2023ರ ಪುರುಷರ ಹಾಕಿ ವಿಶ್ವಕಪ್‌ಗೆ ಭಾರತ ಆತಿಥ್ಯ

Update: 2019-11-08 18:46 GMT

ಲಾಸನ್,ನ.8: ಭಾರತ 2023ರ ಜನವರಿ 13ರಿಂದ 29ರ ತನಕ ಪುರುಷರ ಹಾಕಿ ವಿಶ್ವಕಪ್‌ನ ಆತಿಥ್ಯವಹಿಸಿಕೊಳ್ಳಲಿದೆ ಎಂದು ಅಂತರ್‌ರಾಷ್ಟ್ರೀಯ ಹಾಕಿ ಒಕ್ಕೂಟ(ಎಫ್‌ಐಎಚ್)ಶುಕ್ರವಾರ ಇಲ್ಲಿ ಘೋಷಿಸಿದೆ. ಈ ಮೂಲಕ ಭಾರತ ಸತತ ಎರಡನೇ ಬಾರಿ ವಿಶ್ವಕಪ್ ಆತಿಥ್ಯವಹಿಸಿಕೊಳ್ಳುವ ಅಪೂರ್ವ ಅವಕಾಶ ಪಡೆದಿದೆ.

 2022ರ ಜು.1ರಿಂದ 22ರ ತನಕ ನಡೆಯಲಿರುವ ಮಹಿಳೆಯರ ವಿಶ್ವಕಪ್‌ನ್ನು ಸ್ಪೇನ್ ಹಾಗೂ ನೆದರ್‌ಲ್ಯಾಂಡ್ ಜಂಟಿಯಾಗಿ ಆಯೋಜಿಸಲಿವೆ. ಶುಕ್ರವಾರ ನಡೆದ ಎಫ್‌ಐಎಚ್‌ನ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪುರುಷರ ಹಾಗೂ ಮಹಿಳಾ ವಿಶ್ವಕಪ್‌ನ ಸ್ಥಳಗಳನ್ನು ಆತಿಥೇಯ ರಾಷ್ಟ್ರಗಳು ಘೋಷಣೆ ಮಾಡಲಿವೆ ಎಂದು ಎಫ್‌ಐಎಚ್ ತಿಳಿಸಿದೆ.

ಭಾರತ ನಾಲ್ಕು ಬಾರಿ ಪುರುಷರ ಹಾಕಿ ವಿಶ್ವಕಪ್‌ನ ಆತಿಥ್ಯವಹಿಸಿಕೊಂಡಿರುವ ಮೊತ್ತ ಮೊದಲ ರಾಷ್ಟ್ರವಾಗಿದೆ. ಈ ಹಿಂದೆ 1982(ಮುಂಬೈ), 2010(ಹೊಸದಿಲ್ಲಿ) ಹಾಗೂ 2018(ಭುವನೇಶ್ವರ)ರ ವಿಶ್ವಕಪ್‌ನ್ನು ಆಯೋಜಿಸಿತ್ತು. ನೆದರ್‌ಲ್ಯಾಂಡ್ ಮೂರು ಬಾರಿ ಪುರುಷರ ಹಾಕಿ ಟೂರ್ನಮೆಂಟ್‌ನ್ನು ಸಂಘಟಿಸಿದೆ. ಭಾರತ 2023ಕ್ಕೆ ಸ್ವಾತಂತ್ರ ಪಡೆದು 75ನೇ ವರ್ಷ ಪೂರೈಸಲಿದೆ. ಆ ಸಂದರ್ಭದಲ್ಲಿ ದೇಶದಲ್ಲಿ ಕ್ರೀಡೆಯನ್ನು ಬೆಳೆಸುವ ಉದ್ದೇಶದಿಂದ ವಿಶ್ವಕಪ್‌ನ ಆತಿಥ್ಯವಹಿಸಿಕೊಳ್ಳಲು ಹಾಕಿ ಇಂಡಿಯಾ ಬಯಸಿತ್ತು.

2023ರ ಆವೃತ್ತಿಯ ಪುರುಷರ ವಿಶ್ವಕಪ್‌ನ ಆತಿಥ್ಯವಹಿಸಿಕೊಳ್ಳಲು ಭಾರತವಲ್ಲದೆ, ಬೆಲ್ಜಿಯಂ ಹಾಗೂ ಮಲೇಶ್ಯಾ ರಾಷ್ಟ್ರಗಳು ಬಿಡ್ ಸಲ್ಲಿಸಿದ್ದವು.

ಮಹಿಳೆಯರ ವಿಶ್ವಕಪ್ ಆತಿಥ್ಯಕ್ಕೆ ಐದು ದೇಶಗಳಾದ-ಜರ್ಮನಿ, ಸ್ಪೇನ್,ನೆದರ್‌ಲ್ಯಾಂಡ್, ಮಲೇಶ್ಯಾ ಹಾಗೂ ನ್ಯೂಝಿಲ್ಯಾಂಡ್ ಬಿಡ್ ಸಲ್ಲಿಸಿದ್ದವು. 2023ರ ವಿಶ್ವಕಪ್‌ನಲ್ಲಿ ಈ ಹಿಂದಿನ ಮಾದರಿಯಲ್ಲಿ ಟೂರ್ನಿ ನಡೆಯಲಿದೆ.

