ಭಾರತದ 11ನೇ ಒಲಿಂಪಿಕ್ಸ್ ಕೋಟಾ ಗಿಟ್ಟಿಸಿಕೊಂಡ ಶೂಟರ್ ಚಿಂಕಿ ಯಾದವ್

Update: 2019-11-08 18:48 GMT

ದೋಹಾ, ನ.8: ಏಶ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌ನ ಮೊದಲ ಸುತ್ತಿನ ಅರ್ಹತಾ ಪಂದ್ಯದಲ್ಲಿ ಜೀವನಶ್ರೇಷ್ಠ ಸ್ಕೋರ್(588)ಗಳಿಸಿದ ಚಿಂಕಿ ಯಾದವ್ ಶೂಟಿಂಗ್‌ನಲ್ಲಿ ಭಾರತದ 11ನೇ ಟೋಕಿಯೊ ಒಲಿಂಪಿಕ್ಸ್ ಕೋಟಾವನ್ನು ಬಾಚಿಕೊಂಡರು.

ಶುಕ್ರವಾರ ನಡೆದ 14ನೇ ಆವೃತ್ತಿಯ ಏಶ್ಯನ್ ಚಾಂಪಿಯನ್‌ಶಿಪ್‌ನ ಮಹಿಳೆಯರ 25 ಮೀ.ಪಿಸ್ತೂಲ್ ಸ್ಪರ್ಧೆಯಲ್ಲಿ ಪಿಂಕಿ ಪದಕ ಗೆಲ್ಲದೇ ಇದ್ದರೂ ಒಲಿಂಪಿಕ್ಸ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಹಾಗೂ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿರುವ ಚಿಂಕಿ ಯಾದವ್ ಫೈನಲ್‌ನಲ್ಲಿ ತನ್ನ ಅರ್ಹತಾ ಪಂದ್ಯದ ಫಾರ್ಮ್‌ನ್ನು ಪುನರಾವರ್ತಿಸಲು ವಿಫಲವಾಗಿ 116 ಸ್ಕೋರನ್ನು ಗಳಿಸಿ ಆರನೇ ಸ್ಥಾನ ಪಡೆದಿದ್ದಾರೆ. ‘‘ನನಗೆ ಎಷ್ಟೊಂದು ಖುಷಿಯಾಗಿದೆ ಎಂದು ವರ್ಣಿಸಲು ಸಾಧ್ಯವಾಗುತ್ತಿಲ್ಲ. ಇದು ನನ್ನ ಶ್ರೇಷ್ಠ ಪ್ರದರ್ಶನವಾಗಿದೆ. ನನ್ನ ಕೋಚ್‌ಗಳು ಅದರಲ್ಲೂ ಮುಖ್ಯವಾಗಿ ಜೈಪಾಲ್ ಸರ್, ಭೋಪಾಲ್ ಅಕಾಡಮಿ ಹಾಗೂ ಎನ್‌ಆರ್‌ಎಐನ ಪ್ರತಿಯೊಬ್ಬರಿಗೂ ಶ್ರೇಯಸ್ಸು ಸಲ್ಲಿಸಲು ಬಯಸುವೆ’’ ಎಂದು ಚಿಂಕಿ ಟೂರ್ನಿಯ ಬಳಿಕ ಪ್ರತಿಕ್ರಿಯಿಸಿದರು.

