×
Ad

ಹವಾಮಾನ ಬಿಕ್ಕಟ್ಟಿನಿಂದ ‘ಹೇಳಲಾಗದ ಸಂಕಷ್ಟ’ ಎದುರಾಗಲಿದೆ: 11,000 ವಿಜ್ಞಾನಿಗಳ ಎಚ್ಚರಿಕೆ

Update: 2019-11-06 19:31 IST

ಹೊಸದಿಲ್ಲಿ,ನ.6: ಜಾಗತಿಕ ಸಮಾಜದಲ್ಲಿ ಪ್ರಮುಖ ಪರಿವರ್ತನೆಗಳಾಗದಿದ್ದರೆ ಹವಾಮಾನ ಬಿಕ್ಕಟ್ಟಿನಿಂದಾಗಿ ವಿಶ್ವದ ಜನರು ‘ಹೇಳಲಾಗದ ಸಂಕಷ್ಟವನ್ನು’ ಎದುರಿಸಲಿದ್ದಾರೆ ಎಂದು 11,000ಕ್ಕೂ ಅಧಿಕ ವಿಜ್ಞಾನಿಗಳು ತೀಕ್ಷ್ಣ ಎಚ್ಚರಿಕೆಯನ್ನು ನೀಡಿದ್ದಾರೆ.

  ‘‘ ಭೂ ಗ್ರಹವು ಹವಾಮಾನ ತುರ್ತುಸ್ಥಿತಿಯನ್ನು ಎದುರಿಸುತ್ತಿದೆ ಎಂದು ನಾವು ಸ್ಪಷ್ಟವಾಗಿ ಮತ್ತು ನಿಸ್ಸಂದಿಗ್ಧವಾಗಿ ಘೋಷಿಸುತ್ತಿದ್ದೇವೆ. ಸುಸ್ಥಿರ ಭವಿಷ್ಯವನ್ನು ಹೊಂದಲು ನಾವು ನಮ್ಮ ಬದುಕಿನ ರೀತಿಯನ್ನು ಬದಲಿಸಿಕೊಳ್ಳಲೇಬೇಕಿದೆ. ಇದು ನಮ್ಮ ಜಾಗತಿಕ ಸಮಾಜವು ಕಾರ್ಯ ನಿರ್ವಹಿಸುತ್ತಿರುವ ಮತ್ತು ನೈಸರ್ಗಿಕ ಪರಿಸರ ವ್ಯವಸ್ಥೆಯೊಂದಿಗೆ ಅದು ತೊಡಗಿಕೊಳ್ಳುವ ರೀತಿಗಳಲ್ಲಿ ಪ್ರಮುಖ ಪರಿವರ್ತನೆಗಳನ್ನು ಒಳಗೊಂಡಿದೆ. ಈಗ ಸಮಯವನ್ನು ವ್ಯರ್ಥಗೊಳಿಸುವಂತಿಲ್ಲ. ಹವಾಮಾನ ಬಿಕ್ಕಟ್ಟು ಈಗಾಗಲೇ ದಾಂಗುಡಿಯಿಟ್ಟಿದೆ ಮತ್ತು ಹೆಚ್ಚಿನ ವಿಜ್ಞಾನಿಗಳು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ವೇಗವನ್ನು ಪಡೆದುಕೊಳ್ಳುತ್ತಿದೆ. ಅದು ನಿರೀಕ್ಷೆಗಿಂತ ಹೆಚ್ಚು ತೀವ್ರವಾಗಿದೆ,ಅದು ನೈಸರ್ಗಿಕ ಪರಿಸರ ವ್ಯವಸ್ಥೆಗಳಿಗೆ ಮತ್ತು ಮಾನವ ಜನಾಂಗದ ಭವಿಷ್ಯಕ್ಕೆ ಬೆದರಿಕೆಯನ್ನೊಡ್ಡುತ್ತಿದೆ ’’ಎಂದು ವಿಜ್ಞಾನಿಗಳು ಹೇಳಿದ್ದಾರೆ.

1979ರಲ್ಲಿ ಜಿನೆವಾದಲ್ಲಿ ನಡೆದಿದ್ದ ಮೊದಲ ವಿಶ್ವ ಹವಾಮಾನ ಸಮ್ಮೇಳನದ 40ನೇ ವರ್ಷಾಚರಣೆ ಸಂದರ್ಭದಲ್ಲಿ ಬಯೊಸೈನ್ಸ್ ಜರ್ನಲ್‌ನಲ್ಲಿ ವಿಜ್ಞಾನಿಗಳ ಈ ಹೇಳಿಕೆ ಪ್ರಕಟವಾಗಿದೆ. ಡಝನ್‌ಗಟ್ಟಲೆ ವಿಜ್ಞಾನಿಗಳ ಈ ಏಕಾಭಿಪ್ರಾಯದ ಹೇಳಿಕೆಗೆ 153 ದೇಶಗಳ 11,000 ವಿಜ್ಞಾನಿಗಳು ಸಹಮತವನ್ನು ವ್ಯಕ್ತಪಡಿಸಿದ್ದಾರೆ. ಜನಸಂಖ್ಯಾ ಬೆಳವಣಿಗೆಗೆ ತಡೆ,ಪಳೆಯುಳಿಕೆ ಇಂಧನಗಳನ್ನು ಭೂಮಿಯೊಳಗೇ ಬಿಡುವುದು,ಅರಣ್ಯ ನಾಶವನ್ನು ತಡೆಯುವುದು ಮತ್ತು ಮಾಂಸ ಭಕ್ಷಣೆಯನ್ನು ಕಡಿಮೆ ಮಾಡುವುದು ಸೇರಿದಂತೆ ತುರ್ತು ಬದಲಾವಣೆಗಳು ಅಗತ್ಯವಾಗಿದೆ ಎಂದು ಈ ವಿಜ್ಞಾನಿಗಳು ಹೇಳಿದ್ದಾರೆ.

ತಾನು ನೋಡುತ್ತಿರುವ ಹವಾಮಾನ ವೈಪರೀತ್ಯಗಳ ಹೆಚ್ಚಳ ತನ್ನನ್ನು ಈ ಉಪಕ್ರಮಕ್ಕೆ ಪ್ರಚೋದಿಸಿದ್ದವು ಎಂದು ಹೇಳಿರುವ ಒರಗಾನ್ ಸ್ಟೇಟ್ ವಿವಿಯ ಪ್ರೊಫೆಸರ್ ಹಾಗೂ ವರದಿಯ ಅಗ್ರ ಲೇಖಕ ವಿಲಿಯಂ ರಿಪಲ್ ಅವರು, ಕೇವಲ ಇಂಗಾಲದ ಹೊರಸೂಸುವಿಕೆ ಮತ್ತು ಮೇಲ್ಮೈ ತಾಪಮಾನ ಹೆಚ್ಚಳದ ಬದಲಾಗಿ ಹವಾಮಾನ ಬಿಕ್ಕಟ್ಟಿನ ಕಾರಣಗಳು ಮತ್ತು ಪರಿಣಾಮಗಳ ಮಹತ್ವಪೂರ್ಣ ಸಂಕೇತಗಳ ಸಂಪೂರ್ಣ ಶ್ರೇಣಿಯನ್ನು ಸ್ಥಾಪಿತಗೊಳಿಸುವುದು ಈ ಎಚ್ಚರಿಕೆಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News