ರಾಜಸ್ತಾನ: 1,500ಕ್ಕೂ ಹೆಚ್ಚು ವಲಸೆ ಹಕ್ಕಿಗಳ ಸಾವು

Update: 2019-11-12 14:32 GMT

ಜೈಪುರ, ನ.12: ಜೈಪುರದ ಬಳಿಯಿರುವ ವಿಶ್ವದ ಅತೀ ದೊಡ್ಡ ಒಳನಾಡಿನ ಉಪ್ಪುನೀರಿನ ಜಲಾಶಯ ಸಂಭಾರ್ ಜಲಾಶಯದ ಸುತ್ತಮುತ್ತ ಸಾವಿರಾರು ವಲಸೆ ಹಕ್ಕಿಗಳ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜಲಮಾಲಿನ್ಯ ಈ ಘಟನೆಗೆ ಮುಖ್ಯ ಕಾರಣವಾಗಿದೆ ಎಂದು ಅಧಿಕಾರಿಗಳು ಶಂಕಿಸಿದ್ದು ಮೃತಹಕ್ಕಿಗಳ ಕರುಳಿನ ಪರೀಕ್ಷೆಯ ವರದಿಯಲ್ಲಿ ಕಾರಣ ಸ್ಪಷ್ಟವಾಗಲಿದೆ ಎಂದು ತಿಳಿಸಿದ್ದಾರೆ. ಸ್ಥಳೀಯರ ಪ್ರಕಾರ ಸುಮಾರು 5000 ಹಕ್ಕಿಗಳು ಸಾವನ್ನಪ್ಪಿವೆ. ಜಲಾಶಯದ 13 ಕಿ.ಮೀ ಉದ್ದದ ದಂಡೆಯುದ್ದಕ್ಕೂ ವಿವಿಧ ವಲಸೆ ಹಕ್ಕಿಗಳ ಮೃತದೇಹ ರಾಶಿಬಿದ್ದಿವೆ. ನನ್ನ ಅಂದಾಜಿನಂತೆ ಸುಮಾರು 5000 ಹಕ್ಕಿಗಳು ಮೃತಪಟ್ಟಿವೆ ಎಂದು ಸ್ಥಳೀಯ ಪಕ್ಷಿ ವೀಕ್ಷಕರಾದ ಅಭಿನವ್ ವೈಶ್ಣವ್, ಕಿಶನ್ ಮೀನಾ ಮತ್ತು ಪವನ್ ಮೋದಿ ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಈ ಪ್ರದೇಶದಲ್ಲಿ ಭಾರೀ ಗಾಳೆಮಳೆಯಾಗಿದ್ದು ಇದರಿಂದ ಹಕ್ಕಿಗಳು ಸತ್ತಿರಬಹುದು. 10 ಜಾತಿಯ ಸುಮಾರು 1,500 ಹಕ್ಕಿಗಳು ಮೃತಪಟ್ಟಿವೆ ಎಂದು ಅಂದಾಜಿಸಲಾಗಿದೆ. ವೈರಲ್ ಸೋಂಕು ಅಥವಾ ಜಲಮಾಲಿನ್ಯ ಸೇರಿದಂತೆ ಇತರ ಸಾಧ್ಯತೆಗಳನ್ನೂ ಪರಿಶೀಲಿಸಲಾಗುತ್ತಿದೆ .ಈ ಜಲಾಶಯಕ್ಕೆ ಪ್ರತಿ ವರ್ಷ ಸುಮಾರು 2ರಿಂದ 3 ಲಕ್ಷದಷ್ಟು ಹಕ್ಕಿಗಳು ವಲಸೆ ಬರುತ್ತಿದ್ದು ಇದರಲ್ಲಿ ಸುಮಾರು 50000 ಫ್ಲೆಮಿಂಗೊ, 1 ಲಕ್ಷದಷ್ಟು ವೇಡರ್ ಹಕ್ಕಿಗಳಾಗಿವೆ ಎಂದು ಅರಣ್ಯ ಪ್ರದೇಶಾಧಿಕಾರಿ ರಾಜೇಂದ್ರ ಜಾಖಡ್‌ಹೇಳಿದ್ದಾರೆ. ಹಕ್ಕಿಗಳ ಮೃತದೇಹವನ್ನು ಮತ್ತು ನೀರಿನ ಮಾದರಿಯನ್ನು ಹೆಚ್ಚಿನ ಪರೀಕ್ಷೆಗಾಗಿ ಭೋಪಾಲಕ್ಕೆ ರವಾನಿಸಲಾಗಿದೆ.

ಹಕ್ಕಿಜ್ವರದ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ ಎಂದು ಪಶುವೈದ್ಯ ಅಶೋಕ್ ರಾವ್ ಅಭಿಪ್ರಾಯಪಟ್ಟಿದ್ದಾರೆ. ಸೋಂಕು ರೋಗದಿಂದ ಹಕ್ಕಿಗಳು ಸಾವನ್ನಪ್ಪಿರುವ ಸಾಧ್ಯತೆ ಕಡಿಮೆ. ಪ್ರಯೋಗಾಲಯದ ವರದಿಯಿಂದ ಕಾರಣ ಸ್ಪಷ್ಟವಾಗಲಿದೆ. ಬಳಿಕ ಇದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಜ್ಯದ ರೋಗನಿರ್ಣಯ ಕೇಂದ್ರದ ಜಂಟಿ ನಿರ್ದೇಶಕ ಅಶೋಕ್ ಶರ್ಮ ಹೇಳಿದ್ದಾರೆ. ಸುಮಾರು 700 ಹಕ್ಕಿಗಳ ಮೃತದೇಹವನ್ನು ಹಳ್ಳತೋಡಿ ಹುಗಿಯಲಾಗಿದೆ. ಇನ್ನಷ್ಟು ಮೃತದೇಹ ಜಲಾಶಯದ ದಂಡೆಯುದ್ದಕ್ಕೂ ಬಿದ್ದಿದ್ದು ಕೆಸರು ಇರುವ ಕಾರಣ ಅವುಗಳನ್ನು ಅಲ್ಲಿಂದ ಮೇಲೆತ್ತಲು ಅರಣ್ಯ ಇಲಾಖೆಯ ಸಿಬಂದಿಗಳು ಹಿಂಜರಿಯುತ್ತಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News