ಮಾನವ ಹಕ್ಕುಗಳು ಆತಂಕದಲ್ಲಿ

Update: 2019-11-10 18:32 GMT

ಕುಟುಂಬದ ಮರ್ಯಾದೆ’ಗಾಗಿ (ಆನರ್) ತಮ್ಮ ಮಗುವನ್ನು, ಸಾಮಾನ್ಯವಾಗಿ ಒಬ್ಬಳು ಮಗಳನ್ನು ಕೊಲ್ಲುವ ಕುಟುಂಬಗಳು ದಕ್ಷಿಣ ಏಶ್ಯ ರಾಷ್ಟ್ರಗಳಲ್ಲಿವೆ. ಇಲ್ಲಿ ‘ಕುಟುಂಬ’ದ ಪರಿಕಲ್ಪನೆ ಅದರ ಘಟಕವಾದ ಮಗಳನ್ನು ಹೊರಗಿಟ್ಟಿದೆ. ‘ಕುಟುಂಬ’ದ ಪರಿಕಲ್ಪನೆಯನ್ನು ‘ಸಂರಕ್ಷಿಸಲು’ ಅಂತಹ ಕುಟುಂಬಗಳು ತಮ್ಮ ಮಕ್ಕಳನ್ನೇ ಕೊಲ್ಲುತ್ತವೆ. ಒಂದು ಕುಟುಂಬದ ದೈಹಿಕ ವಾಸ್ತವವಾಗಿರುವ ಒಂದು ಮಗುವನ್ನು ಕುಟುಂಬದ ಒಂದು ಅಮೂರ್ತ ಪರಿಕಲ್ಪನೆಗಾಗಿ ಅದು ಹೇಗೆ ಕೊಲ್ಲಲು ಸಾಧ್ಯವೆಂದು ನನಗೆ ಯಾವತ್ತೂ ಅರ್ಥವಾಗಿಲ್ಲ. ಆದರೆ ಇದು ವ್ಯಾಪಕವಾದ, ದೊಡ್ಡದಾದ ಮಟ್ಟಗಳಲ್ಲಿ ಕೂಡ ನಡೆಯುತ್ತದೆ. ನಮ್ಮ ಧರ್ಮದಲ್ಲಿ ನಾವು ನಂಬುವುದಕ್ಕಿಂತ ಭಿನ್ನವಾಗಿ ನಂಬುವವರನ್ನು ಅಧರ್ಮಕ್ಕಾಗಿಯೇ ನಾವು ಕೊಲ್ಲುತ್ತೇವೆ. ನಮ್ಮ ರಾಷ್ಟ್ರದ ಬಗ್ಗೆ ನಮಗಿರುವುದಕ್ಕಿಂತ ಭಿನ್ನವಾದ ದೃಷ್ಟಿಕೋನ, ದರ್ಶನ (ವಿಜನ್) ಹೊಂದಿರುವವರಿಗೆ ನಾವು ಕಿರುಕುಳ ನೀಡುತ್ತೇವೆ. ಅವರನ್ನು ಬರ್ಬರವಾಗಿ ನಡೆಸಿಕೊಳ್ಳುತ್ತೇವೆ.

