ಅಧಿಕಾರದಲ್ಲಿದ್ದಾಗ ಅಶೋಕ್ ಲಾವಸ ತಮ್ಮ ಪ್ರಭಾವ ಬಳಸಿದ್ದರೇ ಎಂದು ಪರಿಶೀಲಿಸಿ: ಸರಕಾರದ ಸೂಚನೆ

Update: 2019-11-05 09:38 GMT
File Photo: EPS

ಹೊಸದಿಲ್ಲಿ, ನ.5: ಚುನಾವಣಾ ಆಯುಕ್ತ ಅಶೋಕ್ ಲಾವಸ  ಈ ಹಿಂದೆ 2009 ಹಾಗೂ 2013ರ ನಡುವೆ  ಇಂಧನ ಸಚಿವಾಲಯದಲ್ಲಿ ವಿಶೇಷ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ ಕೆಲ ಕಂಪೆನಿಗಳಿಗೆ ಪ್ರಯೋಜನವುಂಟು ಮಾಡುವ ಉದ್ದೇಶದಿಂದ ತಮ್ಮ ಅಧಿಕೃತ ಹುದ್ದೆಯನ್ನು `ಅನಗತ್ಯ ಪ್ರಭಾವ' ಬೀರಲು  ಬಳಸಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ದಾಖಲೆಗಳನ್ನು ಪರಾಮರ್ಶಿಸುವಂತೆ ಭಾರತ ಸರಕಾರ 11 ಸಾರ್ವಜನಿಕ ರಂಗದ ಸಂಸ್ಥೆಗಳಿಗೆ ಪತ್ರ ಬರೆದಿದೆ.

ಆಗಸ್ಟ್ 29ರಂದು ಬರೆಯಲಾದ ಈ ಪತ್ರವನ್ನು ಕೆಲ ಸಾರ್ವಜನಿಕ ರಂಗದ ಸಂಸ್ಥೆಗಳ ಮುಖ್ಯ ವಿಜಿಲೆನ್ಸ್ ಅಧಿಕಾರಿಗಳಿಗೆ  ಕಳುಹಿಸಲಾಗಿದ್ದು, ಈ ಪತ್ರವನ್ನು ಪಡೆದ ಸಂಸ್ಥೆಗಳಲ್ಲಿ ಎನ್‌ಟಿಪಿಸಿ,   ನ್ಯಾಷನಲ್ ಹೈಡ್ರೋ ಇಲೆಕ್ಟ್ರಿಕ್ ಪವರ್ ಕಾರ್ಪೊರೇಶನ್ ಲಿಮಿಟೆಡ್, ಆರ್‌ಇಸಿ ಲಿಮಿಟೆಡ್ ಹಾಗೂ ಪವರ್ ಫೈನಾನ್ಸ್ ಕಾರ್ಪೊರೇಶನ್ ಇವುಗಳು ಸೇರಿವೆ.

ತನ್ನ ಪತ್ರದೊಂದಿಗೆ ಇಂಧನ ಸಚಿವಾಲಯವು ಲಾವಸ ಅವರ ಪತ್ನಿ ನೋವೆಲ್ ಲಾವಸ ಅವರು ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿದ್ದ 14 ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದ ಕಂಪೆನಿಗಳ ಪಟ್ಟಿಯನ್ನೂ ಲಗತ್ತಿಸಿದೆ. ವಿವಿಧ ಸಾರ್ವಜನಿಕ ರಂಗದ ಸಂಸ್ಥೆಗಳು ಹಾಗೂ ರಾಜ್ಯ ಸರಕಾರಗಳು  ಎ2ಝೆಡ್ ಗ್ರೂಪ್ ಗೆ ಸೇರಿದ ಕಂಪನಿಗಳಿಗೆ ನೀಡಿದ್ದ 135 ಯೋಜನೆಗಳ ಪಟ್ಟಿ ಹಾಗೂ ನೋವೆಲ್ ಲಾವಸ ಅವರು ಪಡೆದ 45.8 ಲಕ್ಷ ರೂ. ಪಾವತಿ ಕುರಿತಾದ ಮಾಹಿತಿಗಳನ್ನೂ ಪತ್ರದ ಜತೆ ಲಗತ್ತಿಸಲಾಗಿದೆ.  ವಿವಿಧ ರಾಜ್ಯ ಸರಕಾರಗಳು ಎ2ಝೆಡ್ ವೇಸ್ಟ್ ಮ್ಯಾನೇಜ್ಮೆಂಟ್ ಲಿಮಿಟೆಡ್ ಸಂಸ್ಥೆಗೆ  ಅಶೋಕ್ ಲಾವಸ ಇಂಧನ ಸಚಿವಾಲಯದಲ್ಲಿದ್ದಾಗ 2009-2013ರ ನಡುವೆ ನೀಡಲಾದ 13 ಬೃಹತ್ ಯೋಜನೆಗಳ ಪಟ್ಟಿಯನ್ನೂ ಲಗತ್ತಿಸಲಾಗಿದೆ.

ಕಳೆದ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ವಿಚಾರದಲ್ಲಿ ಚುನಾವಣಾ ಆಯೋಗದ ತೀರ್ಮಾನಗಳಿಗೆ ಅಸಮ್ಮತಿ ಸೂಚಿಸಿ ಲಾವಸ ಸುದ್ದಿಯಾಗಿದ್ದರು. ಆಯೋಗದಲ್ಲಿ `ಅಲ್ಪಸಂಖ್ಯಾತ' ಅಭಿಪ್ರಾಯಗಳನ್ನು ದಾಖಲಿಸಿಕೊಳ್ಳಲಾಗುತ್ತಿಲ್ಲ ಎಂದು ಆರೋಪಿಸಿ  ಸಭೆಗಳಿಂದ ತಾನು ದೂರವುಳಿಯುವುದಾಗಿ  ಅವರು ಬರೆದ ಪತ್ರವೂ ಕೋಲಾಹಲ ಸೃಷ್ಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News