ಗುಣಮಟ್ಟ ಉಳಿಸಿಕೊಂಡಿರುವ ಗಿರ್ಮಿಟ್!

Update: 2019-11-09 18:30 GMT

ಬಹುತೇಕರಿಂದ ಚಪ್ಪರಿಸಿ ಸವಿಯಲ್ಪಡುವ ಖಾರಮಂಡಕ್ಕಿಗೆ ಕುಂದಾಪುರದಲ್ಲಿ ಗಿರ್ಮಿಟ್ ಎನ್ನುತ್ತಾರೆ. ಅದೇ ಹೆಸರಿನಲ್ಲಿ ಚಪ್ಪರಿಸಿಕೊಂಡು ನೋಡುವಂತೆ ಮೂಡಿ ಬಂದಿರುವ ಈ ಚಿತ್ರದಲ್ಲಿ ಒಂದು ಪ್ರಮುಖ ವಿಶೇಷತೆ ಇದೆ. ಅದೇನು ಎಂದರೆ ಚಿತ್ರದ ಎಲ್ಲ ಪಾತ್ರಗಳಿಗೂ ಮಕ್ಕಳೇ ಬಣ್ಣಹಚ್ಚಿ ನಟಿಸಿದ್ದಾರೆ! ಇಲ್ಲಿರುವುದು ಗ್ರಾಮೀಣ ಪ್ರದೇಶವೊಂದರಲ್ಲಿ ನಡೆಯುವ ಕತೆ. ಮೂರು ಮಂದಿ ಹೆಣ್ಣುಮಕ್ಕಳನ್ನು ಮಾತ್ರ ಹೊಂದಿರುವ ದಂಪತಿ ಅವರ ವಿವಾಹ ನಡೆಸುವ ಕಷ್ಟವನ್ನು ಹಾಸ್ಯದೊಂದಿಗೆ ನೀಡಿರುವ ಸಿನೆಮಾ ಇದು.

ಸರೋಜಮ್ಮ ಶಂಕರಪ್ಪದಂಪತಿಗೆ ರೇಖಾ, ರೂಪಾ ಮತ್ತು ರಶ್ಮಿ ಎನ್ನುವ ಮೂವರು ಹೆಣ್ಣು ಮಕ್ಕಳು. ಇವರ ಮನೆಗೆ ಒಳ್ಳೆಯ ಕಡೆಯಿಂದ ಗಂಡು ತೋರಿಸಲೆಂದು ಪದೇ ಪದೇ ಹಾಜರಾಗುವ ಬ್ರೋಕರ್ ಕೊನೆಗೆ ತಾನೇ ರೇಖಾಳ ಕೈ ಹಿಡಿಯುವ ನಿರ್ಧಾರಕ್ಕೆ ಬರುತ್ತಾನೆ. ಆದರೆ ರೇಖಾ ಸಾಮಾನ್ಯ ಯುವಕನನ್ನು ಕೈ ಹಿಡಿಯುವ ಮನಸ್ಸಿನವಳಲ್ಲ. ಮೂವರು ಹೆಣ್ಮಕ್ಕಳು ಕನಸು ಕಂಡಂತಹ ಹುಡುಗ ದೊರಕುವುದು ಕೊನೆಯವಳಿಗೆ. ಆತನೇ ರಾಜ. ಆದರೆ ಅಕ್ಕಂದಿರ ಮದುವೆಯ ಬಳಿಕವೇ ವಿವಾಹವಾಗುವುದಾಗಿ ರಶ್ಮಿ ಹೇಳುತ್ತಾಳೆ. ರಶ್ಮಿಯ ಅಕ್ಕಂದಿರಿಗೆ ಮದುವೆ ಮಾಡಿಸುವಲ್ಲಿ ರಾಜ ಹೇಗೆ ಯಶಸ್ವಿಯಾಗುತ್ತಾನೆ? ಆ ಬಳಿಕವೂ ಅವರಿಬ್ಬರ ಮದುವೆಗೆ ಎದುರಾಗುವ ಸಮಸ್ಯೆಗಳೇನು ಎನ್ನುವುದೇ ಚಿತ್ರದ ಕತೆ. ಕತೆಯಲ್ಲಿ ಅಂಥ ದೊಡ್ಡ ವಿಶೇಷತೆ ಇಲ್ಲ ಎಂದುಕೊಂಡರೆ ಅದು ನಿಜವೇ. ಆದರೆ ಈ ಚಿತ್ರವನ್ನು ಬಾಲ ಕಲಾವಿದರ ಅಭಿನಯದಲ್ಲಿ ನೋಡುವುದೇ ಪ್ರಮುಖ ಮಜ.

