ಕಾಶ್ಮೀರವನ್ನು ಬೃಹತ್ ಜೈಲಾಗಿ ಪರಿವರ್ತಿಸಿದ ಕೇಂದ್ರ: ಡಿಎಂಕೆ ಆರೋಪ

Update: 2019-11-10 17:00 GMT

ಚೆನ್ನೈ, ನ.10: ಕೇಂದ್ರ ಸರಕಾರ ಜಮ್ಮು ಮತ್ತು ಕಾಶ್ಮೀರವನ್ನು ಬೃಹತ್ ಬಂಧೀಖಾನೆಯನ್ನಾಗಿ ಪರಿವರ್ತಿಸಿದೆ ಎಂದು ತಮಿಳುನಾಡಿನ ಮುಖ್ಯ ವಿರೋಧ ಪಕ್ಷ ಡಿಎಂಕೆ ದೂಷಿಸಿದ್ದು, ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಸಹಿತ ಬಂಧನದಲ್ಲಿರುವ ಎಲ್ಲರನ್ನೂ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದೆ.

ಕೇಂದ್ರ ಸರಕಾರ ಜನರ ಭಾವನೆಗೆ ಬೆಲೆ ನೀಡಬೇಕು ಎಂದು ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಆಗ್ರಹಿಸಿದ್ದಾರೆ. ಚೆನ್ನೈಯಲ್ಲಿ ನಡೆದ ಪಕ್ಷದ ಸಾಮಾನ್ಯ ಮಂಡಳಿ ಸಭೆಯಲ್ಲಿ ಅಂಗೀಕರಿಸಿದ ನಿರ್ಣಯದಲ್ಲಿ, ಜಮ್ಮು ಕಾಶ್ಮೀರ ವಿಧಾನಸಭೆಯ ಒಪ್ಪಿಗೆ ಪಡೆಯದೆ ಮತ್ತು ಜನತೆಯನ್ನು ವಿಶ್ವಾಸಕ್ಕೆ ಪಡೆಯದೆ ಆ ರಾಜ್ಯದಲ್ಲಿ 370ನೇ ವಿಧಿ ರದ್ದುಗೊಳಿಸಿರುವ ಮತ್ತು ಈ ವಲಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಕೇಂದ್ರ ಸರಕಾರದ ಉಪಕ್ರಮವನ್ನು ಖಂಡಿಸಲಾಗಿದೆ.

ಜೊತೆಗೆ, ಈ ಪ್ರದೇಶವನ್ನು ಒಂದು ಬೃಹತ್ ಜೈಲಾಗಿ ಪರಿವರ್ತಿಸಿದ ಹಾಗೂ ಜನತೆಯನ್ನು ವಂಚಿಸಿದ್ದ ಕ್ರಮವನ್ನು ಸಭೆ ಖಂಡಿಸಿದ್ದು ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಡುತ್ತ ಬಂದಿರುವ ಫಾರೂಕ್ ಅಬ್ದುಲ್ಲಾರಂತಹ ಮುಖಂಡರನ್ನು ತಕ್ಷಣ ಗೃಹಬಂಧನದಿಂದ ಬಿಡುಗಡೆಗೊಳಿಸುವಂತೆ ಮತ್ತು ಕಾಶ್ಮೀರದ ಜನತೆಯ ಮಾನವ ಹಕ್ಕುಗಳನ್ನು ಗೌರವಿಸುವಂತೆ ನಿರ್ಣಯ ಆಗ್ರಹಿಸಿದೆ. ಜೊತೆಗೆ, ಸಂಸ್ಕೃತ ಮತ್ತು ಹಿಂದಿ ಹೇರಿಕೆಯ ಹುನ್ನಾರವನ್ನು ಹೊಂದಿರುವ ಕೇಂದ್ರ ಸರಕಾರದ 2019ರ ಕರಡು ಶಿಕ್ಷಣ ನೀತಿ(ಡಿಎನ್‌ಸಿಪಿ)ಯನ್ನು ವಾಪಸು ಪಡೆಯುವಂತೆ ಮತ್ತು ಸಂವಿಧಾನದ ಸಮವರ್ತಿ ಪಟ್ಟಿಯಂತೆ ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಇರಬೇಕು ಎಂದು ನಿರ್ಣಯದಲ್ಲಿ ಆಗ್ರಹಿಸಲಾಗಿದೆ. ಡಿಎನ್‌ಇಪಿಯ ಹಲವು ಶಿಫಾರಸುಗಳು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದ್ದು, ವಂಚಿತ ಮತ್ತು ತುಳಿತಕ್ಕೊಳಗಾದ ಸಮುದಾಯದವರನ್ನು ಶಿಕ್ಷಣ ಪಡೆಯುವ ಅವಕಾಶದಿಂದ ವಂಚಿಸುವ ಉದ್ದೇಶವನ್ನು ಕರಡು ಶಿಕ್ಷಣ ನೀತಿ ಹೊಂದಿದೆ ಎಂದು ಆರೋಪಿಸಲಾಗಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳು, ಕೇಂದ್ರ ಸರಕಾರದ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನಡೆಯುವ ಸಂದರ್ಶನ ತಮಿಳು ಭಾಷೆಯಲ್ಲಿ ನಡೆಯಬೇಕೆಂದು ನಿರ್ಣಯ ಆಗ್ರಹಿಸಿದೆ. ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್, ಹಿರಿಯ ಮುಖಂಡರಾದ ದುರೈ ಮುರುಗನ್, ಟಿ ಆರ್ ಬಾಲು, ದಯಾನಿಧಿ ಮಾರನ್ ಹಾಗೂ ಕನ್ನಿಮೋಳಿ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News