ಸೋನಿಯಾ ಗಾಂಧಿ ಕುಟುಂಬದ ಎಸ್‍ಪಿಜಿ ಭದ್ರತೆ ಹಿಂದಕ್ಕೆ

Update: 2019-11-08 12:39 GMT

ಹೊಸದಿಲ್ಲಿ : ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತವರ ಮಕ್ಕಳಾದ ರಾಹುಲ್ ಗಾಂದಿ ಮತ್ತು ಪ್ರಿಯಾಂಕ ವಾದ್ರ ಅವರಿಗೆ ಒದಗಿಸಲಾಗಿದ್ದ ಎಸ್‍ಪಿಜಿ ಭದ್ರತೆಯನ್ನು ವಾಪಸ್ ಪಡೆಯಲು ಸರಕಾರ ನಿರ್ಧರಿಸಿದ್ದು, ಅವರು ಇನ್ನು ಮುಂದೆ ಝೆಡ್ ಪ್ಲಸ್ ಕೆಟಗರಿ ಭದ್ರತೆ ಪಡೆಯಲಿದ್ದಾರೆ.

ಆದರೆ ಈ ಕುರಿತಂತೆ ಸ್ವತಃ ಸೋನಿಯಾ ಗಾಂಧಿ, ರಾಹುಲ್ ಹಾಗೂ ಪ್ರಿಯಾಂಕಾಗೆ ಮಾಹಿತಿ ನೀಡಲಾಗಿರಲಿಲ್ಲ ಎಂದು ತಿಳಿದು ಬಂದಿದ್ದು ಅವರು ಮಾಧ್ಯಮ ವರದಿಗಳಿಂದ ಈ ಬಗ್ಗೆ ತಿಳಿದುಕೊಂಡಿದ್ದಾರೆಂದು ಹೇಳಲಾಗಿದೆ.

ಭದ್ರತಾ ವಿಚಾರಗಳ ಪರಿಶೀಲನೆ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಸದ್ಯ ಎಸ್‍ಪಿಜಿ ರಕ್ಷಣೆ ಕೇವಲ ಪ್ರಧಾನಿ ನರೇಂದ್ರ ಮೋದಿಗೆ ಒದಗಿಸಲಾಗಿದೆ. ಕೆಲವೊಮ್ಮೆ ಸೋನಿಯಾ ಗಾಂಧಿ ಕುಟುಂಬ ಎಸ್‍ಪಿಜಿ ಜತೆ ಸಹಕರಿಸಿಲ್ಲ ಹಾಗೂ ಸುಗಮ ಕಾರ್ಯನಿರ್ವಹಣೆಗೆ ಅಡ್ಡಿಯುಂಟು ಮಾಡಿದೆ ಎಂದು ಹೇಳಲಾಗಿದೆ.

ಇದೊಂದು ವೈಯಕ್ತಿಕ ದ್ವೇಷದ ಕ್ರಮವಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಪ್ರತಿಕ್ರಿಯಿಸಿದ್ದಾರೆ. ರಾಜೀವ್ ಗಾಂಧಿ 1991ರಲ್ಲಿ ಹತ್ಯೆಯಾದ ನಂತರದಿಂದ ಅವರ ಕುಟುಂಬಕ್ಕೆ ಎಸ್‍ಪಿಜಿ ರಕ್ಷಣೆಯೊದಗಿಸಲಾಗುತ್ತಿದೆ. ಇದೀಗ ಅದನ್ನು ವಾಪಸ್ ಪಡೆದಿರುವುದು ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News