ಸಾರ್ವಜನಿಕ ಜಾಗದಲ್ಲಿ, ಬಯಲಲ್ಲಿ ಮಲವಿಸರ್ಜನೆ ಮಾಡಿದ್ದಕ್ಕಾಗಿ ದಲಿತ ಮಕ್ಕಳನ್ನು ಇತ್ತೀಚೆಗೆ ಹೊಡೆದು ಸಾಯಿಸಿದ ಸುದ್ದಿ ಓದಿದೆ. ಈ ಘಟನೆ ಜಾತಿ ಹಿಂಸೆಯನ್ನು ಬಯಲುಗೊಳಿಸಿದ್ದಲ್ಲದೆ ಹಲವು ಭಾರತೀಯರು ಸಾರ್ವಜನಿಕ ಸ್ಥಳದಲ್ಲಿ ಮಲವಿಸರ್ಜನೆ ಮಾಡುವುದನ್ನು ನಿಲ್ಲಿಸುವ ಚಳವಳಿಯನ್ನು ತಪ್ಪಾಗಿ ಅರ್ಥಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿತು. ಬಯಲಲ್ಲಿ ಮಲವಿಸರ್ಜಿಸುವುದು ನಿಜವಾಗಿ ಆರೋಗ್ಯ ಮತ್ತು ಸಮಾಜ ಕಲ್ಯಾಣದ ವಿಷಯ. ಆದರೆ ಇದನ್ನು ಪ್ರತಿಷ್ಠೆಯ ವಿಷಯವಾಗಿ ಪರಿಗಣಿಸಲಾಗುತ್ತಿದೆ.

ಪಕ್ಕದಲ್ಲಿ ಹಾದು ಹೋಗುವ ಪ್ರವಾಸಿಗರ ಹಾಗೂ ಪತ್ರಕರ್ತರ ದೃಷ್ಟಿಯಲ್ಲಿ ಸಾರ್ವಜನಿಕ ಶೌಚ ನಮ್ಮ ರಾಷ್ಟ್ರದ ಪ್ರತಿಷ್ಠೆಯನ್ನು ಕುಗ್ಗಿಸುತ್ತದೆ ಎಂಬ ಕಾರಣಕ್ಕಾಗಿ ಆಕ್ಷೇಪಾರ್ಹವಲ್ಲ, ಕೆಟ್ಟದಲ್ಲ. ‘ಭಾರತೀಯತ್ವ’ದ (ಇಂಡಿಯನ್‌ನೆಸ್) ಬಗ್ಗೆ ಭಾರೀ ಹೆಮ್ಮೆಪಡುವ ರಾಷ್ಟ್ರೀಯವಾದಿಗಳು ವಿದೇಶಿಯರ, ಸಾಮಾನ್ಯವಾಗಿ ಬಿಳಿಯರ, ಅಭಿಪ್ರಾಯಗಳ ಬಗ್ಗೆ ಕೂಡ ತುಂಬ ಯೋಚಿಸುತ್ತಾರೆಂಬುದು ಕುತೂಹಲದ ವಿಷಯ.

ಸಾರ್ವಜನಿಕ ಸ್ಥಳದಲ್ಲಿ ಶೌಚಕ್ಕೆ ಹೋಗುವುದು ಅದು ಒಡ್ಡುವ ಆರೋಗ್ಯ ಸಮಸ್ಯೆಗಳ ಜತೆಗೆ, ಸ್ವಚ್ಛ ಶೌಚಾಲಯಗಳ ಸವಲತ್ತುಗಳಿಲ್ಲದವರಿಗೆ ಅದು ದೈಹಿಕವಾಗಿ ಏನು ಮಾಡುತ್ತದೆಂಬ ಕಾರಣಕ್ಕಾಗಿ ಕೂಡಾ ಪರಿಗಣಿಸಬೇಕಾದ ವಿಷಯ. ಸನ್ನಿವೇಶಗಳ ಅನಿವಾರ್ಯತೆಯಿಂದಾಗಿ ತೆರೆದ ಬಯಲಲ್ಲಿ ಶೌಚಕ್ಕೆ ಹೋಗುವವರನ್ನು ಬರ್ಬರವಾಗಿ ನಡೆಸಿಕೊಳ್ಳುವುದು ರಾಷ್ಟ್ರದ ಆ ನಾಗರಿಕನಿಗಿಂತ ರಾಷ್ಟ್ರೀಯ ಪ್ರತಿಷ್ಠೆಗೆ ಹೆಚ್ಚು ಮಹತ್ವ ನೀಡುತ್ತದೆ. ಆದರೆ, ನಾಗರಿಕರೇ ಇಲ್ಲದಿದ್ದರೆ ಎಲ್ಲಿಯ ರಾಷ್ಟ್ರ? ಇದು ಕುಟುಂಬದ ಮರ್ಯಾದೆಗಾಗಿ ಮಗಳೊಬ್ಬಳನ್ನು ಕೊಂದಂತೆ.