ಕ್ರೀಡೆಯ ಬೆಳವಣಿಗೆ ಹಾಗೂ ಟೂರ್ನಿಯ ಆದಾಯ ಗಳಿಕೆಯ ಸಾಮರ್ಥ್ಯವನ್ನು ಮನಸ್ಸಿನಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಲಾಗಿದೆ. ಈ ಪ್ರತಿಷ್ಠಿತ ಟೂರ್ನಿಗಳನ್ನು ಆಯೋಜಿಸಲು ಎಫ್‌ಐಎಚ್ ಉತ್ತಮ ಬಿಡ್‌ಗಳನ್ನು ಸಲ್ಲಿಸಿತ್ತು. ಆಯ್ಕೆ ಮಾಡಲು ನಮಗೆ ಕಷ್ಟವಾಯಿತು.ವಿಶ್ವದೆಲ್ಲೆಡೆ ಹಾಕಿಯನ್ನು ಬೆಳೆಸುವುದು ಎಫ್‌ಐಎಚ್‌ನ ಪ್ರಮುಖ ಗುರಿ. ಇದಕ್ಕೆ ಹೂಡಿಕೆಯ ಅಗತ್ಯವಿದೆ. ಪ್ರತಿ ಬಿಡ್‌ನ ಆದಾಯ ಉತ್ಪತ್ತಿ ಸಾಮರ್ಥ್ಯ ನಮ್ಮ ನಿರ್ಧಾರದಲ್ಲಿ ಅತ್ಯಂತ ಮುಖ್ಯ ಪಾತ್ರವಹಿಸಿವೆ ಎಂದು ಎಫ್‌ಐಎಚ್ ಸಿಇಒ ಥಿಯೆರಿ ವೀಲ್ ಹೇಳಿದ್ದಾರೆ. ಭಾರತ ಇತ್ತೀಚೆಗಿನ ದಿನಗಳಲ್ಲಿ ವಿಶ್ವಕಪ್ ಅಲ್ಲದೆ ಇತರ ಪ್ರಮುಖ ಟೂರ್ನಿಗಳನ್ನು ಆಯೋಜಿಸಿದೆ. ಇದರಲ್ಲಿ 2014ರ ಎಫ್‌ಐಎಚ್ ಚಾಂಪಿಯನ್ಸ್ ಟ್ರೋಫಿ, 2016ರ ಎಫ್‌ಐಎಚ್ ಜೂನಿಯರ್ ಪುರುಷರ ವಿಶ್ವಕಪ್, 2017ರ ಎಫ್‌ಐಎಚ್ ಹಾಕಿ ವಿಶ್ವಕಪ್ ಲೀಗ್ ಫೈನಲ್, 2019ರ ಎಫ್‌ಐಎಚ್ ಪುರುಷರ ಸಿರೀಸ್ ಫೈನಲ್ಸ್ ಹಾಗೂ ಇತ್ತೀಚೆಗಷ್ಟೇ ಎಫ್‌ಐಎಚ್ ಹಾಕಿ ಒಲಿಂಪಿಕ್ಸ್ ಕ್ವಾಲಿಫೈಯರ್‌ನ್ನು ಯಶಸ್ವಿಯಾಗಿ ಆಯೋಜಿಸಿತ್ತು.

‘‘2023ರ ಪುರುಷರ ಹಾಕಿ ವಿಶ್ವಕಪ್ ಬಿಡ್‌ನ್ನು ಗೆದ್ದಿರುವುದಕ್ಕೆ ನಮಗೆಲ್ಲರಿಗೂ ತುಂಬಾ ಸಂತೋಷವಾಗಿದೆ. ನಮ್ಮ ದೇಶದ 75ನೇ ವರ್ಷದ ಸ್ವಾತಂತ್ರೋತ್ಸವದ ಆಚರಣೆಯ ವೇಳೆಗೆ ವಿಶ್ವಕಪ್ ಆಯೋಜಿಸುವ ಅಪೂರ್ವ ಅವಕಾಶ ನಮಗೆ ಲಭಿಸಿದೆ. 2018ರಲ್ಲಿ ಆಯೋಜಿಸಿದ್ದ 14ನೇ ಆವೃತ್ತಿಯ ಹಾಕಿ ವಿಶ್ವಕಪ್ ಶ್ರೇಷ್ಠ ಟೂರ್ನಿಯಾಗಿ ಗುರುತಿಸಿಕೊಂಡಿತ್ತು. ಮತ್ತೊಂದು ವಿಶ್ವಕಪ್ ಆಯೋಜಿಸುವ ವಿಶ್ವಾಸ ನಮಗಿತ್ತು. ನಾವು ಕಳೆದ ವರ್ಷ ಅನುಭವವನ್ನು ಬಳಸಿಕೊಂಡು 2023ರಲ್ಲಿ ಮತ್ತಷ್ಟು ಉತ್ತಮವಾಗಿ ಪುರುಷರ ಹಾಕಿ ವಿಶ್ವಕಪ್‌ನ್ನು ಆಯೋಜಿಸಲಿದ್ದೇವೆ’’ ಎಂದು ಹಾಕಿ ಇಂಡಿಯಾ ಅಧ್ಯಕ್ಷ ಮುಹಮ್ಮದ್ ಮುಷ್ತಾಕ್ ಅಹ್ಮದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News