ಕಾಶ್ಮೀರದ ಮೇಲಿನ ನಿರ್ಬಂಧ ವಿರೋಧಿಸಿ ರಾಜೀನಾಮೆ ನೀಡಿದ ಗೋಪಿನಾಥನ್ ವಿರುದ್ಧ ಆರೋಪ ಪಟ್ಟಿ
ಹೊಸದಿಲ್ಲಿ, ನ.6: ಜಮ್ಮು ಮತ್ತು ಕಾಶ್ಮೀರದ ಜನತೆಗೆ ಅಭಿವ್ಯಕ್ತಿ ಸ್ವಾತಂತ್ರ್ಯ ನಿರಾಕರಿಸಿರುವುದನ್ನು ವಿರೋಧಿಸಿ ರಾಜೀನಾಮೆ ನೀಡಿದ್ದ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥ್ ವಿರುದ್ಧ ಆರೋಪಪಟ್ಟಿ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
2 ತಿಂಗಳ ಬಳಿಕ ತನ್ನ ವಿರುದ್ಧ ಆರೋಪಪಟ್ಟಿ ದಾಖಲಿಸುವ ಮೂಲಕ ಗೃಹ ಸಚಿವಾಲಯ ತನ್ನನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಗೋಪಿನಾಥನ್ ಟ್ವೀಟ್ ಮಾಡಿದ್ದಾರೆ. ಅಂತೂ ಅವರು “ನನಗೆ ಆರೋಪಪಟ್ಟಿಯನ್ನು ಇ-ಮೇಲ್ ಮಾಡಿದ್ದಾರೆ. ಒಳ್ಳೆಯದು. ಈಗ ತನ್ನ ಮೂಗಿನಡಿಯೇ ವಕೀಲರು ಮತ್ತು ಪೊಲೀಸರ ಮಧ್ಯೆ ನಡೆಯುತ್ತಿರುವುದನ್ನು ನಿಭಾಯಿಸಲು ಗೃಹ ಸಚಿವಾಲಯಕ್ಕೆ ಅಸಾಧ್ಯವಾಗಿದೆ ಎಂಬುದನ್ನು ಬಲ್ಲೆ. ಆದ್ದರಿಂದ ರಾಷ್ಟ್ರದ ಹಿತಾಸಕ್ತಿಯಿಂದ ನಿಮ್ಮ ಕಷ್ಟದ ಸಮಯದಲ್ಲಿ ನಿಮಗೆ ಇನ್ನಷ್ಟು ತೊಂದರೆ ನೀಡಲು ನಾನು ಬಯಸುವುದಿಲ್ಲ. ಆದ್ದರಿಂದ ರಶೀದಿಯನ್ನು ಸ್ವೀಕರಿಸುತ್ತೇನೆ” ಎಂದು ಮತ್ತೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.
ಇದರ ಜೊತೆಗೆ, ತನಗೆ ಕಳುಹಿಸಿರುವ ಮೆಮೊದ ಮೊದಲನೆಯ ಪುಟವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿರುವ ಗೋಪೀನಾಥ್, ರಾಜೀನಾಮೆ ಕೊಟ್ಟು 2 ತಿಂಗಳಾದ ಬಳಿಕ ಇಲಾಖಾ ತನಿಖೆಗೆ ಸೂಚಿಸಿರುವ ಮೆಮೊ ಕಳುಹಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. “ರಾಜೀನಾಮೆ ಸಲ್ಲಿಸಿದ ಬಳಿಕ ದಾಮನ್‌ನಲ್ಲಿ ಯಾಕೆ ಕರ್ತವ್ಯ ಮುಂದುವರಿಸಿಲ್ಲ ಎಂದು ಮೆಮೊದಲ್ಲಿ ಪ್ರಶ್ನಿಸಲಾಗಿದೆ. ಆದರೆ ನಾನೊಬ್ಬ ಫಕೀರ. ಸೀದಾ ಎದ್ದವನೇ ಬ್ಯಾಗ್ ಹೆಗಲಿಗೇರಿಸಿಕೊಂಡು ಹೊರಟು ಬಂದಿದ್ದೇನೆ. ಆದರೆ ದಾಮನ್‌ನ ಆಡಳಿತ ಬಯಸಿದರೆ ಈಗಲೂ ಉಚಿತವಾಗಿ ಸೇವೆ ಸಲ್ಲಿಸಲು ಸಿದ್ಧ” ಎಂದಿದ್ದಾರೆ.