 ‘ಧರ್ಮ ಮತ್ತು ರಾಷ್ಟ್ರ’ದ ಆದರ್ಶವಾದಿ ವ್ಯಾಖ್ಯಾನಗಳ ಪರಿಕಲ್ಪನೆಯ ಒಂದುದೊಡ್ಡ ದೋಶವೆಂದರೆ ಅದು ಮನುಷ್ಯನನ್ನೇ ನಾಶಮಾಡಿ ಬಿಡುತ್ತದೆ. ಆದ್ದರಿಂದ ಮಾನವ ಹಕ್ಕುಗಳನ್ನು ಧಾರ್ಮಿಕ, ರಾಷ್ಟ್ರೀಯ ಅಥವಾ ಸಾಂಸ್ಕೃತಿಕ ವ್ಯತ್ಯಾಸಗಳ ನೆಲೆಯಲ್ಲಿ ವ್ಯಾಖ್ಯಾನಿಸಲೇರಬಾರದೆಂಬುದನ್ನು ಈ ಸಂದರ್ಭದಲ್ಲಿ ನಾವು ಸ್ಪಷ್ಟವಾಗಿ ಹೇಳಲೇ ಬೇಕು.

ಒಂದು ಕುಟುಂಬವನ್ನು ಹೇಗೆ ಅದರ ಸದಸ್ಯರಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲವೋ, ಒಂದು ರಾಷ್ಟ್ರವೆಂದರೆ ಹೇಗೆ ಅದರ ನಾಗರಿಕರೋ, ಹಾಗೆಯೇ ಮಾನವ ಹಕ್ಕುಗಳು ಕೂಡಾ ಸಮಾಜದಲ್ಲಿ ಮನುಷ್ಯ ಜೀವಿಗಳ ದೈಹಿಕ (ಬಯಾಲಾಜಿಕಲ್) ಅಸ್ತಿತ್ವವನ್ನೇ ಆಧರಿಸಿ ಇರಬೇಕು. ಇತರ ಹಲವು ಹಕ್ಕುಗಳು ಸಮಾಜದಿಂದ ಸಮಾಜಕ್ಕೆ ಬೇರೆ ಬೇರೆ ಇರಬಹುದು.