21ರ ಹರೆಯದ ಚಿಂಕಿ ಕ್ವಾಲಿಫಿಕೇಶನ್ ಹಂತದಲ್ಲಿ ಸರಾಸರಿ 588 ಅಂಕ ಗಳಿಸಿ ಎರಡನೇ ಸ್ಥಾನ ಪಡೆದರು. ಥಾಯ್ಲೆಂಡ್‌ನ ನಫಸ್ವಾನ್ ಯಂಗ್‌ಫೈಬೂನ್(590)ಮೊದಲ ಸ್ಥಾನ ಪಡೆದಿದ್ದಾರೆ. ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶಿಸಿದ ಕಾರಣ ಚಿಂಕಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು. ಈ ಹಿಂದೆ ನಡೆದ ಸ್ಪರ್ಧೆಗಳಲ್ಲಿ ಭಾರತದ 8 ಫೈನಲಿಸ್ಟ್‌ಗಳ ಪೈಕಿ ನಾಲ್ವರು ಈಗಾಗಲೇ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುವ ಅವಕಾಶ ಪಡೆದಿದ್ದಾರೆ. ರಾಹಿ ಸರ್ನೊಬಾಟ್ ಬಳಿಕ 25 ಮೀ.ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತ ಗಳಿಸಿದ ಎರಡನೇ ಒಲಿಂಪಿಕ್ಸ್ ಕೋಟಾ ಇದಾಗಿದೆ. ಸರ್ನೊಬಾಟ್ ಈ ವರ್ಷಾರಂಭದಲ್ಲಿ ಮ್ಯೂನಿಚ್ ವಿಶ್ವಕಪ್‌ನಲ್ಲಿ 25 ಮೀ.ಪಿಸ್ತೂಲ್ ಸ್ಪರ್ಧೆಯಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಶೂಟರ್ ಆಗಿದ್ದರು. ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿದ್ದ ಇತರ ಶೂಟರ್‌ಗಳಾದ ಅನ್ನು ರಾಜ್ ಸಿಂಗ್(575) ಹಾಗೂ ನೀರಜ್ ಕೌರ್(572) ಕ್ರಮವಾಗಿ 21ನೇ ಹಾಗೂ 27ನೇ ಸ್ಥಾನ ಪಡೆದಿದ್ದಾರೆ. ಪೈಟಿಂಗ್‌ನಲ್ಲಿ ಆಸಕ್ತಿ ಹೊಂದಿರುವ ಚಿಂಕಿ ತನ್ನ ಆರಂಭಿಕ ವರ್ಷದಲ್ಲಿ ನಾಲ್ಕು ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಭಾಗವಹಿಸಿದ್ದರು. 2012ರಿಂದ ಚಿಂಕಿ ಶೂಟಿಂಗ್‌ನಲ್ಲಿ ಸಕ್ರಿಯರಾಗಿದ್ದು, ರಾಷ್ಟ್ರೀಯ ಶೂಟಿಂಗ್ ತಂಡಕ್ಕೆ ಈ ವರ್ಷ ಪಾದಾರ್ಪಣೆ ಮಾಡಿದ್ದಾರೆ. ಭಾರತ ಈಗಾಗಲೇ 10 ಮೀ. ಏರ್‌ರೈಫಲ್(ಪುರುಷ, ಮಹಿಳಾ ವಿಭಾಗ), 50 ಮೀ.3 ಪೊಸಿಶನ್ ್ಸ(ಪುರುಷ), 10 ಮೀ. ಏರ್ ಪಿಸ್ತೂಲ್(ಪುರುಷ ಹಾಗೂ ಮಹಿಳಾ ವಿಭಾಗ) ಹಾಗೂ 25 ಮೀ. ಏರ್ ಪಿಸ್ತೂಲ್(ಮಹಿಳಾ ವಿಭಾಗ)ಸ್ಪರ್ಧೆಯಲ್ಲಿ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದೆ.

ವಿವಾನ್, ಇಶಾಗೆ ಅವಳಿ ಚಿನ್ನ

ದೋಹಾ, ನ.8: ಏಶ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌ನ ಜೂನಿಯರ್ ವಿಭಾಗದಲ್ಲಿ ವಿವಾನ್ ಕಪೂರ್ ಹಾಗೂ ಇಶಾ ಸಿಂಗ್ ತಲಾ ಎರಡು ಚಿನ್ನ ಪದಕ ಜಯಿಸಿ ಗಮನಾರ್ಹ ಪ್ರದರ್ಶನ ನೀಡಿದರು. ಜೂನಿಯರ್ ಮೆನ್ಸ್ ಟ್ರಾಪ್ ಸ್ಪರ್ಧೆಯಲ್ಲಿ ವಿವಾನ್ ವೈಯಕ್ತಿಕ ವಿಭಾಗದಲ್ಲಿ 45 ಅಂಕ ಗಳಿಸಿ ಚಿನ್ನ ಜಯಿಸಿದರೆ, ಸಹ ಆಟಗಾರ ಭುವನೀಶ್ ಮೆಂಡಿರಟ್ಟ ಬೆಳ್ಳಿ ಜಯಿಸಿದರು. ವಿವಾನ್, ಭುವನೇಶ್ ಜೋಡಿ ಮಾನವಾದಿತ್ಯ ಸಿಂಗ್ ರಾಥೋರ್ ಜೊತೆಗೂಡಿ ಟೀಮ್ ವಿಭಾಗದಲ್ಲಿ ಚಿನ್ನ ಜಯಿಸಿತು. ವಿವಾನ್ ಸ್ಪರ್ಧೆಯ ಮೊದಲ ದಿನ ಮನೀಶಾ ಕೀರ್ ಜೊತೆಗೂಡಿ ಜೂನಿಯರ್ ಟ್ರಾಪ್ ಮಿಕ್ಸೆಡ್ ಟೀಮ್ ಇವೆಂಟ್‌ನಲ್ಲಿ ಎರಡನೇ ಚಿನ್ನ ಜಯಿಸಿದರು. ಯುವ ಶೂಟರ್ ಇಶಾ 10 ಮೀ. ಏರ್ ಪಿಸ್ತೂಲ್ ಮಹಿಳಾ ಜೂನಿಯರ್ ಸ್ಪರ್ಧೆಯಲ್ಲಿ ವೈಯಕ್ತಿಕ ಹಾಗೂ ಟೀಮ್ ವಿಭಾಗದಲ್ಲಿ ಡಬಲ್ ಗೋಲ್ಡ್ ಗೆದ್ದರು. 579 ಅಂಕ ಗಳಿಸಿ ಫೈನಲ್‌ಗೆ ತಲುಪಿದ್ದ ಇಶಾ 242.2 ಅಂಕ ಗಳಿಸಿ ಚಿನ್ನ ಜಯಿಸಿದರು. ಇಶಾ, ಪ್ರಿಯಾ ಹಾಗೂ ಯುವಿಕಾ ತೋಮರ್ 1721 ಅಂಕಗಳಿಸಿ ಟೀಮ್ ವಿಭಾಗದಲ್ಲಿ ಚಿನ್ನಜಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News