‘ಬುಲ್‌ಬುಲ್’ ಚಂಡಮಾರುತದ ಅಬ್ಬರ: 21 ಲಕ್ಷಕ್ಕೂ ಅಧಿಕ ಜನರ ಸ್ಥಳಾಂತರ

Update: 2019-11-10 17:13 GMT

ಢಾಕಾ, ನ. 10: ಚಂಡಮಾರುತ ‘ಬುಲ್‌ಬುಲ್’ ಬಾಂಗ್ಲಾದೇಶದ ಪಶ್ಚಿಮ ಖುಲ್ನ ಮತ್ತು ದಕ್ಷಿಣ ಪಟುವಖಾಲಿ ಜಿಲ್ಲೆಗಳಿಗೆ ರವಿವಾರ ಅಪ್ಪಳಿಸಿದ್ದು, ಕನಿಷ್ಠ ಮೂವರು ಮೃತಪಟ್ಟಿದ್ದಾರೆ ಹಾಗೂ ಆರು ಮಂದಿ ಗಾಯಗೊಂಡಿದ್ದಾರೆ.

ಇದಕ್ಕೂ ಮುನ್ನ, ಚಂಡಮಾರುತವು ಪಶ್ಚಿಮ ಬಂಗಾಳ ಕರಾವಳಿಯನ್ನು ದಾಟುತ್ತಿದ್ದಂತೆಯೇ, ಬಾಂಗ್ಲಾದೇಶದ ಅಧಿಕಾರಿಗಳು ತಗ್ಗು ಪ್ರದೇಶದ ಕರಾವಳಿ ಗ್ರಾಮಗಳು ಮತ್ತು ದ್ವೀಪಗಳಿಂದ ಸುಮಾರು ಇಪ್ಪತ್ತೊಂದು ಲಕ್ಷಕ್ಕೂ ಅಧಿಕ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ.

‘‘ಈವರೆಗೆ ಮೂವರು ಮೃತಪಟ್ಟಿರುವ ವರದಿಗಳು ಬಂದಿವೆ. ಅವರೆಲ್ಲರೂ ಮರ ಬಿದ್ದು ಸಾವಿಗೀಡಾಗಿದ್ದಾರೆ’’ ಎಂದು ತುರ್ತು ಆರೋಗ್ಯ ಸೇವೆಯ ನಿಯಂತ್ರಣ ಕೊಠಡಿಯ ವಕ್ತಾರರೊಬ್ಬರು ತಿಳಿಸಿದರು.

ಚಂಡಮಾರುತವು ಗಂಟೆಗೆ 110-120 ಕಿಲೋಮೀಟರ್ ಗಾಳಿಯ ವೇಗದೊಂದಿಗೆ ಪಶ್ಚಿಮ ಬಂಗಾಳದಿಂದ ಬಾಂಗ್ಲಾದೇಶದತ್ತ ನುಗ್ಗಿತ್ತು.

‘‘ಚಂಡಮಾರುತ ಬುಲ್‌ಬುಲ್ ಸುಂದರ್‌ಬನ್ ದಾಂಚಿ ಅರಣ್ಯದ ಸಮೀಪದಿಂದಾಗಿ ಭಾರತೀಯ ಕಾಲಮಾನ ನವೆಂಬರ್ 9ರ ರಾತ್ರಿ 8:30ರಿಂದ 11:30ರ ಅವಧಿಯಲ್ಲಿ ಪಶ್ಚಿಮ ಬಂಗಾಳ ಕರಾವಳಿಯನ್ನು ದಾಟಿದೆ. ಈ ಸಮಯದಲ್ಲಿ ಅದರ ಗಾಳಿಯ ವೇಗ ಗಂಟೆಗೆ 110-120 ಕಿ.ಮೀ.ನಷ್ಟಿತ್ತು’’ ಎಂದು ಭಾರತೀಯ ಹವಾಮಾನ ಇಲಾಖೆ ರವಿವಾರ ಬೆಳಗ್ಗೆ ತಿಳಿಸಿದೆ.

ಕರಾವಳಿ ಜಿಲ್ಲೆಗಳಲ್ಲಿ ಬಿರುಗಾಳಿಯಿಂದಾಗಿ ಎತ್ತರದ ಅಲೆಗಳು ಸೃಷ್ಟಿಯಾಗುವ ಸಾಧ್ಯತೆಯಿದ್ದು, ಎಚ್ಚರಿಕೆಯ ಮಟ್ಟವನ್ನು ಗರಿಷ್ಠ ಮಿತಿಗೆ ಏರಿಸುವಂತೆ ಸ್ಥಳೀಯ ಅಧಿಕಾರಿಗಳು ಮತ್ತು ಎರಡು ಬಂದರುಗಳಿಗೆ ಬಾಂಗ್ಲಾದೇಶ ಹವಾಮಾನ ಇಲಾಖೆ ಸೂಚನೆ ನೀಡಿತ್ತು.

ಚಂಡಮಾರುತದ ಬಗ್ಗೆ ಜನರಿಗೆ ಮಾಹಿತಿ ನೀಡಲು ಸುಮಾರು 55,000 ಸ್ವಯಂಸೇವಕರನ್ನು ನಿಯೋಜಿಸಲಾಗಿತ್ತು ಹಾಗೂ ಅವರು ಮನೆ ಮನೆಗಳಿಗೆ ತೆರಳಿ ಜನರಿಗೆ ಎಚ್ಚರಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News