ನೋಟು ರದ್ದತಿ ನಂತರ ದಾಖಲೆಯ 22.57 ಲಕ್ಷ ಕೋಟಿ ರೂ.ಗೆ ಏರಿಕೆಯಾದ ನಗದು ಪ್ರಮಾಣ

Update: 2019-11-09 09:14 GMT

ಹೊಸದಿಲ್ಲಿ, ನ.9: ನವೆಂಬರ್ 8, 2016ರಂದು 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟುಗಳ ಅಮಾನ್ಯೀಕರಣದ ನಂತರದ ಮೂರು ವರ್ಷಗಳಲ್ಲಿ ದೇಶದ ಅರ್ಥವ್ಯವಸ್ಥೆಯಲ್ಲಿ ಚಲಾವಣೆಯಲ್ಲಿರುವ ನಗದು ಪ್ರಮಾಣ ಶೇ.25.63ರಷ್ಟು ಏರಿಕೆಯಾಗಿ ನವೆಂಬರ್ 1, 2019ರ ತನಕ ದಾಖಲೆ 22.57 ಲಕ್ಷ ಕೋಟಿ ರೂ.ಗೆ ಏರಿದೆ. ಈ ಪ್ರಮಾಣ ನವೆಂಬರ್ 4, 2016ರಂದು ರೂ 17.97 ಲಕ್ಷ ಕೋಟಿಯಷ್ಟಿತ್ತು.

ಕಳೆದ ಮೂರು ವರ್ಷಗಳಲ್ಲಿ ದೇಶದಲ್ಲಿ ಚಲಾವಣೆಯಾಗುತ್ತಿರುವ ನಗದಿನಲ್ಲಿ 4,60,000 ಕೋಟಿ ರೂ.  ಏರಿಕೆಯಾಗಿರುವುದು ದೇಶದಲ್ಲಿ  ಡಿಜಿಟಲ್ ವ್ಯವಹಾರಗಳ ಉತ್ತೇಜನದ ಹೊರತಾಗಿಯೂ ವ್ಯವಹಾರಗಳಲ್ಲಿ ನಗದು ಹೆಚ್ಚಾಗಿ ಬಳಕೆಯಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. 12 ತಿಂಗಳ ಅವಧಿಯೊಂದರಲ್ಲಿಯೇ ದೇಶದಲ್ಲಿ ಚಲಾವಣೆಯಲ್ಲಿರುವ ನಗದು 2,84,799 ಕೋಟಿ ರೂ.ಗೆ ಏರಿಕೆಯಾಗಿದೆ ಎಂಬುದು ಆರ್‍ ಬಿಐ ಅಂಕಿಅಂಶಗಳಿಂದ ತಿಳಿಯುತ್ತದೆ.

ನೋಟು ಅಮಾನ್ಯೀಕರಣದ ನಂತರದ ದಿನಗಳಲ್ಲಿ ಚಲಾವಣೆಯಲ್ಲಿರುವ ನಗದು 9 ಲಕ್ಷ ಕೋಟಿ ರೂ.ಗೆ ಜನವರಿ  2017ರ ಹೊತ್ತಿಗೆ ಇಳಿಕೆಯಾಗಿತ್ತು. ಆದರೆ ನಂತರ  ಅದು ಏರುತ್ತಲೇ ಇದೆ.

ಎಟಿಎಂ ನಗದು ವ್ಯವಹಾರಗಳೂ ಹೆಚ್ಚುತ್ತಲೇ ಇದ್ದು ಜನವರಿ 2017ರಲ್ಲಿ ರೂ 2,00,648 ಕೋಟಿಯಷ್ಟಿದ್ದ ಮೊತ್ತ  ಜನವರಿ 2018ರಲ್ಲಿ ರೂ 2,95,783 ಕೋಟಿಗೆ  ಹಾಗೂ ಜನವರಿ 2019ರಲ್ಲಿ 3,16,808 ಕೋಟಿಗೆ ಏರಿಕೆಯಾಗಿದೆ. ಆಗಸ್ಟ್ 2019ರಲ್ಲಿ ಈ ಪ್ರಮಾಣ ರೂ 3,45,492 ಕೋಟಿಗೆ ಏರಿಕೆಯಾಗಿದ್ದು  ಆಗಸ್ಟ್ ತಿಂಗಳೊಂದರಲ್ಲಿಯೇ ಎಟಿಎಂಗಳಿಂದ ರೂ 2.87 ಲಕ್ಷ ಕೋಟಿ ವಿದ್‍ ಡ್ರಾ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News