ಪುರಾತತ್ವ ಇಲಾಖೆಯವರ ಮೂಲಕ ಇವುಗಳನ್ನೂ ಪರೀಕ್ಷಿಸಿದರೆ?

Update: 2019-11-11 18:18 GMT

ಮಾನ್ಯರೇ,

ಅಯೋಧ್ಯೆಯ ರಾಮ ಮಂದಿರದ ಕುರಿತು ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪನ್ನು ಆಧರಿಸಿ ನಮ್ಮ ದೇಶದಲ್ಲಿರುವ 500 ವರ್ಷಗಳಿಗಿಂತ ಹೆಚ್ಚು ಹಳೆಯ ಹಿಂದೂ ಮಂದಿರಗಳನ್ನೆಲ್ಲಾ ಪುರಾತತ್ವ ಇಲಾಖೆಯವರ ಮೂಲಕ ಪರೀಕ್ಷಿಸಿದರೆ ಆಘಾತಕರ ಫಲಿತಾಂಶ ಹೊರಬರುವುದು ಖಚಿತ.

ನಮ್ಮ ದೇಶದಲ್ಲಿರುವ 500 ವರ್ಷಗಳಿಗಿಂತ ಹೆಚ್ಚು ಹಳೆಯ ವೈದಿಕ ದೇವಸ್ಥಾನಗಳಲ್ಲಿ ಹೆಚ್ಚಿನವು ಮೂಲತಃ ಬೌದ್ಧ ಅಥವಾ ಜೈನ ಮಂದಿರಗಳಾಗಿದ್ದವು ಎಂದು ಸಾಬೀತಾಗುತ್ತದೆ. ತಿರುಪತಿ ತಿಮ್ಮಪ್ಪದೇವರ ಮೂರ್ತಿಯ ಎಲ್ಲಾ ಅಲಂಕಾರ ತೆಗೆದು ಒಮ್ಮೆ ಆ ಬೆತ್ತಲೆ ಮೂರ್ತಿಯ ಫೋಟೋ ಎಲ್ಲಾ ದಿಕ್ಕಿನಿಂದ ತೆಗೆದು ಅದನ್ನು ಪತ್ರಿಕೆಗಳಲ್ಲಿ ಪ್ರಕಟಿಸಿ ಸಾರ್ವಜನಿಕರ ಅಭಿಪ್ರಾಯಕ್ಕೆ ಬಿಟ್ಟು ಕೊಡಲಿ. ಆ ಶ್ರೀನಿವಾಸ ಮೂರ್ತಿ 22ನೇ ಜೈನ ತೀರ್ಥಂಕರ ಭಗವಾನ್ ನೇಮಿನಾಥರ ದಿಗಂಬರ ಮೂರ್ತಿ ಎಂದು ಸ್ಪಷ್ಟವಾಗಿ ಗೊತ್ತಾಗುತ್ತದೆ. ವಿಜಯ ನಗರ ಆಡಳಿತ ಕಾಲದಲ್ಲಿ ಆಗಿನ ರಾಜ ಬುಕ್ಕರಾಯ ಇದನ್ನು ಬಲಾತ್ಕಾರದಿಂದ ವೈಷ್ಣವರಿಗೆ ಕೊಟ್ಟಿದ್ದು ಎಂಬ ಐತಿಹಾಸಿಕ ದಾಖಲೆ ಕೂಡ ಇದೆಯಂತೆ. ಇದನ್ನು ಸಹ ಸುಪ್ರೀಂ ಕೋರ್ಟ್ ಪರಿಶೀಲಿಸಿ ಆ ದೇವಸ್ಥಾನವನ್ನು ಜೈನರಿಗೆ ಬಿಟ್ಟು ಕೊಡಲು ಆದೇಶಿಸಲು ಸಾಧ್ಯವೇ? ತಿರುಪತಿ ತಿಮ್ಮಪ್ಪನ ಮುಖ ಮುಚ್ಚಿ ಹೋಗುವಂತೆ ಅಷ್ಟು ದೊಡ್ಡ ನಾಮ ಹಾಕುವುದು ಹಾಗೂ ಶರೀರವನ್ನೆಲ್ಲಾ ಭಾರೀ ಆಭರಣಗಳಿಂದ ಮುಚ್ಚುವುದಕ್ಕೆ ಮುಖ್ಯ ಕಾರಣ ಆ ಮೂರ್ತಿಯಲ್ಲಿರುವ ಗಾಂಧಾರ ಶೈಲಿಯ ಗುಂಗುರು ಕೂದಲಿನ ಜೈನ ಮೂರ್ತಿಯ ವೈಶಿಷ್ಟ್ಯಗಳು ಭಕ್ತರಿಗೆ ಕಾಣದಿರಲಿ ಎಂದು!

ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನ ಮಂಜುಶ್ರೀ ಎಂಬ ಬೌದ್ಧ ಭಿಕ್ಷುವಿನ ವಿಹಾರ ಆಗಿತ್ತು ಎಂಬ ಎಲ್ಲಾ ಪುರಾವೆಗಳು ಹಾಗೂ 2,300 ವರ್ಷ ಹಳೆಯ ಸಾಮ್ರಾಟ ಅಶೋಕನ ಕಾಲದ ‘ದೀಪದಾನೋತ್ಸವದ’ ಪೂರ್ಣ ಕಲ್ಲಿನ 30 ಅಡಿ ಎತ್ತರದ ಭವ್ಯ ದೀಪಸ್ತಂಭ ಸ್ಥಳದಲ್ಲಿಯೇ ಈಗಲೂ ಲಭ್ಯವಿವೆ. ಅದನ್ನೂ ಬೌದ್ಧರಿಗೆ ಬಿಟ್ಟು ಕೊಡಲು ಸಾಧ್ಯವೇ?

-ಅನಿಲ್ ಪೂಜಾರಿ, ಅಳಕೆ, ಮಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News