ಕೆಬಿಸಿ:‘ಛತ್ರಪತಿ ಶಿವಾಜಿ ಮಹಾರಾಜ ’ವಿವಾದಕ್ಕಾಗಿ ಬಿಗ್ ಬಿ, ಸೋನಿ ಟಿವಿಯಿಂದ ಕ್ಷಮೆಯಾಚನೆ

Update: 2019-11-10 14:41 GMT

ಮುಂಬೈ,ನ.10: ಸೋನಿ ಟಿವಿಯ ಜನಪ್ರಿಯ ಕಾರ್ಯಕ್ರಮ ಕೌನ್ ಬನೇಗಾ ಕರೋಡ್‌ಪತಿ (ಕೆಬಿಸಿ) 11ರ ಬುಧವಾರದ ಸಂಚಿಕೆಯಲ್ಲಿ ಮರಾಠಾ ದೊರೆ ಛತ್ರಪತಿ ಶಿವಾಜಿ ಮಹಾರಾಜರನ್ನು ಕೇವಲ ‘ಶಿವಾಜಿ’ಎಂದು ಉಲ್ಲೇಖಿಸಿದ್ದಕ್ಕಾಗಿ ವಾಹಿನಿಯ ಆಡಳಿತ ಮತ್ತು ಕಾರ್ಯಕ್ರಮದ ನಿರೂಪಕ ಅಮಿತಾಭ್ ಬಚ್ಚನ್ ಅವರು ವಿಷಾದವನ್ನು ವ್ಯಕ್ತಪಡಿಸಿದ್ದಾರೆ.

‘ ಬುಧವಾರದ ಕೆಬಿಸಿ ಕಾರ್ಯಕ್ರಮದಲ್ಲಿ ಅಜಾಗರೂಕತೆಯಿಂದಾಗಿ ಛತ್ರಪತಿ ಶಿವಾಜಿ ಮಹಾರಾಜರ ಹೆಸರನ್ನು ಸರಿಯಾಗಿ ಪ್ರಸ್ತಾಪಿಸಿರಲಿಲ್ಲ. ಇದಕ್ಕೆ ನಾವು ತೀವ್ರವಾಗಿ ವಿಷಾದಿಸುತ್ತೇವೆ. ನಮ್ಮ ವೀಕ್ಷಕರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಗುರುವಾರದ ಕಾರ್ಯಕ್ರಮದಲ್ಲಿ ವಿಷಾದವನ್ನು ಸೂಚಿಸಿದ್ದೇವೆ ’ಎಂದು ಸೋನಿ ಟಿವಿ ಟ್ವೀಟಿಸಿದೆ.

ಬುಧವಾರದ ಕೆಬಿಸಿ ಕಾರ್ಯಕ್ರಮದಲ್ಲಿ ಸ್ಪರ್ಧಿಯೋರ್ವರಿಗೆ ಮೊಘಲ್ ಚಕ್ರವರ್ತಿ ಔರಂಗಝೇಬ್ ಸಮಕಾಲೀನರ ಬಗ್ಗೆ ಕೇಳಲಾಗಿತ್ತು. ಉತ್ತರವಾಗಿ ನಾಲ್ಕು ಆಯ್ಕೆಗಳನ್ನು ನೀಡಲಾಗಿದ್ದು,ಛತ್ರಪತಿ ಶಿವಾಜಿ ಮಹಾರಾಜರನ್ನು ಕೇವಲ ‘ಶಿವಾಜಿ’ ಎಂದು ಉಲ್ಲೇಖಿಸಲಾಗಿತ್ತು. ಮಹಾರಾಣಾ ಪ್ರತಾಪ,ರಾಣಾ ಸಾಂಗಾ ಮತ್ತು ಮಹಾರಾಜ ರಣಜಿತ್ ಸಿಂಗ್ ಇತರ ಮೂರು ಆಯ್ಕೆಗಳಾಗಿದ್ದವು.

ಇದರಿಂದ ಆಕ್ರೋಶಗೊಂಡಿದ್ದ ಹಲವಾರು ಟ್ವಿಟ್ಟಿಗರು ಕಾರ್ಯಕ್ರಮದ ನಿಷೇಧಕ್ಕಾಗಿ ಆಗ್ರಹಿಸಿದ್ದರು.

‘ ಕೆಬಿಸಿ,ಸೋನಿ ಟಿವಿ ಬಹಿಷ್ಕರಿಸಿ ’ಎಂಬ ಹ್ಯಾಷ್‌ಟ್ಯಾಗ್ ಶುಕ್ರವಾರ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿತ್ತು.

ಸೋನಿ ಟಿವಿಯು ಛತ್ರಪತಿ ಶಿವಾಜಿ ಮಹಾರಾಜರನ್ನು ‘ಶಿವಾಜಿ’ ಎಂದು ಏಕವಚನದಲ್ಲಿ ಕರೆದು ಅವಮಾನಿಸಿದೆ. ಅದು ತಕ್ಷಣ ಕ್ಷಮೆ ಕೇಳಬೇಕು. ವಿಳಂಬಿಸಿದರೆ ಕಾರ್ಯಕ್ರಮ ಮುಂದುವರಿಯಲು ಯಾವುದೇ ‘ಲೈಫ್ ಲೈನ್’ ಇರುವುದಿಲ್ಲ ಎಂದು ಮಹಾರಾಷ್ಟ್ರದ ಬಿಜೆಪಿ ಶಾಸಕ ನಿತೇಶ ರಾಣೆ ಅವರೂ ಆಗ್ರಹಿಸಿದ್ದರು.

‘ಅಗೌರವವನ್ನು ತೋರಿಸುವ ಯಾವುದೇ ಉದ್ದೇಶವಿರಲಿಲ್ಲ. ಅದು ಭಾವನೆಗಳಿಗೆ ನೋವುಂಟು ಮಾಡಿದ್ದರೆ ಅದಕ್ಕಾಗಿ ಕ್ಷಮೆ ಯಾಚಿಸುತ್ತೇನೆ ’ಎಂದು ಬಚ್ಚನ್ ಟ್ವೀಟಿಸಿದ್ದರೆ,ಕಾರ್ಯಕ್ರಮದ ನಿರ್ಮಾಪಕ-ನಿರ್ದೇಶಕ ಸಿದ್ಧಾರ್ಥ ಬಸು ಅವರು,ಅವಮಾನ ಅಥವಾ ಗೌರವ ಉದ್ದೇಶಪೂರ್ವಕವಾಗಿರಲಿಲ್ಲ. ಅಜಾಗರೂಕತೆಗಾಗಿ ಕ್ಷಮೆ ಯಾಚಿಸುತ್ತಿರುವುದಾಗಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News