ರಾಮ ಮಂದಿರ ನಿರ್ಮಾಣ ಟ್ರಸ್ಟ್ ರಚನೆ ಬಗ್ಗೆ ಅಪಸ್ವರ: ಅಯೋಧ್ಯೆಯಲ್ಲಿ ಧಾರ್ಮಿಕ ಮುಖಂಡರ ನಡುವೆ ಭಿನ್ನಮತ

Update: 2019-11-12 13:45 GMT

ಹೊಸದಿಲ್ಲಿ, ನ.12: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಜವಾಬ್ದಾರಿಯನ್ನು ನಿರ್ವಹಿಸಲು ಟ್ರಸ್ಟ್ ರಚಿಸುವ ಕೆಲಸವನ್ನು  ಸುಪ್ರೀಂ ಕೋರ್ಟ್ ತನ್ನ ಇತ್ತೀಚಿಗಿನ ತೀರ್ಪಿನಲ್ಲಿ ಕೇಂದ್ರ ಸರಕಾರಕ್ಕೆ ವಹಿಸಿದ್ದನ್ನು ಆರಂಭದಲ್ಲಿ ಸ್ವಾಗತಿಸಿದ್ದ ಹಲವರು ಇದೀಗ ಈ ಟ್ರಸ್ಟ್ ಸ್ವರೂಪದ ಕುರಿತಂತೆ ವಾದ ವಿವಾದಗಳಲ್ಲಿ ತೊಡಗಿಕೊಂಡಿದ್ದಾರೆ.

ಅಯೋಧ್ಯೆ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಮ ಜನ್ಮಭೂಮಿ ನ್ಯಾಸ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಅವರು ಈ ಕುರಿತಂತೆ ಪ್ರತಿಕ್ರಿಯಿಸಿ "ಹೊಸ ಟ್ರಸ್ಟ್ ಏಕೆ ಬೇಕು ? ಯಾರು ಅದರ ಸದಸ್ಯರಾಗುತ್ತಾರೆ ? ಅದರ ಅಗತ್ಯವೇನಿದೆ?,'' ಎಂದು ಪ್ರಶ್ನಿಸಿದ್ದಾರೆ. ರಾಮ ಮಂದಿರ ನಿರ್ಮಾಣ ಮಾಡಲೆಂದೇ ನ್ಯಾಸ್ ಸ್ಥಾಪನೆಯಾಗಿರುವಾಗ ಬೇರೊಂದು ಟ್ರಸ್ಟ್ ರಚಿಸುವ ಅಗತ್ಯವಿಲ್ಲ ಹಾಗೂ ನಿರ್ಮೋಹಿ ಅಖಾರ ಸಹಿತ ಇತರ ಸಂಘಟನೆಗಳು ನ್ಯಾಸ್ ಜತೆ ಕೈಜೋಡಿಸಿ ಯೋಜನೆ ಜಾರಿಗೊಳಿಸಬಹುದು ಎಂದಿದ್ದಾರೆ.

ಆದರೆ ನಿರ್ಮೋಹಿ ಅಖಾರಾದ ಮಹಂತ್ ದಿನೇಂದ್ರ ದಾಸ್ ಇದನ್ನು ಒಪ್ಪುವುದಿಲ್ಲ.

"ನಾವು ಅವರ ವಿರುದ್ಧ, ಅಂದರೆ ರಾಮ ಜನ್ಮಭೂಮಿ ನ್ಯಾಸ್ ವಿರುದ್ಧ ಹೋರಾಡುತ್ತಿದ್ದೇವೆ. ಅವರ ಟ್ರಸ್ಟ್ ನಲ್ಲಿ ನಾವು ಸದಸ್ಯರಾಗಬಹುದೆಂದು ಹೇಗೆ ನಿರೀಕ್ಷಿಸಬಹುದು?, ಅವರು ಅವರ ಟ್ರಸ್ಟ್ ಅನ್ನು ಬರ್ಖಾಸ್ತುಗೊಳಿಸಿ ನಮ್ಮ ಜತೆಗೆ ಟ್ರಸ್ಟ್ ಭಾಗವಾಗಬಹುದು. ನಾವು ನಿರ್ಮೋಹಿ ಆಗಿದ್ದು ಅವರ ಭಾಗವಾಗಲು ಸಾಧ್ಯವಿಲ್ಲ. ಇದಕ್ಕೊಂದು ಪರಿಹಾರ ಕಂಡು ಹಿಡಿದು ಎಲ್ಲರನ್ನೂ ವಿಶ್ವಾಸಕ್ಕೆ ಪಡೆದುಕೊಳ್ಳುವ ಜವಾಬ್ದಾರಿ ಸರಕಾರದ್ದು'' ಎಂದು ಹೇಳಿದ್ದಾರೆ.

ದಿಗಂಬರ್ ಅಖಾರಾದ ಮಹಂತ್ ಸುರೇಶ್ ದಾಸ್ ಪ್ರತಿಕ್ರಿಯಿಸಿ ತಾವು ಮುಖ್ಯಮಂತ್ರಿ ಜತೆ ಚರ್ಚಿಸುವುದಾಗಿ ಹೇಳಿದ್ದಾರೆ. "ಒಳ್ಳೆಯ ತೀರ್ಪು, ಸೋಮನಾಥ ದೇವಳ ಟ್ರಸ್ಟ್ ನಂತೆ ಹೊಸ ಟ್ರಸ್ಟ್ ರಚಿಸುವುದು ಅಗತ್ಯ. ಏಕೆಂದರೆ ದೇವಸ್ಥಾನ ನಿರ್ಮಿಸುವುದು ಸರಕಾರದ ಕೆಲಸವಲ್ಲ" ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News