ಶಂಕರ್ ನಾಗ್ ನೆನಪಿನಲ್ಲಿ ಮಾಲ್ಗುಡಿ ಡೇಸ್ ಚಿತ್ರತಂಡ

Update: 2019-11-11 16:37 GMT

ಈ ಸಂದರ್ಭದಲ್ಲಿ ಶಂಕರ್ ನಾಗ್ ಬದುಕಿ ಇರುತ್ತಿದ್ದರೆ 65ವರ್ಷ ತುಂಬುತ್ತಿತ್ತು. ಆದರೆ ಅವರಿಲ್ಲ, ಅವರ ಚಿತ್ರಗಳಿವೆ, ಅವರ ಕನಸುಗಳಿವೆ. ಜೊತೆಗೆ ಅವರ ನೆನಪುಗಳು ನಮ್ಮ ನಡುವೆ ಇದೆ. ಶಂಕರ್ ನಾಗ್ ಅಂದಾಗ ನೂರಾರು ವಿಷಯಗಳು ಕಣ್ಣ ಮುಂದೆ ಬರುತ್ತದೆ. ಆದರೆ ಅದರಲ್ಲಿ ಪ್ರಮುಖವಾಗಿ ಕಾಣ ಸಿಗುವುದು ಮಾಲ್ಗುಡಿ ಡೇಸ್ ಅನ್ನುವ ಕೃತಿ. ಕೃತಿ ಆಗಿದ್ದರೆ ಇವತ್ತಿಗೆ ಇಷ್ಟು ಜನಜನಿತವಾಗಿರುತ್ತಿರಲಿಲ್ಲ. ಆ ಕೃತಿಗೆ ಒಂದು ದೃಶ್ಯ ರೂಪ ಕೊಟ್ಟು ಅದನ್ನು ಈಡೀ ಜಗತ್ತು ನೋಡುವಂತೆ ಮಾಡಿದವರು ಶಂಕರ್‍ನಾಗ್. ಧಾರವಾಹಿ ಬಿಡುಗಡೆ ಆಗಿ 32 ವರುಷ ಸಂದರೂ ಜನ ಅದನ್ನು ಸ್ಮರಿಸುತ್ತಾರೆ. ಅಂದರೆ ಅದು ಶಂಕರ್‍ನಾಗ್ ಅನ್ನುವ ದೃಶ್ಯ ನಿರ್ದೇಶಕನೊಳಗಿದ್ದ ತಾಂತ್ರಿಕ ಶಕ್ತಿ.

ಇದೀಗ ಅದೇ ಶೀರ್ಷಿಕೆಯಿಂದ ವಿಜಯ ರಾಘವೇಂದ್ರರವರು ಮುಖ್ಯ ಭೂಮಿಕೆಯಲ್ಲಿ ಇರುವ ಸಿನಿಮಾ ಬರುತ್ತಿರುವುದು ನಮಗೆಲ್ಲಾ ತಿಳಿದಿದೆ. ಕಳೆದ ಬಾರಿ ಚಿತ್ರತಂಡ ಚಿತ್ರೀಕರಣ ಮುಗಿಸಿ ಮೊದಲ ಪೋಸ್ಟರ್ ಬಿಡುಗಡೆ ಮಾಡಿ ಇಡೀ ಚಿತ್ರತಂಡ ಕೊಂಡಾಡುವಂತೆ ಮಾಡಿತ್ತು. ಮೊದಲ ಪೋಸ್ಟರ್ ನಲ್ಲಿ ವಿಜಯ ರಾಘವೇಂದ್ರರವರ ಗೆಟಪ್ ವಿಭಿನ್ನವಾಗಿದ್ದು 65-70 ಆಸುಪಾಸಿನ ಸಾಹಿತಿ ಲಕ್ಷ್ಮೀನಾರಾಯಣ ಮಾಲ್ಗಡಿ ಆಗಿ ಕಾಣಿಸಿಕೊಂಡಿದ್ದಾರೆ. ಥೇಟ್ ವಯೋವೃದ್ಧನಂತೆ ಕಾಣುತ್ತಿದ್ದು ವಿಜಯ ರಾಘವೇಂದ್ರರವರ ಸಿನಿ ಜೀವನದಲ್ಲಿ ದೊಡ್ಡ ತಿರುವು ನೀಡುವ ಚಿತ್ರ ಇದಾಗಲಿದೆ, ಅನ್ನುವ ಮಾತುಗಳು ಹರಿದಾಡಲು ಶುರುವಾದವು. ಇದೀಗ ಮಾಲ್ಗಡಿ ಡೇಸ್ ಚಿತ್ರ ತಂಡ ಅವರ ಹುಟ್ಟು ಹಬ್ಬದ ಈ ಸಂದರ್ಭದಲ್ಲಿ ಸಿನಿಮಾವನ್ನು ಶಂಕರ್ ನಾಗ್ ವರಿಗೆ ಅರ್ಪಿಸಿದೆ. ಈ ಮೂಲಕ ಶಂಕರ್ ನಾಗ್‍ ರವರಿಗೆ ಅವರ 65ನೇ ಹುಟ್ಟು ಹಬ್ಬದ ಈ ಸಂದರ್ಭದಲ್ಲಿ ಗೌರವವನ್ನು ಸೂಚಿಸಿದೆ.

ಮಾಲ್ಗುಡಿ ಡೇಸ್ ಜನಜನಿತವಾಗಲು ಶಂಕರ್‍ನಾಗ್ ಕಾರಣ ಹಾಗಾಗಿ ಈ ಸಿನಿಮಾದ ಮೂಲಕ ನಾವು ಅವರನ್ನು ನೆನೆಯುತ್ತಿದ್ದೇವೆ ಎಂದಿದೆ ಚಿತ್ರ ತಂಡ.

ಹೊಸ ಭರವಸೆ ಮೂಡಿಸಿರುವ ಈ ಚಿತ್ರ ಗೆಲುವಿನ ಪತಾಕೆಯನ್ನು ಹಾರಿಸಿ ಆ ಮೂಲಕ ಶಂಕರ್‍ನಾಗ್‍ರವರ ಕನಸು ಮತ್ತೆ ಜೀವಂತ ಇರುವಂತೆ ಆಗಲಿ ಎನ್ನುವುದೇ ನಮ್ಮ ಆಶಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News