ಹಿಟ್ಲರ್ ಸತ್ತಿದ್ದಾನೆ: ಬಿಜೆಪಿ ವಿರುದ್ಧ ಶಿವಸೇನೆ ಪರೋಕ್ಷ ವಾಗ್ದಾಳಿ

Update: 2019-11-10 15:47 GMT

ಮುಂಬೈ,ನ.10: ಮಹಾರಾಷ್ಟ್ರದಲ್ಲಿ ನೂತನ ಸರಕಾರ ರಚನೆ ವಿಚಾರದಲ್ಲಿ ರಾಜ್ಯದ ಹಂಗಾಮಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಭೀತಿ ಸೃಷ್ಟಿಸುವ ರಾಜಕಾರಣದಲ್ಲಿ ತೊಡಗಿದ್ದಾರೆಂದು ಶಿವಸೇನೆ ನಾಯಕ ಸಂಜಯ್ ರಾವತ್ ಆರೋಪಿಸಿದ್ದಾರೆ.

 ಫಡ್ನವೀಸ್ ಅವರ ಹೆಸರನ್ನು ಉಲ್ಲೇಖಿಸದೆಯೇ ಅವರ ವಿರುದ್ಧ ಪರೋಕ್ಷ ಟೀಕೆಯನ್ನು ಮಾಡಿರುವ ರಾವತ್ ಅವರು, ‘‘ ಬೆದರಿಸಿ ರಾಜಕೀಯ ಬೆಂಬಲವನ್ನು ಪಡೆಯುವ ದಾರಿಗಳು ಫಲಿಸದೆ ಹೋಗಿರುವುದು, ಹಿಟ್ಲರ್ ಸತ್ತಿದ್ದಾನೆಂಬುದನ್ನು ಹಾಗೂ ಗುಲಾಮಗಿರಿಯ ಕಾರ್ಮೋಡಗಳು ಮರೆಯಾಗಿವೆ ಎಂಬುದನ್ನು ಒಪ್ಪಿಕೊಳ್ಳುವ ಸಮಯ ಇದಾಗಿದೆ’’ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಕೃಪಾಶ್ರಯದ ಹೊರತಾಗಿಯೂ ಎರಡನೆ ಅವಧಿಗೆ ಮುಖ್ಯಮಂತ್ರಿಯಾಗಲು ದೇವೇಂದ್ರ ಫಡ್ನವೀಸ್ ಸಾಧ್ಯವಾಗಲಿಲ್ಲವೆಂದು ರಾವತ್ ಅವರು ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ತನ್ನ ‘ರೋಖ್‌ತೊಖ್’ ಅಂಕಣದಲ್ಲಿ ಬರೆದಿದ್ದಾರೆ. ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಬಿಜೆಪಿ ವರಿಷ್ಠ ಅಮಿತ್ ಶಾ ನಿರ್ಲಿಪ್ತರಾಗಿ ಉಳಿದಿರುವ ಕಾರಣದಿಂದಲೇ ಚುನಾವಣಾ ಫಲಿತಾಂಶ ಪ್ರಕಟವಾಗಿ 15 ದಿನಳು ಕಳೆದರೂ ಫಡ್ನವೀಸ್‌ಗೆ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಾಗಲಿಲ್ಲವೆಂದು ರಾವತ್ ಕಟಕಿಯಾಡಿದ್ದಾರೆ.

 ಬಿಜೆಪಿಯ ಅತಿ ದೊಡ್ಡ ಮಿತ್ರಪಕ್ಷವಾದ ಶಿವಸೇನಾವು ನಿರ್ಗಮನ ಮುಖ್ಯಮಂತ್ರಿ ಜೊತೆ ಮಾತುಕತೆಗೆ ಮುಂದಾಗದಿರುವುದೇ ಬಿಜೆಪಿಯ ಅತಿ ದೊಡ್ಡ ಪರಾಭವವಾಗಿದೆ. ಈ ಸಲ ಶಿವಸೇನಾದ ಅಧ್ಯಕ್ಷ ಉದ್ಧವ್ ಠಾಕ್ರೆ ಅವರು ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಯಾರೆಂಬುದನ್ನು ನಿರ್ಧರಿಸಲಿದ್ದಾರೆ ಎಂದು ಅವರು ತಿಳಿಸಿದರು.

ಎಲ್ಲರೂ ಸೇಡಿನ ರಾಜಕೀಯ,ಗುಲಾಮಗಿರಿ ಹಾಗೂ ಕೊಳಕು ರಾಜಕಾರಣದ ಅಂತ್ಯವನ್ನು ಕಾಣುತ್ತಿದ್ದಾರೆ. ಯಾರು ಇತರರನ್ನು ಅಧಿಕಾರದ ಮೂಲಕ ಬೆದರಿಸುತ್ತಿದ್ದಾರೋ ಅವರೀಗ ಹೆದರಿಕೊಳ್ಳುತ್ತಿದ್ದಾರೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.

ಅಕ್ಟೋಬರ್ 21ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ 105 ಸ್ಥಾನಗಳಲ್ಲಿ ಗೆಲುವು ಕಂಡಿದ್ದರೆ, ಮಿತ್ರ ಪಕ್ಷವಾದ ಶಿವಸೇನೆ 56 ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು. 288 ಸದಸ್ಯಬಲದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಹುಮತಕ್ಕೆ 145 ಸ್ತಾನಗಳ ಅಗತ್ಯವಿದೆ.

ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಿಗೇ ಉಭಯ ಪಕ್ಷಗಳು ಮುಖ್ಯಮಂತ್ರಿ ಹುದ್ದೆಗೆ ಪಟ್ಟು ಹಿಡಿದಿರುವುದರಿಂದ ಸರಕಾರ ರಚನೆಗೆ ಹಿನ್ನಡೆಯುಂಟಾಗಿದೆ.

 ಈ ಮಧ್ಯೆ ಎನ್‌ಸಿಪಿ ಅಧ್ಯಕ್ಷ ಶರದ್ ‌ಪವಾರ್ ಅವರು, ರಾಜ್ಯವು ಬಿಜೆಪಿಯೇತರ ಮುಖ್ಯಮಂತ್ರಿಯನ್ನು ಹೊಂದುವುದಕ್ಕೆ ಆದ್ಯತೆ ನೀಡುವಂತೆ ಸೋನಿಯಾಗಾಂಧಿ ಅವರಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News