ಪ.ಬಂಗಾಳದ ಕರಾವಳಿಯಲ್ಲಿ ‘ಬುಲ್‌ಬುಲ್‌’ ರುದ್ರನರ್ತನ: 10 ಮಂದಿ ಮೃತ್ಯು

Update: 2019-11-10 14:33 GMT

ಕೋಲ್ಕತಾ,ನ.10: ಬುಲ್‌ಬುಲ್ ಚಂಡಮಾರುತ ಶನಿವಾರ ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ಅಬ್ಬರಿಸಿದ್ದು, 10 ಮಂದಿ ಮೃತಪಟ್ಟಿದ್ದಾರೆ

ದಕ್ಷಿಣ 24 ಪರಗಣಗಳ ಜಿಲ್ಲೆಯ ಬಸೀರ್‌ಹಾಟ್ ನಗರದಲ್ಲಿ ಮರವೊಂದು ಮೈಮೇಲೆ ಬಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದರೆ,ಕೋಲ್ಕತಾದ ಬಾಲಿಗಂಜ್‌ನಲ್ಲಿ ಫುಟ್ಬಾಲ್ ಕ್ಲಬ್ಬೊಂದರ ಬಳಿ ಇನ್ನೋರ್ವ ವ್ಯಕ್ತಿ ಮೃತಪಟ್ಟಿದ್ದಾನೆ.

  ಚಂಡಮಾರುತವು ಶನಿವಾರ ರಾತ್ರಿ ಎಂಟು ಗಂಟೆಯ ಸುಮಾರಿಗೆ ಸುಂದರಬನ್ಸ್ ನದಿಮುಖಜ ಭೂಮಿಯ ಸಾಗರ ದ್ವೀಪಕ್ಕೆ ಅಪ್ಪಳಿಸಿತ್ತು. ರವಿವಾರ ಬೆಳಿಗ್ಗೆ ಬಾಂಗ್ಲಾದೇಶದತ್ತ ಚಲಿಸಿರುವ ಚಂಡಮಾರುತವು ದುರ್ಬಲಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ತಿಳಿಸಿದೆ.

“ಬುಲ್‌ಬುಲ್ ಚಂಡಮಾರುತದಿಂದಾಗಿ ಉಂಟಾಗಿರುವ ಸ್ಥಿತಿಯ ಬಗ್ಗೆ ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಮಾತನಾಡಿದ್ದೇನೆ. ರಾಜ್ಯ ಸರಕಾರಕ್ಕೆ ಕೇಂದ್ರದಿಂದ ಎಲ್ಲ ನೆರವು ಒದಗಿಸುವ ಭರವಸೆಯನ್ನು ನೀಡಿದ್ದೇನೆ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ಟ್ವೀಟಿಸಿದ್ದಾರೆ.

ಚಂಡಮಾರುತದಿಂದಾಗಿ ದಕ್ಷಿಣ ಮತ್ತು ಉತ್ತರ 24 ಪರಗಣಗಳ ಜಿಲ್ಲೆಗಳಲ್ಲಿ ತೀವ್ರ ಹಾನಿ ಸಂಭವಿಸಿದೆ ಎಂದು ಸರಕಾರಿ ಅಧಿಕಾರಿಯೋರ್ವರು ತಿಳಿಸಿದರು.

ಚಂಡಮಾರುತ ಪೀಡಿತ ಪ್ರದೇಶಗಳಿಂದ ಸುಮಾರು 1.2 ಲಕ್ಷ ಜನರನ್ನು 345 ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಸರಕಾರವು ಪೀಡಿತ ಪ್ರದೇಶಗಳಲ್ಲಿಯ ಶಾಲೆಗಳಿಗೆ ಸೋಮವಾರ ರಜೆ ಘೋಷಿಸಿದೆ.

ಕೋಲ್ಕತ್ತಾ ವಿಮಾನ ನಿಲ್ದಾಣವು 12 ಗಂಟೆಗಳ ವಿರಾಮದ ಬಳಿಕ ರವಿವಾರ ಬೆಳಿಗ್ಗೆ ಆರು ಗಂಟೆಯಿಂದ ಕಾರ್ಯಾಚರಣೆಗಳನ್ನು ಪುನರಾರಂಭಿಸಿದೆ. ನಗರದ ಕೆಲವು ಭಾಗಗಳೂ ಈಗಲೂ ಜಲಾವೃತಗೊಂಡಿವೆ.

ಚಂಡಮಾರುತದಿಂದಾಗಿ ಉಂಟಾಗಿರುವ ಹಾನಿಯನ್ನು ಅಂದಾಜಿಸಲು ರಾಜ್ಯ ಸರಕಾರವು ಡ್ರೋನ್‌ಗಳನ್ನು ಬಳಸಲಿದೆ. ಹಾನಿಯ ಅಂದಾಜಿನ ಬಳಿಕ ಪೀಡಿತರಿಗೆ ಪರಿಹಾರವನ್ನು ಪ್ರಕಟಿಸಲಾಗುವುದು ಎಂದು ಬ್ಯಾನರ್ಜಿ ತಿಳಿಸಿದರು.

ಚಂಡಮಾರುತ ಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ್ದಕ್ಕಾಗಿ ಪ.ಬಂಗಾಳ ರಾಜ್ಯಪಾಲ ಜಗದೀಪ ಧಂಕರ್ ಅವರು ಬ್ಯಾನರ್ಜಿಯವರನ್ನು ಪ್ರಶಂಸಿಸಿದ್ದಾರೆ.

ಒಡಿಶಾದಲ್ಲಿ ಚಂಡಮಾರುತವು ಭಾರೀ ಮಳೆ ಮತ್ತು ಗಾಳಿಗೆ ಕಾರಣವಾಗಿದೆ. ಕೇಂದ್ರಪಾಡಾ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

 ಅತ್ತ ಬಾಂಗ್ಲಾದೇಶದಲ್ಲಿ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಕರಾವಳಿಯಲ್ಲಿನ ತಗ್ಗುಪ್ರದೇಶಗಳ ಸುಮಾರು ಒಂದು ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News