಥೆಗಳು, ರಿಪಬ್ಲಿಕನ್ ಪಕ್ಷದ ಆಡಳಿತ ಯಂತ್ರ, ಲಾಬಿ ನಡೆಸುವವರು, ದಾನಿಗಳು ಮತ್ತು ಇತರ ವ್ಯಾಪಾರೋದ್ಯಮಿಗಳು ಟ್ರಂಪ್ ಅವರ ಒಳ ವಲಯದಿಂದ ಒಂದು ಹೆಜ್ಜೆ ದೂರದಲ್ಲಿರಬಹುದು, ಆದರೆ ಇವರೆಲ್ಲರ ಹಿತಾಸಕ್ತಿಗಳಿಗೆ ಕೂಡ ಸಾಕಷ್ಟು ಬೆಂಬಲ ನೀಡಲಾಗುತ್ತಿದೆ. ಆದರೆ ಈ ಎಲೈಟ್ ಜಾಲ ಅಭಿವೃದ್ಧಿ ಹೊಂದಲು ಅದಕ್ಕೆ ಪ್ರಾಯಶಃ ಅತ್ಯಂತ ಮುಖ್ಯವಾಗಿ ಇರುವ ಅಂಶವೆಂದರೆ ಟ್ರಂಪ್ ಅವರಿಗೆ ಸಿಗುತ್ತಿರುವ ಗಣನೀಯ ಪ್ರಮಾಣದ ಹಾಗೂ ಎಗ್ಗಿಲ್ಲದ ಸಾರ್ವಜನಿಕ ಬೆಂಬಲ. ಅವರ ಆ ವಿಷ ಭರಿತವಾದ ಮಾತುಗಳು ಹಾಗೂ ಅವರ ವರ್ಚಸ್ಸಿಗೆ ಸಿಗುತ್ತಿರುವ ಮಿತಿಮೀರಿದ ಪ್ರಚಾರ ಅವರನ್ನು ಇನ್ನಷ್ಟು ಪ್ರಭಾವಶಾಲಿಯಾಗಿಸುತ್ತಿದೆ, ಅವರನ್ನು ಇನ್ನಷ್ಟು ಶಕ್ತಿಯುತರನ್ನಾಗಿಸುತ್ತದೆ.

ಟ್ರಂಪ್‌ರವರ ಚಟುವಟಿಕೆಗಳ ಕಾರ್ಯವಿಧಾನಗಳು ಢಾಳಾಗಿ ಕಾಣಿಸುವ ರಾಜಕೀಯ ಭ್ರಷ್ಟಾಚಾರದ ಒಂದು ಕೆಟ್ಟ ಆವೃತ್ತಿಯಾಗಿ, ರೂಪವಾಗಿ ತೋರಬಹುದು. ಇದನ್ನು ಸಾಮಾನ್ಯವಾಗಿ ಖಾಸಗಿ/ ವೈಯಕ್ತಿಕ ಲಾಭಕ್ಕಾಗಿ ಸಾರ್ವಜನಿಕ ಅಧಿಕಾರದ ದುರ್ಬಳಕೆ ಎಂದು ವ್ಯಾಖ್ಯಾನಿಸಲಾಗುತ್ತದೆ. ಇದು ರಾಜಕೀಯ ಜೀವನದ ಹೊಸ ಮುಖವೇನೂ ಅಲ್ಲ. ಯಾಕೆಂದರೆ ರಾಜಕೀಯ ಅಧಿಕಾರ ಮತ್ತು ಸಂಪತ್ತನ್ನು ವಿಭಿನ್ನ ಸನ್ನಿವೇಶಗಳಲ್ಲಿ ಸೆಟ್ಟಿಂಗ್‌ಗಳಲ್ಲಿ ನಿಯೋಜಿಸಲಾಗುತ್ತದೆ, ಹೂಡಿಕೆ ಮಾಡಲಾಗುತ್ತದೆ. ಇವುಗಳನ್ನು ಶ್ರೀಮಂತ ಹಾಗೂ ಬಡ ದೇಶಗಳಲ್ಲಿ ಭ್ರಷ್ಟಾಚಾರದ ಹಲವು ಲಕ್ಷಣಗಳು ಸಿಂಡ್ರೋಮ್‌ಗಳು ಎಂದು ವಿವರಿಸಲಾಗುತ್ತದೆ.

