2,000 ರೂ. ನೋಟು ನಿಷೇಧಿಸಬಹುದು ಎಂದ ಮಾಜಿ ವಿತ್ತ ಕಾರ್ಯದರ್ಶಿ ಗರ್ಗ್!

Update: 2019-11-08 11:39 GMT

ಹೊಸದಿಲ್ಲಿ, ನ.8: ದೇಶದಲ್ಲಿ ಈಗಿರುವ 2000 ರೂ. ಮುಖಬೆಲೆಯ ನೋಟುಗಳ ಪೈಕಿ ಹೆಚ್ಚಿನವು ವಾಸ್ತವವಾಗಿ ಚಲಾವಣೆಯಲ್ಲಿಲ್ಲ, ಬದಲಾಗಿ ಅವುಗಳನ್ನು ದಾಸ್ತಾನಿರಿಸಲಾಗಿದೆ. ಆದುದರಿಂದ ಯಾವುದೇ ಸಮಸ್ಯೆಯಿಲ್ಲದೆ ಅವುಗಳನ್ನು ಅಮಾನ್ಯೀಕರಣಗೊಳಿಸಬಹುದು ಎಂಬ ಸಲಹೆಯನ್ನು ಮಾಜಿ ವಿತ್ತ ಕಾರ್ಯದರ್ಶಿ ಸುಭಾಶ್ ಚಂದ್ರ ಗರ್ಗ್ ಗುರುವಾರ ಪ್ರಕಟಗೊಂಡ ತಮ್ಮ 72 ಪುಟಗಳ ಟಿಪ್ಪಣಿಯಲ್ಲಿ ಹೇಳಿದ್ದಾರೆ.

ವಿತ್ತ ಕಾರ್ಯದರ್ಶಿ ಹುದ್ದೆಯಿಂದ ವರ್ಗಾವಣೆಗೊಂಡು ಇಂಧನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದ ಗರ್ಗ್ ಅಕ್ಟೋಬರ್ 31ರಂದು ವಿಆರ್‍ಎಸ್ ಪಡೆದುಕೊಂಡಿದ್ದರು

2000 ರೂ. ನೋಟು ಅಮಾನ್ಯೀಕರಣ ಹೊರತಾಗಿ ಸಾರ್ವಜನಿಕ ರಂಗದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವುದು, ಸರಕಾರದ ಸಾಲವನ್ನು ಆರ್‍ ಬಿಐ ಬದಲು ಸರಕಾರವೇ ನಿರ್ವಹಿಸುವುದು, ಬಜೆಟ್ ಹೊರತಾಗಿ ಸಾಲ ಪಡೆಯುವುದನ್ನು  ನಿಲ್ಲಿಸುವುದು, ಇವೇ ಮುಂತಾದ ಸಲಹೆಗಳನ್ನೂ ಅವರು ನೀಡಿದ್ದಾರೆ.

ಹೆಚ್ಚಾಗಿರುವ ದೇಶದ ಸಾಲದ ಪ್ರಮಾಣವು ಕ್ರೆಡಿಟ್ ರೇಟಿಂಗ್ ಅನ್ನು ಬಾಧಿಸುತ್ತಿದೆ ಎಂದು ಹೇಳಿದ ಅವರು ಆದಾಯದ ಹೆಚ್ಚಿನ ಭಾಗ ಈ ಸಾಲದ ಪ್ರಮಾಣ ಇಳಿಸಲು ಬಳಸುವ ಅನಿವಾರ್ಯತೆಯಿದೆ ಎಂದರು.

ಲ್ಯಾಂಡ್ ಮ್ಯಾನೇಜ್ಮೆಂಟ್ ಕಾರ್ಪೊರೇಶನ್ ಸ್ಥಾಪನೆಗೂ ಸಲಹೆ ನೀಡಿರುವ ಅವರು ನಷ್ಟದಲ್ಲಿರುವ ಸಾರ್ವಜನಿಕ ರಂಗದ ಸಂಸ್ಥೆಗಳ ಜಮೀನು ಹಾಗೂ ಕಟ್ಟಡಗಳನ್ನು  ಈ ನಿಗಮಕ್ಕೆ ವರ್ಗಾಯಿಸಬೇಕೆಂದು ಸಲಹೆ ನೀಡಿದ್ದಾರೆ. ವಿದೇಶಿ ಕರೆನ್ಸಿಗಳಲ್ಲಿ ಸಾವರಿನ್ ಬಾಂಡ್ ಗಳಿಗೂ ಅವರು ಸಲಹೆ ನೀಡಿದ್ದಾರೆ.

ತಾವು ನಿವೃತ್ತರಾಗುವ ಮುನ್ನ  ಕಚೇರಿಯಲ್ಲಿ ತಮ್ಮ 72 ಪುಟಗಳ ಟಿಪ್ಪಣಿಯ ಒಂದು ಪ್ರತಿಯನ್ನು  ಸರಕಾರದ ಹಿರಿಯ ಅಧಿಕಾರಿಗಳಿಗೆ ನೀಡಿದ್ದಾಗಿಯೂ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News