 ಚಿತ್ರದ ನಾಯಕ ರಾಜನಾಗಿ ಆಶ್ಲೇಷ್ ರಾಜ್ ಮತ್ತು ನಾಯಕಿ ರಶ್ಮಿಯಾಗಿ ನಟಿಸಿರುವ ಶ್ಲಾಘಾಗೆ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಕಂಠದಾನ ನೀಡಿರುವುದು ಚಿತ್ರದ ಹೈಲೈಟ್. ಅದೇ ರೀತಿ ಸರೋಜಮ್ಮನ ಪಾತ್ರಕ್ಕೆ ಕಂಠವಾದ ತಾರಾ, ಶಂಕರಪ್ಪನ ಪಾತ್ರಕ್ಕೆ ಧ್ವನಿಯಾದ ರಂಗಾಯಣ ರಘು, ದಾಮೋದರನಿಗೆ ಧ್ವನಿಯಾಗಿರುವ ಅಚ್ಯುತ್ ಕುಮಾರ್, ಸುಧಾಕರನಿಗೆ ಡಬ್ಬಿಂಗ್ ಮಾಡಿರುವ ಉಗ್ರಂ ಮಂಜು ಮತ್ತು ಶಿವರಾಜ್ ಕೆ. ಆರ್. ಪೇಟೆ ಮೊದಲಾದವರು ಆಯಾ ಪಾತ್ರಗಳ ಪ್ರಾಮುಖ್ಯತೆಯನ್ನು ಇನ್ನಷ್ಟು ಎತ್ತರಕ್ಕೇರಿಸಿರುವುದು ಸುಳ್ಳಲ್ಲ. ಯಶ್ ಅವರಂತೂ ಮೊದಲೇ ಡಬ್ಬಿಂಗ್ ಮಾಡಿರುವ ಕಂಠಕ್ಕೆ ಕಲಾವಿದ ಅಭಿನಯಿಸಿರಬೇಕೇನೋ ಎನ್ನುವಷ್ಟು ತಮ್ಮತನವನ್ನು ಸೇರಿಸಿದ್ದಾರೆ. ಒಟ್ಟು ಸಂಭಾಷಣೆಗಳು ಕೂಡ ಚಿತ್ರದ ಹೈಲೈಟ್ ಎನ್ನಬಹುದು. ‘‘ನಾನು ಕಂಟ್ರೋಲ್ ತಪ್ಪಿಹೊಡೆದ್ರೆ ಇಂಟರ್ವೆಲ್ಲಾದ್ರೂ ನಿಲ್ಸಲ್ಲ’’, ‘‘ಐಸ್ಕ್ರೀಂ ತಗಳ್ಳೋಕ್ ಹೋಗಿ ಫ್ರಿಜ್ಜೊಳಗೇನೇ ಬಿದ್ದಂಗಾಯ್ತು..’’ ಮೊದಲಾದ ಮಾತುಗಳನ್ನು ಮಕ್ಕಳು ಕೂಡ ಎಂಜಾಯ್ ಮಾಡುವಂತೆ ಬರೆಯಲಾಗಿದೆ. ಮುಖ್ಯ ಖಳನಾಗಿ ನಟಿಸಿರುವ ಜಯೇಂದ್ರ ವಕ್ವಾಡಿ ಅಭಿನಯದಲ್ಲಿನ ಗಂಭೀರತೆ ಪ್ರೇಕ್ಷಕರನ್ನು ಪಾತ್ರದೊಳಗೆ ತಲ್ಲೀನಗೊಳಿಸುವಂತೆ ಇದೆ.

