'ಹಾಲಿನಲ್ಲಿ ಚಿನ್ನವಿದೆ' ಎಂದ ಬಿಜೆಪಿ ನಾಯಕ: ಹಸುವನ್ನು ಅಡವಿಟ್ಟು ಸಾಲ ಕೇಳಿದ ರೈತ!

Update: 2019-11-08 11:36 GMT

ಹೊಸದಿಲ್ಲಿ, ನ.8: ದೇಸಿ ದನಗಳ ಹಾಲಿನಲ್ಲಿ ಚಿನ್ನವಿದೆ ಎಂದು ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಇತ್ತೀಚೆಗೆ ಹೇಳಿ ಸುದ್ದಿಯಾದವರು. ಇದೀಗ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಹೈನು ಕೃಷಿಕನೊಬ್ಬ ತನ್ನ ದನ ಹಾಗೂ ಕರುವನ್ನು ಅಡವಿಟ್ಟು ಸಾಲ ಪಡೆಯಲು ಸ್ಥಳೀಯ ಮಣಪ್ಪುರಂ ಗೋಲ್ಡ್ ಲೋನ್ ಕಚೇರಿಗೆ ಹೋದ ಘಟನೆ ವರದಿಯಾಗಿದೆ.

ಸುಸಾಂತ ಮಂಡಲ್ ಎಂಬ ಹೈನು ಕೃಷಿಕ ಮಣಪ್ಪುರಂ ಕಚೇರಿಯೆದುರು ಒಂದು ಗಂಟೆಗೂ  ಹೆಚ್ಚು ಸಮಯ ನಿಂತಿದ್ದರೂ ಆತನಿಗೆ ಕಚೇರಿಯ ಒಳಗೆ ಪ್ರವೇಶಿಸಲು ಅನುಮತಿಸಲಾಗಿಲ್ಲ.

ಈ ಕುರಿತಂತೆ ಪ್ರತಿಕ್ರಿಯಿಸಿದ ದಿಲೀಪ್ ಘೋಷ್ "ಈ ಕೃಷಿಕ ಸೋಶಿಯಲ್ ಮೀಡಿಯಾ ಟ್ರೋಲ್‍ಗಳನ್ನು ಫಾಲೋ ಮಾಡುತ್ತಿದ್ದಾರೆಯೇ?'' ಎಂದು ಪ್ರಶ್ನಸಿದ್ದಾರೆ. "ದನದ ಹಾಲು ಕುಡಿಯದೆ ಗೋಮಾಂಸ ಭಕ್ಷಿಸುವುದರಲ್ಲಿಯೇ ವ್ಯಸ್ತರಾಗಿರುವ ತೃಣಮೂಲ ಸದಸ್ಯರ ಕೆಲಸವಿದು'' ಎಂದು ಅವರು ಹೇಳಿದ್ದಾರೆ.

ಆದರೆ ಹೈನು ಕೃಷಿಕ ಮಂಡಲ್ ಶಾಲೆಯನ್ನು ಅರ್ಧದಲ್ಲಿಯೇ ಬಿಟ್ಟವನಾಗಿದ್ದು ಸ್ಮಾರ್ಟ್ ಫೋನ್ ಕೂಡ ಬಳಸುತ್ತಿಲ್ಲ. ಘೋಷ್ ಹೇಳಿಕೆಯ ಬಗ್ಗೆ ಆತನಿಗೆ ಯಾರೋ ಹೇಳಿದ್ದನ್ನು ನಂಬಿ ಆತ ಮಣಪ್ಪುರಂ ಕಚೇರಿಗೆ  ತೆರಳಿರಬಹುದು ಎಂದು ಆತನ ನೆರೆಮನೆಯ ವ್ಯಕ್ತಿಯೊಬ್ಬ ಹೇಳಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News