ಎಲ್ಗಾರ್ ಪರಿಷತ್ ಪ್ರಕರಣ: ಗೌತಮ್ ನವ್ಲಾಖಾರ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತ

Update: 2019-11-12 16:06 GMT

ಪುಣೆ, ನ. 12: ಎಲ್ಗಾರ್ ಪರಿಷತ್-ಮಾವೋವಾದಿ ನಂಟು ಪ್ರಕರಣದಲ್ಲಿ ಸಾಮಾಜಿಕ ಹೋರಾಟಗಾರ ಗೌತಮ್ ನವ್ಲಾಖಾ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ.

 ಸುಪ್ರೀಂ ಕೋರ್ಟ್ ಅವರಿಗೆ ನೀಡಿದ ಬಂಧನದಿಂದ ರಕ್ಷಣೆ ವಿಸ್ತರಿಸಲು ಕೂಡ ನ್ಯಾಯಾಲಯ ನಿರಾಕರಿಸಿದೆ. ನಿರೀಕ್ಷಣಾ ಜಾಮೀನು ನೀಡುವಂತೆ ನವ್ಲಾಖಾ ಅವರು ನವೆಂಬರ್ 5ರಂದು ಸೆಷನ್ಸ್ ನ್ಯಾಯಾಲಯವನ್ನು ಸಂಪರ್ಕಿಸಿದ್ದರು.

 2017 ಡಿಸೆಂಬರ್ 31ರಂದು ಇಲ್ಲಿ ನಡೆದ ಎಲ್ಗಾರ್ ಪರಿಷತ್ ಸಮಾವೇಶದಲ್ಲಿ ಗೌತಮ್ ನವ್ಲಾಕ್ ಅವರು ಪ್ರಚೋದನಾಕಾರಿ ಭಾಷಣ ಮಾಡಿದ್ದರು. ಇದರಿಂದ ಜಿಲ್ಲೆಯ ಕೋರೆಗಾಂವ್ ಭೀಮಾದಲ್ಲಿ 2018 ಜನವರಿ 1ರಂದು ಜಾತಿ ಹಿಂಸಾಚಾರ ನಡೆದಿತ್ತು ಎಂದು ಪುಣೆ ಪೊಲೀಸರು ಆರೋಪಿಸಿದ್ದರು. ಸಮಾವೇಶದ ಹಿನ್ನೆಲೆಯಲ್ಲಿ ಮಾವೋವಾದಿಗಳು ಇದ್ದಾರೆ ಎಂದು ಪೊಲೀಸರು ಆರೋಪಿಸಿದ್ದರು. ಮತ್ತಷ್ಟು ತನಿಖೆ ನಡೆಸಿದ ಪೊಲೀಸರು ನಕ್ಸಲರೊಂದಿಗೆ ನಂಟು ಹೊಂದಿದ ಆರೋಪದಲ್ಲಿ ಸುಧಾ ಭಾರದ್ವಾಜ್ ಹಾಗೂ ವರವರ ರಾವ್ ಸೇರಿದಂತೆ ಎಡಪಂಥೀಯ ಹೋರಾಟಗಾರರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ನವ್ಲಾಕ್ ಅವರನ್ನು ಆರೋಪಿ ಎಂದು ಹೆಸರಿಸಲಾಗಿತ್ತು. ಆದರೆ, ಅವರನ್ನು ಬಂಧಿಸಿರಲಿಲ್ಲ. ಪ್ರಕರಣವನ್ನು ರದ್ದುಗೊಳಿಸುವಂತೆ ಸಲ್ಲಿಸಿದ ಮನವಿಯನ್ನು ಬಾಂಬೆ ಉಚ್ಚ ನ್ಯಾಯಾಲಯ ತಿರಸ್ಕರಿಸಿದ ಬಳಿಕ ನವ್ಲಾಕಾ ಬಂಧನದಿಂದ ಮಧ್ಯಂತರ ರಕ್ಷಣೆ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದರು. ಅಲ್ಲದೆ ಕೆಳ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News