ಆದರೆ ಮೂಲ (ಬೇಸಿಕ್) ಮಾನವ ಹಕ್ಕುಗಳು ಎಲ್ಲ ಸಮಾಜಗಳಿಗೂ ಸಮಾನವಾಗಿಯೇ ಇರಬೇಕು. ರಾಷ್ಟ್ರೀಯತೆ ಸಂಸ್ಕೃತಿ, ಲಿಂಗ, ವರ್ಣ, ಲೈಂಗಿಕತೆ ಇತ್ಯಾದಿಗಳ ವ್ಯತ್ಯಾಸಗಳನ್ನಾಧರಿಸಿ ವಿವಿಧ ಸಮಾಜಗಳಲ್ಲಿ ಮಾನವ ಹಕ್ಕುಗಳು ಬದಲಾಗಬೇಕು ಎನ್ನುವುದಾದಲಿ, ಆಗ ನಾವು ‘ಮಾನವ’ ಅಸ್ತಿತ್ವದಲ್ಲೇ ಇಲ್ಲವೆಂದು ವಾದಿಸಿದಂತಾಗುತ್ತದೆ. ಇದು ಗತಕಾಲದಲ್ಲಿ ಜನಾಂಗೀಯವಾದಿಗಳ ವಾದವಾಗಿತ್ತು ಮತ್ತು ಒಮ್ಮಿಮ್ಮೆ ಈಗ ಕೂಡ ತೀವ್ರಗಾಮಿ ಪುರುಷವಾದಿಗಳು ಈ ವಾದಕ್ಕೆ ಅಂಟಿಕೊಳ್ಳುತ್ತಾರೆ. ಇವರು ಮಹಿಳೆಯರ ಮಾನವೀಯತೆಯನ್ನು ಅಲ್ಲಗಳೆಯುತ್ತಾರೆ. ಮಹಿಳೆಯರನ್ನು ಪುರುಷರಿಗಿಂತ ಬೇರೆಯೇ ಆದ ತಾರತಮ್ಯ ರೀತಿಯಲ್ಲಿ ನಡೆಸಿಕೊಳ್ಳಬೇಕೆನ್ನುವ ಧಾರ್ಮಿಕ ಮುಸ್ಲಿಮರ ವಿರುದ್ಧ ಇದೇ ನನ್ನ ಮುಖ್ಯ ತಕರಾರು ಆಗಿದೆ. ಮಹಿಳೆಯರನ್ನು ನಾವು ನಡೆಸಿಕೊಳ್ಳುವ ರೀತಿ ಅವರಿಗೆ ನಾವು ಅನ್ವಯಿಸುವ ಮಾನದಂಡಗಳು ಎಲ್ಲಿಯ ತನಕ ಮಹಿಳೆಯರ ಮಾನವೀಯ ವ್ಯಾಪ್ತಿಯನ್ನು ಸೀಮಿತಗೊಳಿಸುವುದಿಲ್ಲವೋ, ಅಲ್ಲಿಯ ತನಕ ನಾನು ಇವುಗಳನ್ನು ಒಪ್ಪಿಕೊಳ್ಳುತ್ತೇವೆೆ. ವಸತಿ, ಆಹಾರ ಆಸ್ತಿಯ ಹಕ್ಕು, ಸಂತಾನೋತ್ಪತ್ತಿಯ ಹಕ್ಕುಗಳು ಶಿಕ್ಷಣ ಮತ್ತು ಪುರುಷರಿಗೆ ಇರುವಷ್ಟೇ ಸಂಚಾರ ಸ್ವಾತಂತ್ರ ಮಹಿಳೆಯರಿಗೂ ಇರುವವರೆಗೆ ನಾನು ಇವುಗಳನ್ನು ಒಪ್ಪಿಕೊಳ್ಳುತ್ತೇನೆ. ಭಾರತದಲ್ಲಿ ನಾವು ಎಡಬದಿಯಲ್ಲಿ ವಾಹನಗಳನ್ನು ಚಲಾಯಿಸುತ್ತೇವೆ ಮತ್ತು ಡೆನ್ಮಾರ್ಕ್‌ನಲ್ಲಿ ನಾವು ವಾಹನಗಳನ್ನು ಬಲಬದಿಯಲ್ಲಿ ಚಲಾಯಿಸುತ್ತೇವೆ ಎಂದು ಒಪ್ಪಿಕೊಳ್ಳುವ ಹಾಗೆ ಮೂಲ ಮಾನವ ಹಕ್ಕುಗಳನ್ನು, ಅಂದರೆ ವಸತಿ, ಆಹಾರ ಇತ್ಯಾದಿಗಳನ್ನು ಪಡೆಯುವ ಹಕ್ಕುಗಳನ್ನು ಲಿಂಗ ವ್ಯತ್ಯಾಸ ಅಥವಾ‘ಜನಾಂಗ’ ವ್ಯತ್ಯಾಸದ ಆಧಾರದಲ್ಲಿ ಮಹಿಳೆಯರಿಗೆ ನಿರಾಕರಿಸಲು ಸಾಧ್ಯವೇ ಇಲ್ಲ. ಆದರೆ ಇಂದು ಭಾರತದಲ್ಲಿ ಇದನ್ನು ಅರ್ಥಮಾಡಿಕೊಳ್ಳದ ಹಲವು ರಾಜಕಾರಣಗಳಿರುವುದು ದುಃಖದ ಸಂಗತಿ...ಸಂಸ್ಕೃತಿ ಅಥವಾ ರಾಷ್ಟ್ರೀಯತೆಯ ಆಧಾರದಲ್ಲಿ ಮಾನವ ಹಕ್ಕುಗಳನ್ನು ನಿರಾಕರಿಸುವ ಬೆಳವಣಿಗೆಗಳು ನಡೆಯುತ್ತಿವೆ. ಹಲವು ಮುಸ್ಲಿಮರು ಇಂತಹ ನಿರಾಕರಣೆಯ ಬೋನಿನೊಳಗೆ ಬಿದ್ದಿದ್ದಾರೆ.

