ನೋಟ್ ಬ್ಯಾನ್ ಎಂಬ ಭಯೋತ್ಪಾದಕ ದಾಳಿಯಿಂದ ದೇಶದ ಆರ್ಥಿಕತೆ ನಾಶ: ರಾಹುಲ್ ಗಾಂಧಿ

Update: 2019-11-08 08:38 GMT

ಹೊಸದಿಲ್ಲಿ, ನ.8: ಮೂರು ವರ್ಷಗಳ ಹಿಂದೆ 500 ಹಾಗೂ 1000 ರೂ. ವೌಲ್ಯದ ನೋಟುಗಳನ್ನು ನಿಷೇಧಿಸಿರುವ ಕೇಂದ್ರ ಸರಕಾರದ ಕ್ರಮವನ್ನು ಭಯೋತ್ಪಾದಕ ದಾಳಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರಾತೋರಾತ್ರಿ ನೋಟು ನಿಷೇಧ ಘೋಷಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಿರ್ಧಾರವನ್ನು ಟ್ವಿಟರ್‌ನ ಮೂಲಕ ತೀವ್ರವಾಗಿ ಟೀಕಿಸಿದ್ದಾರೆ.

‘‘ಭಾರತೀಯ ಆರ್ಥಿಕರಂಗವನ್ನು ಹಾಳುಗೆಡವಿದ ನೋಟು ನಿಷೇಧವೆಂಬ ಭಯೋತ್ಪಾದಕ ದಾಳಿ ನಡೆದು ಇಂದಿಗೆ ಮೂರು ವರ್ಷವಾಗಿದೆ. ಈ ದಾಳಿಯಿಂದ ಹಲವರು ಪ್ರಾಣ ಕಳೆದುಕೊಂಡರು, ಲಕ್ಷಾಂತರ ಸಣ್ಣ ಉದ್ಯಮಗಳು ಮುಚ್ಚಿಹೋದವು. ಲಕ್ಷಾಂತರ ಭಾರತೀಯರು ನಿರುದ್ಯೋಗಿಗಳಾದರು. ಕೆಟ್ಟ ನಿರ್ಧಾರದಿಂದ ಈ ಎಲ್ಲ ಅನಾಹುತಗಳಿಗೆ ಕಾರಣವಾಗಿರುವ ವ್ಯಕ್ತಿ ಈ ತನಕ ನ್ಯಾಯ ಒದಗಿಸಿಲ್ಲ’’ ಎಂದು ನೋಟ್ ಬ್ಯಾನ್‌ಗೆ ಸಂಬಂಧಿಸಿದ ಕೆಲವು ಮಾಧ್ಯಮಗಳ ವರದಿಯ ಚಿತ್ರವನ್ನು ಲಗತ್ತಿಸಿ ರಾಹುಲ್ ಟ್ವೀಟ್ ಮಾಡಿದ್ದಾರೆ.

ರಾಹುಲ್ ಗಾಂಧಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ನೋಟ್ ಬ್ಯಾನ್ ಒಂದು ದುರಂತವಾಗಿದ್ದು, ಇದರಿಂದಾಗಿ ದೇಶದ ಆರ್ಥಿಕತೆ ಅಧೋಗತಿಗೆ ತಲುಪಿದೆ ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News