ತೀರಾ ಇತ್ತೀಚೆಗೆ ಈ ಸಿಂಡ್ರೋಮ್‌ಗಳು ತಮ್ಮ ವ್ಯಾಪ್ತಿಯಲ್ಲಿ ಅಂತರ್‌ರಾಷ್ಟ್ರೀಯವಾಗಿರುವಂತೆ ಕಾಣುತ್ತದೆ. 2008ರ ಹಣಕಾಸು ಬಿಕ್ಕಟ್ಟಿನ ಸಮಯದಲ್ಲಿ ಅಪ್ರಾಮಾಣಿಕ ಸ್ಥಾಪಿತ ಹಿತಾಸಕ್ತಿಗಳು ಮಾರುಕಟ್ಟೆಗಳನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿರುವುದು ಬೆಳಕಿಗೆ ಬಂತು. 2015ರ ಪನಾಮಾ ಪೇಪರ್ಸ್ ಹಗರಣವು ಬ್ಯಾಂಕುಗಳು, ರಾಜಕಾರಣಿಗಳು ಮತ್ತು ಮಾಫಿಯಾ ಹಾಗೂ ಶಸ್ತ್ರಾಸ್ತ್ರ ಪೂರೈಕೆದಾರರ ನಡುವೆ ಇರುವ ಗುಪ್ತ ಸಂಬಂಧಗಳನ್ನು ಕೊಂಡಿಗಳನ್ನು ಬಹಿರಂಗಪಡಿಸಿತು. ಆದ್ದರಿಂದ ರಾಜಕೀಯ ಭ್ರಷ್ಟಾಚಾರವು ಗಣ್ಯ ಶ್ರೀಮಂತರ ಎಲೈಟ್ ಅಧಿಕಾರ ರಚನೆಯ ಒಂದು ಪ್ರಕ್ರಿಯೆಯಾಗಿದೆ. ಈ ಪ್ರಕ್ರಿಯೆಯಲ್ಲಿ ಸೂಪರ್-ರಿಚ್ ಅಥವಾ ಬಿಲಿಯಾಧೀಶರು ಹಾಗೂ ಅಧಿಕಾರವುಳ್ಳವರು, ಬಲಿಷ್ಠರು ಮತ್ತಷ್ಟು ಸಂಪತ್ತನ್ನು ಹಾಗೂ ಪ್ರತಿಷ್ಠೆಯನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಅವರ ಆಂತರಿಕ ವ್ಯವಹಾರಗಳು ಸಕ್ರಮ, ನ್ಯಾಯಬದ್ಧ ಕಂಪೆನಿಗಳು ಹಾಗೂ ಅಪರಾಧ ಸಿಂಡಿಕೇಟ್‌ಗಳು ಎರಡೂ ನೀಡುವ ನೆರವಿನಿಂದ ನಡೆಯುತ್ತವೆ. ಭ್ರಷ್ಟ ಎಲೈಟ್ ಜಾಲಗಳ ಚಟುವಟಿಕೆಗಳು, ಪ್ರಯತ್ನಗಳು ಪ್ರಜಾಪ್ರಭುತ್ವವನ್ನು ವಿಕೃತಗೊಳಿಸಲು ಹಾಗೂ ಆರ್ಥಿಕ ಬೆಳವಣಿಗೆಯನ್ನು ಕುಂಠಿತಗೊಳಿಸಲು ಕಾರಣವಾಗುತ್ತವೆ. ಆದ್ದರಿಂದ ನಾವು ಅಂತಹ ಜಾಲಗಳ ಅಪರಾಧಗಳ ಬಗ್ಗೆ ತುಂಬ ಜಾಗೃತರಾಗಿರಬೇಕಾಗುತ್ತದೆ.

(ಲೇಖಕರು ಐಐಟಿ ಮದ್ರಾಸ್‌ನ ಡಿಪಾರ್ಟ್‌ಮೆಂಟ್ ಆಫ್ ಹ್ಯುಮಾನಿಟೀಸ್ ಆ್ಯಂಡ್ ಸೋಷಿಯಲ್ ಸಾಯನ್ಸಸ್‌ನಲ್ಲಿ ಪ್ರಾಧ್ಯಾಪಕರಾಗಿದ್ದಾರೆ.)

ಕೃಪೆ: ದಿ ಹಿಂದೂ

Writer - ಸುಧೀರ್ ಚೆಲ್ಲ ರಾಜನ್

contributor

Editor - ಸುಧೀರ್ ಚೆಲ್ಲ ರಾಜನ್

contributor

Similar News