“ರಾಜಕೀಯ ಪ್ರಭಾವದ ವಿರುದ್ಧ ನನಗೆ ಎಚ್ಚರಿಕೆ ನೀಡಲಾಗಿದೆ. ಭಾರತದ ಗೃಹ ಸಚಿವಾಲಯದ ಮೇಲೆ ರಾಜಕೀಯ ಪ್ರಭಾವ ಬೀರುವ ಸಾಮರ್ಥ್ಯ ಅಮಿತ್ ಶಾರನ್ನು ಬಿಟ್ಟು ಬೇರೆ ಯಾರಿಗಿದೆ?, ಆದರೆ ಮತ್ತೊಂದು ಪ್ರಯತ್ನ ಮಾಡುತ್ತೇನೆ. ಸರ್, ದಯವಿಟ್ಟು ಕಾಶ್ಮೀರದಲ್ಲಿ ಮೂಲಭೂತ ಹಕ್ಕುಗಳನ್ನು ಮರುಸ್ಥಾಪಿಸಿ” ಎಂದು ಗೋಪೀನಾಥ್ ಮತ್ತೊಂದು ಟ್ವೀಟ್‌ನಲ್ಲಿ ಒತ್ತಾಯಿಸಿದ್ದಾರೆ.
ಗೃಹ ಸಚಿವಾಲಯ ತನಗೆ ಬೆದರಿಕೆ ಒಡ್ಡಿದೆ ಎಂದು ಆರೋಪಿಸಿರುವ ಗೋಪಿನಾಥ್, “ಈ ರೀತಿ ಗೃಹ ಇಲಾಖೆ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡಿರುವುದನ್ನು ನೋಡಿದರೆ, ನಿಮ್ಮಿಂದಾಗಿ ತನ್ನ ಐದು ವರ್ಷ ನಷ್ಟವಾಯಿತು ಎಂದು ಪ್ರಧಾನಿ ಮೋದಿ ಬೇಸರ ಪಟ್ಟಿರುವುದರಲ್ಲಿ ಆಶ್ಚರ್ಯವಿಲ್ಲ” ಎಂದು ಹೇಳಿದ್ದಾರೆ.
ಐದು ವರ್ಷಗಳ ಪ್ರಬುದ್ಧ ನಾಯಕತ್ವದ ಬಳಿಕ, ನೀವು(ಗೃಹ ಇಲಾಖೆ) ಕನಿಷ್ಟ ಬೆದರಿಸುವುದು ಮತ್ತು ಒಬ್ಬರನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡುವುದರಲ್ಲಿ ಪಾಂಡಿತ್ಯ ಗಳಿಸಿದ್ದೀರಿ ಎಂದು ನಿರೀಕ್ಷಿಸಬಹುದು. ಮಾಧ್ಯಮದವರೊಂದಿಗೆ ನನ್ನ ಸಂವಾದದಿಂದ ಭಾರತ ಸರಕಾರದ ಪ್ರತಿಷ್ಟೆಗೆ ಹಾನಿಯಾಗಿದೆ ಎಂಬುದು ನನ್ನ ವಿರುದ್ಧದ ಅಂತಿಮ ಆರೋಪವಾಗಿದೆ. ಕ್ಷಮಿಸಿ, ನನ್ನ ಸಂವಾದವಲ್ಲ ನಿಮ್ಮ ಉಪಕ್ರಮಗಳು ಈ ರೀತಿ ಮಾಡುತ್ತಿವೆ ಎಂದು ಗೋಪಿನಾಥ್ ಹೇಳಿದ್ದಾರೆ.