ಮಾಜಿ ಸಿಎಂ ಹಂತಕನ ಮರಣದಂಡನೆ ಶಿಕ್ಷೆ ಜೀವಾವಧಿಗೆ ಇಳಿಕೆ

Update: 2019-11-12 15:25 GMT
ಫೋಟೊ: hindustantimes.com

ಹೊಸದಿಲ್ಲಿ,ನ.12: ಮಾಜಿ ಪಂಜಾಬ್ ಮುಖ್ಯಮಂತ್ರಿ ಬೇಅಂತ್ ಸಿಂಗ್ ಅವರ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಬಬ್ಬರ್ ಖಾಲ್ಸಾ ಭಯೋತ್ಪಾದಕ ಬಲವಂತ ಸಿಂಗ್ ರಾಜೋಆನಾಗೆ ವಿಧಿಸಲಾಗಿದ್ದ ಮರಣ ದಂಡನೆಯನ್ನು ಕೇಂದ್ರ ಗೃಹ ಸಚಿವಾಲಯವು ಜೀವಾವಧಿ ಶಿಕ್ಷೆಗೆ ತಗ್ಗಿಸಿದೆ.

 ಪ್ರಕರಣವು ಕೇಂದ್ರಾಡಳಿತ ಪ್ರದೇಶವಾಗಿರುವ ಚಂಡಿಗಡಕ್ಕೆ ಸಂಬಂಧಿಸಿದ್ದು,ರಾಜೋಆನಾ(52) ಸದ್ಯ ಪಂಜಾಬಿನ ಪಾಟಿಯಾಲಾ ಸೆಂಟ್ರಲ್ ಜೈಲಿನಲ್ಲಿದ್ದಾನೆ.

ಚಂಡಿಗಡದ ವಿಶೇಷ ಸಿಬಿಐ ನ್ಯಾಯಾಲಯವು 2007,ಆ.1ರಂದು ಮಾಜಿ ಪಂಜಾಬ ಪೊಲೀಸ್ ಕಾನ್‌ಸ್ಟೇಬಲ್ ಬಲವಂತ ಸಿಂಗ್‌ಗೆ ಮರಣ ದಂಡನೆಯನ್ನು ವಿಧಿಸಿತ್ತು. 2012,ಮಾ.31ರಂದು ಆತನನ್ನು ಗಲ್ಲಿಗೇರಿಸುವುದು ನಿಗದಿಯಾಗಿತ್ತು. ಆದರೆ ಶಿರೋಮಣಿ ಗುರುದ್ವಾರಾ ಪ್ರಬಂಧಕ ಸಮಿತಿಯು ಕ್ಷಮಾಯಾಚನೆ ಮೇಲ್ಮನವಿಯನ್ನು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಗೃಹ ಸಚಿವಾಲಯವು 2012,ಮಾ.28ರಂದು ಮರಣ ದಂಡನೆ ಜಾರಿಗೆ ತಡೆಯಾಜ್ಞೆ ನೀಡಿತ್ತು.

ಸಿಖ್ ಪಂಥದ ಸ್ಥಾಪಕ ಗುರು ನಾನಕ ದೇವ್ ಅವರ 550ನೇ ಜಯಂತಿಗೆ ಮುನ್ನ ಮಾನವೀಯ ನಡೆಯಾಗಿ ರಾಜೋಆನಾನ ಮರಣ ದಂಡನೆಯನ್ನು ಜೀವಾವಧಿ ಶಿಕ್ಷೆಗೆ ತಗ್ಗಿಸಲು ಗೃಹ ಸಚಿವಾಲಯವು ಕಳೆದ ಸೆಪ್ಟೆಂಬರ್‌ನಲ್ಲಿ ಒಪ್ಪಿಕೊಂಡಿತ್ತು. ಸರಕಾರದ ಈ ನಿರ್ಧಾರವನ್ನು ಬೇಅಂತ್ ಸಿಂಗ್ ಅವರ ಮೊಮ್ಮಗ ರವನೀತ್ ಸಿಂಗ್ ಬಿಟ್ಟು ಟೀಕಿಸಿದ್ದರು.

ಗೃಹ ಸಚಿವಾಲಯವು ಗುರು ನಾನಕ ದೇವ್ ಜಯಂತಿಯ ಹಿನ್ನೆಲೆಯಲ್ಲಿ ದೇಶದ ವಿವಿಧ ಜೈಲುಗಳಲ್ಲಿರುವ ಎಂಟು ಇತರ ಸಿಖ್ ಕೈದಿಗಳಿಗೂ ಶಿಕ್ಷೆಯಲ್ಲಿ ರಿಯಾಯಿತಿ ನೀಡಿದೆ.

1995,ಆ.31ರಂದು ಚಂಡಿಗಡದ ಸಿವಿಲ್ ಸೆಕ್ರೆಟರಿಯೇಟ್‌ನ ಹೊರಗಡೆ ಸಂಭವಿಸಿದ್ದ ಸ್ಫೋಟದಲ್ಲಿ ಬೇಅಂತ್ ಸಿಂಗ್ ಮತ್ತು ಇತರ 16 ಜನರು ಕೊಲ್ಲಲ್ಪಟ್ಟಿದ್ದರು. ಪಂಜಾಬ್ ಪೊಲೀಸ್ ಅಧಿಕಾರಿಯಾಗಿದ್ದ ದಿಲಾವರ್ ಸಿಂಗ್ ಬೇಅಂತ್ ಸಿಂಗ್ ಅವರನ್ನು ಕೊಲ್ಲಲು ಆತ್ಮಹತ್ಯಾ ಬಾಂಬರ್ ಆಗಿ ತನ್ನನ್ನು ಸ್ಫೋಟಿಸಿಕೊಂಡಿದ್ದ. ಕಾಂಗ್ರೆಸ್ ನಾಯಕ ಬೇಅಂತ್ ಸಿಂಗ್ ಅವರನ್ನು ತ್ಯೆಗೈಯಲು ದಿಲಾವರ್ ಸಿಂಗ್ ವಿಫಲಗೊಂಡಿದ್ದರೆ ರಾಜೋಆನಾ ದ್ವಿತೀಯ ಬಾಂಬರ್ ಆಗಿ ರಂಗ್ಕಕಿಳಿಯಲು ಸಜ್ಜಾಗಿದ್ದ.

1984ರ ಸಿಖ್ ವಿರೋಧಿ ದಂಗೆಗಳು ಬೇಅಂತ್ ಹತ್ಯೆಯ ಹಿಂದಿನ ಕಾರಣವಾಗಿತ್ತು ಎಂದು ರಾಜೋಆನಾ ತಿಳಿಸಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News