ಭಾರತ ಮಹಿಳಾ ತಂಡಕ್ಕೆ 10 ವಿಕೆಟ್‌ಗಳ ಗೆಲುವು

Update: 2019-11-11 19:13 GMT

ಗ್ರೊಸ್ ಐಲೆಟ್(ಸೈಂಟ್ ಲೂಸಿಯಾ), ನ.11: ಸತತ ಎರಡನೇ ಅರ್ಧಶತಕ ಸಿಡಿಸಿದ ಯುವ ಆಟಗಾರ್ತಿ ಶೆಫಾಲಿ ವರ್ಮಾ ಹಾಗೂ ಆಫ್ ಸ್ಪಿನ್ನರ್ ದೀಪ್ತಿ ಶರ್ಮಾ ಅವರ ಸ್ಪಿನ್ ಮೋಡಿಯ ನೆರವಿನಿಂದ ಭಾರತೀಯ ಮಹಿಳಾ ಕ್ರಿಕೆಟ್ ತಂಡ ವೆಸ್ಟ್‌ಇಂಡೀಸ್ ವಿರುದ್ಧ ನಡೆದ ಎರಡನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ 10 ವಿಕೆಟ್‌ಗಳ ಅಂತರದಿಂದ ಗೆಲುವು ದಾಖಲಿಸಿದೆ.

ರವಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 104 ರನ್ ಸುಲಭ ಗುರಿ ಪಡೆದ ಭಾರತ 10.3 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತು. ಮೊದಲ ಪಂದ್ಯದಲ್ಲಿ ಅರ್ಧಶತಕದ ಕೊಡುಗೆ ನೀಡಿದ್ದ ಶೆಫಾಲಿ ಹಾಗೂ ಸ್ಮತಿ ಮಂಧಾನ ಎರಡನೇ ಪಂದ್ಯದಲ್ಲೂ ತಂಡಕ್ಕೆ ಆಧಾರವಾದರು.

15ರ ಹರೆಯದ ಶೆಫಾಲಿ ತನ್ನ ಶ್ರೇಷ್ಠ ಪ್ರದರ್ಶನವನ್ನು ಮುಂದುವರಿಸಿದ್ದು 35 ಎಸೆತಗಳಲ್ಲಿ 69 ರನ್ ಗಳಿಸಿದರು. ಸ್ಮತಿ ಮಂಧಾನ(30)ಜೊತೆಗೂಡಿ ಮೊದಲ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 104 ರನ್ ಸೇರಿಸಿ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು. 23ರ ಹರೆಯದ ಸ್ಮತಿ 28 ಎಸೆತಗಳಲ್ಲಿ 4 ಬೌಂಡರಿಗಳ ಸಹಿತ 30 ರನ್ ಸಿಡಿಸಿದ್ದಾರೆ. ಈ ಗೆಲುವಿನೊಂದಿಗೆ ಭಾರತ 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಮೂರನೇ ಪಂದ್ಯ ನವೆಂಬರ್ 14ರಂದು ಗಯಾನದ ಪ್ರೊವಿಡೆನ್ಸ್ ಸ್ಟೇಡಿಯಂನಲ್ಲಿ ನಡೆಯಲಿದೆ.

 ಮೊದಲ ಪಂದ್ಯದಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅರ್ಧಶತಕ ಸಿಡಿಸಿದ ಭಾರತದ ಕಿರಿಯ ವಯಸ್ಸಿನ ಕ್ರಿಕೆಟಿಗಳೆಂಬ ಹಿರಿಮೆಗೆ ಪಾತ್ರರಾಗಿ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡುಲ್ಕರ್ ದಾಖಲೆಯನ್ನು ಮುರಿದಿದ್ದ ಶೆಫಾಲಿ ಎರಡನೇ ಪಂದ್ಯದಲ್ಲಿ 35 ಎಸೆತಗಳ ಇನಿಂಗ್ಸ್ ನಲ್ಲಿ 10 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಸಹಿತ ಬಿರುಸಿನ ಬ್ಯಾಟಿಂಗ್ ಮಾಡಿದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ವೆಸ್ಟ್‌ಇಂಡೀಸ್ ತಂಡವನ್ನು ಭಾರತ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 103 ರನ್‌ಗೆ ನಿಯಂತ್ರಿಸಿತು.

 ದೀಪ್ತಿ ಜೀವನಶ್ರೇಷ್ಠ ಬೌಲಿಂಗ್(4-10)ಸಂಘಟಿಸಿ ವಿಂಡೀಸ್‌ಗೆ ಮೂಗುದಾರ ತೊಡಿಸಿದರು.

ಮೊದಲು ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್ ತಂಡದ ಆರಂಭಿಕ ಆಟಗಾರ್ತಿಯರು ಕ್ರೀಸ್‌ನಲ್ಲಿ ನೆಲೆವೂರಲು ಪರದಾಟ ನಡೆಸಿದರು. ವೇಗದ ಬೌಲರ್ ಶಿಖಾ ಪಾಂಡೆ ಇನಿಂಗ್ಸ್ ನ 4ನೇ ಓವರ್‌ನಲ್ಲಿ ಸ್ಟಾಸಿ-ಆ್ಯನ್ ಕಿಂಗ್(7)ವಿಕೆಟನ್ನು ಉರುಳಿಸಿದರು. ವಿಕೆಟ್‌ಕೀಪರ್ ಶೆಮೈನ್ ಕ್ಯಾಂಪ್‌ಬೆಲ್ ಖಾತೆ ತೆರೆಯಲು ವಿಫಲವಾಗಿ ರಾಧಾ ಯಾದವ್‌ಗೆ(1-20)ವಿಕೆಟ್ ಒಪ್ಪಿಸಿದರು.

ಇನ್ನೋರ್ವ ಆರಂಭಿಕ ಆಟಗಾರ್ತಿ ಹ್ಯಾಲೇ ಮ್ಯಾಥ್ಯೂಸ್(23) ಹಾಗೂ ಚೆಡಿಯನ್ ನೇಶನ್ಸ್(32)32 ರನ್ ಜೊತೆಯಾಟ ನಡೆಸಿ ವಿಂಡೀಸ್ ಇನಿಂಗ್ಸ್ ಆಧರಿಸಲು ಯತ್ನಿಸಿದರು. ವೇಗದ ಬೌಲರ್ ಪೂಜಾ ವಸ್ತ್ರಕರ್(1-23) ಈ ಜೋಡಿಯನ್ನು ಬೇರ್ಪಡಿಸಿತು.

ವೆಸ್ಟ್‌ಇಂಡೀಸ್ ವಿಕೆಟ್ ಉಳಿಸಿಕೊಳ್ಳಲು ವಿಫಲವಾಗಿದ್ದು, ದೀಪ್ತಿ ಶರ್ಮಾ ಕೊನೆಯ 4 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಉರುಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News