ದೊಡ್ಡವರ ಶೈಲಿಯ ಬಟ್ಟೆಗಳನ್ನು ಮಕ್ಕಳಿಗೆ ಅವರ ಅಳತೆಯಲ್ಲೇ ಹೊಂದುವಂತೆ ಮಾಡಿಕೊಟ್ಟ ಕಾಸ್ಟ್ಯೂಮ್ ಕೆಲಸಗಾರರು ಕೂಡ ಅಭಿನಂದಾರ್ಹರು. ಅದೇ ವೇಳೆ ಅವರ ಎತ್ತರಕ್ಕೆ ಹೊಂದುವಂತೆ ಮನೆ ಮತ್ತು ಪರಿಸರವನ್ನು ಕೂಡ ಸೆಟ್ ಹಾಕಿದ್ದಲ್ಲಿ ಅದು ಇನ್ನಷ್ಟು ಆಕರ್ಷಕವೆನಿಸುತ್ತಿತ್ತು ಎನ್ನುವುದರಲ್ಲಿ ಸಂದೇಹವೇ ಇಲ್ಲ. ಆದರೆ ಅದ್ಭುತವಾಗಿ ಮೂಡಿ ಬಂದಿರುವ ಹೊಡೆದಾಟದ ಸನ್ನಿವೇಶಗಳಲ್ಲಿ ಯಾವುದೇ ವೃತ್ತಿಪರ ಸಾಹಸ ಸಂಯೋಜಕರ ನೆರವು ಪಡೆದಿಲ್ಲ ಎನ್ನುವುದು ವಿಶೇಷ! ಸಾಧುಕೋಕಿಲ ನಿರೂಪಣೆಯ ಧ್ವನಿಯು ನಗು ತರಿಸುವುದಿಲ್ಲವಾದರೂ ಚಿತ್ರಕ್ಕೊಂದು ಕಳೆ ನೀಡುವಲ್ಲಿ ಯಶಸ್ವಿಯಾಗಿದೆ. ಒಟ್ಟಿನಲ್ಲಿ ರಿಯಾಲಿಟಿ ಶೋ, ಜಾಹೀರಾತುಗಳಲ್ಲಿ ಕಂಡಿರಬಹುದಾದ ಇಂಥ ಪ್ರಯೋಗವನ್ನು ಹೀಗೆ ಚಿತ್ರಮಾಡಿ ಜನರ ಮುಂದೆ ಇಟ್ಟಿರುವ ನಿರ್ದೇಶಕರ ಧೈರ್ಯವನ್ನು ಮೆಚ್ಚಲೇಬೇಕು. ಹಾಡು, ಸಂಗೀತ ಮತ್ತು ಗ್ರಾಫಿಕ್ ಹೀಗೆ ಯಾವುದೇ ವಿಚಾರದಲ್ಲಿ ಕೂಡ ಖರ್ಚು ಮಾಡಲು ಹಿಂಜರಿಯದ ಕಾರಣ ಇಂಥದೊಂದು ಗುಣಮಟ್ಟದ ಚಿತ್ರ ಮೂಡಿ ಬರಲು ಕಾರಣವಾಗಿದ್ದು, ಅದೇ ರೀತಿ ಕುಟುಂಬ ಸಮೇತ ನೋಡಬಹುದಾದ ಗುಣಮಟ್ಟವನ್ನು ಕೂಡ ಉಳಿಸಿಕೊಂಡಿರುವ ನಿರ್ದೇಶಕರ ಪ್ರಯತ್ನವನ್ನು ಮೆಚ್ಚಲೇಬೇಕು.

ತಾರಾಗಣ: ಆಶ್ಲೇಷ್ ರಾಜ್, ಶ್ಲಾಘಾ ಸಾಲಿಗ್ರಾಮ
ನಿರ್ದೇಶನ: ರವಿ ಬಸ್ರೂರು
ನಿರ್ಮಾಣ: ಎನ್ ಎಸ್ ರಾಜ್ ಕುಮಾರ್

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News