'ಸರಕಾರದ ಬೆಂಬಲ ಹೊಂದಿದವರು ಇ-ಮೇಲ್ ಹ್ಯಾಕ್ ಮಾಡಿದ ಬಗ್ಗೆ ಯಾಹೂ ಎಚ್ಚರಿಕೆ'

Update: 2019-11-08 14:59 GMT
Photo: Sushanta Patronobish 

ಮುಂಬೈ, ನ.8: ಪೆಗಾಸಸ್ ಸ್ಪೈವೇರ್ ಮೂಲಕ ಹಲವು ಹೋರಾಟಗಾರರ ಚಲನವಲನಗಳ ಮೇಲೆ ನಿಗಾ ಇಡಲಾಗಿದೆ ಎಂಬ ಸುದ್ದಿ ದೇಶಾದ್ಯಂತ ಆತಂಕ ಸೃಷ್ಟಿಸಿತ್ತು. ಈ ನಡುವೆ ಕೊಲ್ಕತ್ತಾ ಮೂಲದ 42 ವರ್ಷದ ಮಾಲಿಕ್ಯುಲರ್ ಬಯಾಲಜಿಸ್ಟ್ ಪಾರ್ಥೋ ಸಾರಥಿ ರೇ ಅವರ ಯಾಹೂ ಮೇಲ್ ಗೆ ಸಂದೇಶವೊಂದು ಬಂದಿದ್ದು ಸರಕಾರಿ ಪ್ರೇಷಿತ ಜನರು ಅವರ ಖಾತೆಯಲ್ಲಿನ ಮಾಹಿತಿಯನ್ನು ಪಡೆಯುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ.

ಕ್ಯಾನ್ಸರ್ ಬಯಾಲಜಿ ತಜ್ಞರಾಗಿರುವ ರೇ ಕೊಲ್ಕತ್ತಾದ ಇಂಡಿಯನ್ ಇನ್‍ ಸ್ಟಿಟ್ಯೂಟ್ ಆಫ್ ಸಾಯನ್ಸ್ ಎಜುಕೇಶನ್ ಆ್ಯಂಡ್ ರಿಸರ್ಚ್ ಇಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿದ್ದಾರೆ.

ಹಕ್ಕುಗಳ ಹೋರಾಟಗಾರರೂ ಆಗಿರುವ ಅವರು ಎಡಪಂಥೀಯ ಮ್ಯಾಗಝಿನ್ ಸನ್ಹತಿಯ ಸ್ಥಾಪಕ ಸದಸ್ಯರಲ್ಲೊಬ್ಬರು. ಯಾಹೂ ಸಂದೇಶದ ಪ್ರಕಾರ ಅವರ ವೈಯಕ್ತಿಕ ಇಮೇಲ್ ಮಾಹಿತಿ ಸೋರಿಕೆಯಾಗಿದ್ದಿರಬಹುದು. ನವೆಂಬರ್ 5ರಂದು ತಮಗೆ ಈ ಸಂದೇಶ ಬಂದಿದೆ ಎಂದು ಅವರು ಹೇಳುತ್ತಾರೆ.

ರೇ ಅವರಿಗೆ ಎಚ್ಚರಿಕೆ ಸಂದೇಶ ರವಾನಿಸಿರುವ ಕುರಿತಂತೆ ಯಾಹೂ ಕೂಡ ದೃಢೀಕರಿಸಿದೆ. ಫಿಶಿಂಗ್ ದಾಳಿಗಳಿಂದ ಖಾತೆದಾರರನ್ನು ರಕ್ಷಿಸುವ ಉದ್ದೇಶದಿಂದ ಹಾಗೂ ಒಬ್ಬ ಖಾತೆದಾರನ ಖಾತೆ ಹ್ಯಾಕ್ ಆಗಿರುವ ಸಾಧ್ಯತೆಯಿದ್ದರೆ ಇಂತಹ ಎಚ್ಚರಿಕೆಯ ಸಂದೇಶ ಕಳುಹಿಸಲಾಗುತ್ತದೆ ಎಂದೂ ಯಾಹೂ ತಿಳಿಸಿದೆ.

ಮಾಲ್ವೇರ್‍ನಿಂದ ರೇ ಅವರು ಮೇ 2019 ಹಾಗೂ ಅಕ್ಟೋಬರ್ 2019ರಲ್ಲೂ ಬಾಧಿತರಾಗಿದ್ದರೆಂದು ತಿಳಿದು ಬಂದಿದೆ.

ಭೀಮಾ ಕೋರೆಗಾಂವ್ ಪ್ರಕರಣ ಸಂಬಂಧ ಬಂಧನದಲ್ಲಿರುವ ಸಾಮಾಜಿಕ ಹೋರಾಟಗಾರ್ತಿ ಹಾಗೂ ವಕೀಲೆ ಸುಧಾ ಭಾರದ್ವಾಜ್ ಜತೆ  ರೇ ಸಂಪರ್ಕದಲ್ಲಿದ್ದರೆಂಬುದು ಇಲ್ಲಿ ಮಹತ್ವದ ಅಂಶವಾಗಿದೆ.

ನವೆಂಬರ್ 5ರಂದು ತನ್ನ ವೈಯಕ್ತಿಕ ಇಮೇಲ್ ಖಾತೆಯಿಂದ ಸಂದೇಶವೊಂದನ್ನು ತಾನು ಸ್ವೀಕರಿಸಿರುವುದಾಗಿ ರೇ ಅವರು ವೈರ್ ಪತ್ರಿಕೆಗೆ ತಿಳಿಸಿದ್ದಾರೆ.

‘‘ಸರಕಾರಿ ಬೆಂಬಲಿತ ಸಂಸ್ಥೆಯೊಂದು ಡಿಜಿಟಲ್ ತಂತ್ರಜ್ಞಾನದ ಮೂಲಕ ತನ್ನನ್ನು ಗುರಿಯಿರಿಸಿದೆಯೆಂದು ಸಂದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಈ ಬಗ್ಗೆ ಯಾಹೂ ವೆಬ್‌ಸೈಟ್ ಅನ್ನು ಪರಿಶೀಲಿಸಿದಾಗ, ಯಾರಾದ್ದಾದರೂ ಖಾತೆಯಲ್ಲಿ ಏನಾದರೂ ಅಸಹಜವಾದ ಚಟುವಟಿಕೆಗಳು ನಡೆಯುತ್ತಿರುವುದು ಗಮನಕ್ಕೆ ಬಂದಾಗ ಇಂತಹ ಇಮೇಲ್‌ಗಳನ್ನು ಕಳುಹಿಸುತ್ತಿದೆಯೆಂಬುದು ಪತ್ತೆಹಚ್ಚಿರುವುದಾಗಿ ಅವರು ಹೇಳಿದ್ದಾರೆ.

ಇಮೇಲ್‌ನಲ್ಲಿ ಉಲ್ಲೇಖಿಸಲಾದ ಹಲವಾರು ಲಿಂಕ್‌ಗಳನ್ನು ತಾನು ಪರಿಶೀಲಿಸಿದಾಗ, ಅದು ನಿಜವಾದ ಇಮೇಲ್ ಎಂಬುದಾಗಿ ಗಮನಕ್ಕೆ ಬಂದಿತೆಂದು ಅವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News