ಕಾಂಗ್ರೆಸ್-ಎನ್‌ಸಿಪಿಯೊಂದಿಗೆ ಶಿವಸೇನೆ ಕೈಜೋಡಿಸಿದರೆ ತಪ್ಪೇನು?: ಸಂಜಯ್ ರಾವತ್

Update: 2019-11-11 05:32 GMT

ಮುಂಬೈ, ನ.11:ಬಿಜೆಪಿ ಸುಳ್ಳು ಹೇಳುವ ಪಕ್ಷ ಹಾಗೂ ಅಹಂಕಾರದ ಧೋರಣೆಯ ಮೂಲಕ ಜನತೆಯ ಜನಾದೇಶಕ್ಕೆ ಅವಮಾನ ಮಾಡುತ್ತಿದೆ. ಕಾಂಗ್ರೆಸ್ ಹಾಗೂ ಎನ್‌ಸಿಪಿ ತಮ್ಮ ಆಂತರಿಕ ಭಿನ್ನಾಭಿಪ್ರಾಯವನ್ನು ತೊರೆದು ಮಹಾರಾಷ್ಟ್ರದ ಹಿತಾಸಕ್ತಿಗಾಗಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ರೂಪಿಸಬೇಕು. ಬಿಜೆಪಿಯು ಜಮ್ಮು-ಕಾಶ್ಮೀರದಲ್ಲಿ ಪಿಡಿಪಿಯೊಂದಿಗೆ ಕೈ ಜೋಡಿಸುವುದಾದರೆ ಶಿವಸೇನೆಯು ಎನ್‌ಸಿಪಿ ಹಾಗೂ ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿದರೆ ತಪ್ಪೇನಿದೆ? ಎಂದು  ಶಿವಸೇನೆಯ ಸಂಸದ ಸಂಜಯ್ ರಾವತ್ ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿ ಬಿಜೆಪಿ ನೀಡಿದ್ದ ಭರವಸೆಯನ್ನು ಈಡೇರಿಸಿಲ್ಲ. ಸಿಎಂ ಹುದ್ದೆಯನ್ನು ಶಿವಸೇನೆಗೆ ನೀಡಲು ಬಿಜೆಪಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಹೀಗಾಗಿ ಎನ್‌ಡಿಎ ಮೈತ್ರಿಕೂಟ ಮುರಿದುಬಿದ್ದಿರುವುದಕ್ಕೆ ಶಿವಸೇನೆಯನ್ನು ನಿಂದಿಸುವುದು ಸರಿಯಲ್ಲ. ಮಹಾರಾಷ್ಟ್ರದಲ್ಲಿ ತಲೆದೋರಿರುವ ರಾಜಕೀಯ ಬಿಕ್ಕಟ್ಟಿಗೆ ಬಿಜೆಪಿಯೇ ನೇರ ಹೊಣೆಯಾಗಿದೆ ಎಂದು  ಸಂಜಯ್ ರಾವತ್ ಆರೋಪಿಸಿದ್ದಾರೆ.

 ರಾಜ್ಯ ವಿಧಾನಸಭೆ ಚುನಾವಣೆಗಿಂತ ಮೊದಲು ಅಧಿಕಾರ ಹಂಚಿಕೆಯಲ್ಲಿ 50:50 ಅನುಪಾತದ ಸೂತ್ರಕ್ಕೆ ಒಪ್ಪಿಕೊಂಡಿದ್ದ ಬಿಜೆಪಿ ಫಲಿತಾಂಶದ ಬಳಿಕ ತನ್ನ ಮಾತನ್ನು ಉಳಿಸಿಕೊಳ್ಳಲು ಹಿಂದೇಟು ಹಾಕಿದೆ. ಇದೀಗ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುತ್ತೇನೆಂದು ಹೇಳುತ್ತಿದೆ. ಭರವಸೆಯನ್ನು ಈಡೇರಿಸದ ಬಿಜೆಪಿಯೊಂದಿಗೆ ಮೈತ್ರಿ ಮುಂದುವರಿಕೆ ಸಾಧ್ಯವಿಲ್ಲ. ಬಿಜೆಪಿ ಬಹುಮತ ಸಾಬೀತಿಗೆ ರಾಜ್ಯಪಾಲರು 72 ಗಂಟೆ ಕಾಲಾವಕಾಶ ನೀಡಿದ್ದರು. ಆದರೆ, ನಮಗೆ 24 ಗಂಟೆ ಸಮಯಾವಕಾಶ ನೀಡಲಾಗಿದೆ ಎಂದು ರಾವತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News