ಎಫ್‌ಸಿಆರ್‌ಎ ಉಲ್ಲಂಘನೆ: ಕರ್ನಾಟಕದ ಎಸ್‌ವಿಇಎಸ್ ಸೇರಿದಂತೆ 1,807 ಎನ್‌ಜಿಒಗಳ ನೋಂದಣಿ ರದ್ದು

Update: 2019-11-12 15:30 GMT

ಹೊಸದಿಲ್ಲಿ,ನ.12: ಕಾನೂನುಗಳನ್ನು ಉಲ್ಲಂಘಿಸುತ್ತಿರುವ 1,807 ಎನ್‌ಜಿಒಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು ಈ ವರ್ಷ ವಿದೇಶಿ ದೇಣಿಗೆಗಳನ್ನು ಸ್ವೀಕರಿಸುವುದನ್ನು ಕೇಂದ್ರ ಸರಕಾರವು ನಿಷೇಧಿಸಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಯೋರ್ವರು ಮಂಗಳವಾರ ಇಲ್ಲಿ ತಿಳಿಸಿದರು.

ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ (ಎಫ್‌ಸಿಆರ್‌ಎ)ಯ ಉಲ್ಲಂಘನೆಗಾಗಿ ನೋಂದಣಿ ರದ್ದಾಗಿರುವ ಸಂಸ್ಥೆಗಳಲ್ಲಿ ಕರ್ನಾಟಕದ ಸ್ವಾಮಿ ವಿವೇಕಾನಂದ ಎಜ್ಯುಕೇಶನಲ್ ಸೊಸೈಟಿ,ರಾಜಸ್ಥಾನ ವಿವಿ,ಅಲಹಾಬಾದ್ ಅಗ್ರಿಕಲ್ಚರಲ್ ಇನ್‌ಸ್ಟಿಟ್ಯೂಟ್ ಮತ್ತು ಗುಜರಾತನ ಯಂಗ್ ಮೆನ್ಸ್ ಕ್ರಿಶ್ಚಿಯನ್ ಅಸೋಸಿಯೇಷನ್ ಇತ್ಯಾದಿಗಳು ಸೇರಿವೆ. ಎಫ್‌ಸಿಆರ್‌ಎ ನೋಂದಣಿ ರದ್ದುಗೊಂಡಿರುವುದರಿಂದ ಈ ಸಂಸ್ಥೆಗಳು ವಿದೇಶಿ ದೇಣಿಗೆಗಳನ್ನು ಸ್ವೀಕರಿಸುವಂತಿಲ್ಲ.

  ಪದೇಪದೇ ನೆನಪಿನೋಲೆಗಳನ್ನು ಕಳುಹಿಸಿದ್ದರೂ ಆರು ವರ್ಷಗಳವರೆಗಿನ ವಿದೇಶಿ ದೇಣಿಗೆಯ ಕುರಿತು ವಾರ್ಷಿಕ ಆದಾಯ ಮತ್ತು ವೆಚ್ಚಗಳ ವಿವರಗಳನ್ನು ಸಲ್ಲಿಸದಿರುವುದು ಈ ಸಂಸ್ಥೆಗಳ ನೋಂದಣಿ ರದ್ದುಗೊಳ್ಳಲು ಪ್ರಮುಖ ಕಾರಣವಾಗಿದೆ. ಎಫ್‌ಸಿಆರ್‌ಎ ಮಾರ್ಗಸೂಚಿಯಂತೆ ನೋಂದಾಯಿತ ಸಂಸ್ಥೆಗಳು ಹಣಕಾಸು ವರ್ಷ ಅಂತ್ಯಗೊಂಡ ಒಂಬತ್ತು ತಿಂಗಳುಗಳಲ್ಲಿ ಆನ್‌ಲೈನ್ ಮೂಲಕ ಈ ವಿವರಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

ಈ 1807 ಸಂಸ್ಥೆಗಳ ಜೊತೆಗೆ ಈ ವರ್ಷ ಬೆಂಗಳೂರಿನ ಎನ್‌ಜಿಒ ಇನ್ಫೋಸಿಸ್ ಪ್ರತಿಷ್ಠಾನದ ಮನವಿಯ ಮೇರೆಗೆ ಎಫ್‌ಸಿಆರ್‌ಎ ಅಡಿ ಅದರ ನೋಂದಣಿಯನ್ನೂ ರದ್ದುಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News