ನಿಮ್ಮನ್ನು ಒಕ್ಕಲೆಬ್ಬಿಸುತ್ತೇವೆ: ಐಎಎಸ್ ಅಧಿಕಾರಿಗಳ ಸಂಘಕ್ಕೆ ಸರಕಾರದಿಂದ ಎಚ್ಚರಿಕೆ

Update: 2019-11-10 15:43 GMT

ಭೋಪಾಲ್,ನ.10: ಇಲ್ಲಿನ ವಿಲಾಸಿ ಬಡಾವಣೆಯೊಂದರಲ್ಲಿರುವ ತನ್ನ ಎರಡು ಕಟ್ಟಡಗಳ ಬಾಕಿಯಿರುವ 34 ಲಕ್ಷ ರೂ.ಗಳ ಬಾಡಿಗೆ ಹಣವನ್ನು ಪಾವತಿಸಬೇಕು ಇಲ್ಲವೇ ಅಲ್ಲಿಂದ ತೆರವುಗೊಳ್ಳಲು ಸಿದ್ಧರಾಗಿ ಎಂದು ಮಧ್ಯಪ್ರದೇಶ ಸರಕಾರವು ರಾಜ್ಯದ ಐಎಎಸ್ ಅಧಿಕಾರಿಗಳಿಗೆ ಸೂಚನೆ ನೀಡಿದೆಯೆಂದು ಮಾಹಿತಿ ಹಕ್ಕು ಕಾಯ್ದೆಯಡಿ ದೊರೆತ ಉತ್ತರವೊಂದು ಬಹಿರಂಗಪಡಿಸಿದೆ.

ಈ ಬಗ್ಗೆ ಮಧ್ಯಪ್ರದೇಶದ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿಯರ್ ಒಬ್ಬರು ನೋಟಿಸ್ ಒಂದನ್ನು ರಾಜ್ಯದ ಐಎಎಸ್ ಅಧಿಕಾರಿಗಳ ಸಂಘಕ್ಕೆ ಜಾರಿಗೊಳಿಸಿದ್ದಾರೆ. ಅದರಲ್ಲಿ ಅವರು ಐಎಎಸ್ ಅಧಿಕಾರಿಗಳ ಸಂಘಕ್ಕೆ ಭೋಪಾಲ್‌ನ ಚಾರ್ ಇಮ್ಲಿ ಪ್ರದೇಶದಲ್ಲಿ 199ರಿಂದೀಚೆಗೆ ಎರಡು ಮನೆಗಳನ್ನು ವಿತರಿಸಲಾಗಿತ್ತು ಹಾಗೂ ಸಕಾಲದಲ್ಲಿ ಸರಕಾರಕ್ಕೆ ಬಾಡಿಗೆ ಹಣವನ್ನು ಪಾವತಿಸಲು ಅದಕ್ಕೆ ಸಾಧ್ಯವಾಗಿರಲಿಲ್ಲವೆಂದು ಅವರು ಹೇಳಿದ್ದಾರೆ.

ಸಕಾಲದಲ್ಲಿ ಬಾಡಿಗೆ ಶುಲ್ಕಗಳನ್ನು ಪಾವತಿಸದೆ ಇರುವುದರಿಂದ ಕಟ್ಟಡವನ್ನು ಖಾಲಿ ಮಾಡುವ ಪ್ರಕ್ರಿಯೆಗೆ ಮುಂದಾಗುವಂತೆ ರಾಜ್ಯದ ನಿರ್ದೇಶನಾಲಯವು ಐಎಎಸ್ ಅಧಿಕಾರಿಗಳ ಸಂಘಕ್ಕೆ ಕಳುಹಿಸಿರುವ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಸಾಮಾಜಿಕ ಕಾರ್ಯಕರ್ತ ಅಜಯ್ ದುಬೆ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಉತ್ತರವಾಗಿ ಈ ನೋಟಿಸ್‌ನ ಪ್ರತಿಯು ಅವರಿಗೆ ದೊರೆತಿದೆ.

ಈ ವರ್ಷದ ಸೆಪ್ಟೆಂಬರ್ 30ರಂದು ಸಂಘಕ್ಕೆ 34.56 ಲಕ್ಷ ರೂ. ಬಾಡಿಗೆ ಬಾಕಿಯಿರುವುದಾಗಿ ನೋಟಿಸ್ ತಿಳಿಸಿದೆ. ಬಾಕಿಯಿರುವ ಮೊತ್ತವನ್ನು ನೋಟಿಸ್ ಜಾರಿಯಾದ 15 ದಿನಗಳೊಳಗೆ ಪಾವತಿಸುವಂತೆ ಸಂಘಕ್ಕೆ ಸೂಚಿಸಲಾಗಿದೆಯೆಂದು ನೋಟಿಸ್ ತಿಳಿಸಿದೆ.

‘‘ ಇದೊಂದು ಗಂಭೀರವಾದ ವಿಷಯ. ಐಎಎಸ್ ಅಧಿಕಾರಿಗಳ ಸಂಘವೊಂದು ಬಾಡಿಗೆ ಹಣ ಪಾವತಿಸದೆ ಇರುವುದು ಅಧಿಕಾರ ಹಾಗೂ ಹುದ್ದೆಯ ದುರ್ಬಳಕೆಯಾಗಿದೆ’’ ಎಂದು ಅಜಯ್ ದುಬೆ ತಿಳಿಸಿದ್ದಾರೆ.

        ಈ ಬಗ್ಗೆ ಐಎಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ಗೌರಿಸಿಂಗ್ ಅವರನ್ನು ಸಂಪರ್ಕಿಸಿದಾಗ, ಅವರು ವಿಷಯವನ್ನು ಸಂಘವು ಗಂಭೀರವಾಗಿ ಪರಿಗಣಿಸಲಿದೆ ಎಂದವರು ಹೇಳಿದ್ದಾರೆ. ವಿಷಯವನ್ನು ಕಾರ್ಯಕಾರಿ ಸಮಿತಿಯ ಮುಂದೆ ಇರಿಸಲಾಗುವುದು ಹಾಗೂ ಆ ಬಗ್ಗೆ ಸೂಕ್ತ ನಿರ್ಧಾರವೊಂದನ್ನು ಕೈಗೊಳ್ಳಲಾಗುವುದು ಎಂದು ಗೌರಿ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News