ಏಕದಿನ ಪಂದ್ಯಕ್ಕೆ 25 ಓವರ್‌ಗಳ ನಾಲ್ಕು ಇನಿಂಗ್ಸ್

Update: 2019-11-06 03:03 GMT

 ಮುಂಬೈ, ನ.5: ಟ್ವೆಂಟಿ -20 ಕ್ರಿಕೆಟ್‌ನ ಅಬ್ಬರದ ಎದುರು ಕಳೆಗುಂದುತ್ತಿರುವ ಏಕದಿನ ಕ್ರಿಕೆಟ್ ಪಂದ್ಯ(50 ಓವರ್‌ಗಳ ಕ್ರಿಕೆಟ್ ಪಂದ್ಯ)ವನ್ನು ಆಕರ್ಷಣೀಯಗೊಳಿಸಲು ಕೆಲವೊಂದು ಬದಲಾವಣೆ ಮಾಡಬೇಕೆಂದು ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಅಭಿಪ್ರಾಯಪಟ್ಟಿದ್ದಾರೆ. ಈಗ 50 ಓವರ್‌ಗಳ ಒಂದು ಇನ್ನಿಂಗ್ಸ್‌ನ ಬದಲು ತಲಾ 25 ಓವರ್‌ಗಳ ನಾಲ್ಕು ಇನ್ನಿಂಗ್ಸ್‌ನಲ್ಲಿ ಆಟ ಸಾಗಬೇಕು. ಆಗ ಪಂದ್ಯ ಕುತೂಹಲಕಾರಿಯಾಗಿರುತ್ತದೆ ಮತ್ತು ಟಿವಿ ಪ್ರಸಾರಕರಿಗೆ ನಿರಾಶೆಯಾಗುವುದಿಲ್ಲ. ಜೊತೆಗೆ ಇಬ್ಬನಿಯ ಸಮಸ್ಯೆಯೂ ಕಾಡುವುದಿಲ್ಲ ಎಂದು ತೆಂಡುಲ್ಕರ್ ಹೇಳಿದ್ದಾರೆ. ಎ ಮತ್ತು ಬಿ ತಂಡಗಳ ನಡುವೆ ಏಕದಿನ ಪಂದ್ಯ ನಡೆಯುತ್ತಿದೆ ಎಂದು ಭಾವಿಸೋಣ. ಟಾಸ್ ಗೆದ್ದ ಎ ತಂಡ ಮೊದಲ 25 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿದರೆ ಆಗ 15 ನಿಮಿಷಗಳ ಬ್ರೇಕ್. ಬಳಿಕ ಬಿ ತಂಡದ ಇನಿಂಗ್ಸ್ ಆರಂಭವಾಗಿ ಆ ತಂಡ 25 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 131 ರನ್ ಗಳಿಸುತ್ತದೆ. ಮತ್ತೆ 15 ನಿಮಿಷದ ಬ್ರೇಕ್. ಎ ತಂಡ 4 ವಿಕೆಟ್ ನಷ್ಟಕ್ಕೆ 113 ರನ್‌ನಿಂದ ಆಟ ಮುಂದುವರಿಸಿ ಮತ್ತೆ 25 ಓವರ್ ಆಡುವ ಅವಕಾಶವಿರುತ್ತದೆ. ಆ ತಂಡ ನೀಡಿದ ಗುರಿಯನ್ನು ಬೆಂಬತ್ತುವಾಗ ತನ್ನ ದ್ವಿತೀಯ ಸರದಿಯಲ್ಲಿ ಬಿ ತಂಡ 7 ವಿಕೆಟ್ ನಷ್ಟಕ್ಕೆ 131 ರನ್‌ನಿಂದ ಆಟ ಆರಂಭಿಸುತ್ತದೆ. ಒಂದು ವೇಳೆ ಮೊದಲು ಆಡಿದ ತಂಡ 25 ಓವರ್‌ನ ಒಳಗೆಯೇ ಆಲೌಟ್ ಆದರೆ ಆ ಗುರಿಯನ್ನು ಬೆನ್ನಟ್ಟಲು ದ್ವಿತೀಯ ಸರದಿಯ ತಂಡಕ್ಕೆ 50 ಓವರ್‌ಗಳ ಅವಕಾಶವಿರುತ್ತದೆ. ಹೀಗೆ ಇದರಲ್ಲಿ ಇನ್ನಷ್ಟು ನಾವೀನ್ಯತೆ, ಬದಲಾವಣೆ ತರಬಹುದು ಎಂದು ಸಚಿನ್ ಹೇಳಿದ್ದಾರೆ. ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲೂ ಬದಲಾವಣೆಯಾಗಬೇಕು. ದುಲೀಪ್ ಟ್ರೋಫಿ ಟೂರ್ನಿಯನ್ನು ಪರಿಷ್ಕರಿಸಬೇಕು ಮತ್ತು ಸೈಯದ್ ಮುಷ್ತಾಕ್ ಆಲಿ ಟ್ರೋಫಿ ಟೂರ್ನಿಯನ್ನು ರದ್ದುಗೊಳಿಸಬೇಕು. ಚಾಲೆಂಜರ್ ಟ್ರೋಫಿ ಟೂರ್ನಿಯಲ್ಲಿ ಆಡುವ ಆಟಗಾರರು ವಿಭಿನ್ನ ರಾಜ್ಯ, ವಲಯದವರಾಗಿರುತ್ತಾರೆ. ಸ್ವಲ್ಪ ದಿನ ಒಟ್ಟು ಸೇರಿ ಆಡಿ ಬಳಿಕ ಚದುರಿಹೋಗುತ್ತಾರೆ. ತಂಡದ ಜೊತೆ ಅನುಬಂಧವಿರುವುದಿಲ್ಲ. ಈ ಪಂದ್ಯಗಳತ್ತ ಹೆಚ್ಚಿನವರಿಗೆ ಆಸಕ್ತಿಯೇ ಇರುವುದಿಲ್ಲ. ದುಲೀಪ್ ಟ್ರೋಫಿ ಟೂರ್ನಿ ಕೂಡಾ ಹೀಗೆಯೇ. ವಿವಿಧ ವಲಯಕ್ಕೆ ಸೇರಿದ ಆಟಗಾರರು ಪಂದ್ಯದ ಹಿಂದಿನ ದಿನ ಒಟ್ಟು ಸೇರಿ ಕೆಲ ಪಂದ್ಯಗಳನ್ನು ಆಡಿ ವಾಪಾಸು ಹೋಗುತ್ತಾರೆ. ಐಪಿಎಲ್‌ನಲ್ಲಿ ಒಂದು ತಂಡದ ಆಟಗಾರರು ಎರಡು ತಿಂಗಳು ಒಟ್ಟಿಗೇ ಇರುವ ಕಾರಣ ಪರಸ್ಪರ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ದುಲೀಪ್ ಟ್ರೋಫಿ ಟೂರ್ನಿಯ ವಿನ್ಯಾಸವನ್ನೂ ಬದಲಿಸಬೇಕಿದೆ. ಒಟ್ಟು ಆರು ತಂಡಗಳಿರಬೇಕು. ರಣಜಿ ಸೆಮಿಫೈನಲ್ ಆಡಿದ ನಾಲ್ಕು ತಂಡಗಳು, ದೇಶೀಯ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಆಟಗಾರರನ್ನು ಹೊಂದಿರುವ ಎರಡು ತಂಡಗಳು ಟೂರ್ನಿಯಲ್ಲಿ ಆಡಬೇಕು. ಇಲ್ಲಿ 19 ವರ್ಷದೊಳಗಿನವರ ತಂಡ ಹಾಗೂ 23 ವರ್ಷದೊಳಗಿನವರ ತಂಡದ ಆಟಗಾರರಿಗೆ ಅವಕಾಶ ನೀಡಬಹುದು ಎಂದು ತೆಂಡುಲ್ಕರ್ ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News