ಇಸ್ಲಾಂ ಧರ್ಮದ ಪಠ್ಯಗಳನ್ನು ಮಾನವ ಹಕ್ಕುಗಳಿಗೆ ಹೊಂದಿಕೆಯಾಗುವಂತೆ ಹೇಗೆ ಅರ್ಥೈಸಬಹುದೋ, ಹಾಗೆಯೇ ಭಾರತದ ಇತಿಹಾಸ ಮತ್ತು ಸಂಸ್ಕೃತಿಯನ್ನು ಕೂಡ ಅರ್ಥೈಸಬಹುದು. ನಾವು ಹೇಗೆ ಅರ್ಥೈಸುತ್ತೇವೆ ಎಂಬುದು ಯಾವಾಗಲೂ ನಮ್ಮ ಆಯ್ಕೆಗೆ ಬಿಟ್ಟ ವಿಷಯ.

ಆದರೆ ಅಧಿಕಾರದಲ್ಲಿರುವ ಹಲವರು ನಮಗೆ ಈ ಆಯ್ಕೆಯನ್ನು ನೀಡಲು ಇಷ್ಟಪಡುವುದಿಲ್ಲ. ಯಾಕೆಂದರೆ ನೀವು ಬಲಪ್ರಯೋಗದ ಮೂಲಕ ನಿಮ್ಮ ಕುಟುಂಬವನ್ನು ನಡೆಸುವವರಾದರೆ ನಿಮ್ಮ ಅಧಿಕಾರವು ಕುಟುಂಬದ ಅಮೂರ್ತ ಪರಿಕಲ್ಪನೆಯನ್ನಾಧರಿಸಿರುತ್ತದೆ. ಕುಟುಂಬದ ಸದಸ್ಯರ ಅಭಿಪ್ರಾಯ, ಆಸೆ, ಆಕಾಂಕ್ಷೆ, ಅನುಭವಗಳ ವಿರುದ್ಧವಾಗಿ ಇರುತ್ತದೆ ಮತ್ತು ಈ ಅಧಿಕಾರ ಉಳಿಸಿಕೊಳ್ಳಲಿಕ್ಕಾಗಿ ನೀವು ನಿಮ್ಮ ಒಬ್ಬಳು ಸದಸ್ಯೆಯನ್ನು ಬಲಿಕೊಡಲು ಸಿದ್ಧರಿರುತ್ತೀರಿ. ಈ ಅರ್ಥದಲ್ಲಿ ಅದು ಒಂದು ಕುಟುಂಬವಿರಲಿ ಅಥವಾ ಒಂದು ರಾಷ್ಟ್ರವಿರಲಿ, ಮಾನವ ಹಕ್ಕುಗಳು ಪ್ರಜಾಪ್ರಭುತ್ವದ ಒಂದು ಸಂಪೂರ್ಣ ತಿಳುವಳಿಕೆಯಿಂದ ಪ್ರತ್ಯೇಕಿಸಲಾಗದ ಹಕ್ಕುಗಳು.

 (ಕೃಪೆ: ದಿ ಹಿಂದು)

Writer - ತಬಿಶ್ ಖೈರ್

contributor

Editor - ತಬಿಶ್ ಖೈರ್

contributor

Similar News