ಕಾಶ್ಮೀರ: ಇಂಟರ್‌ನೆಟ್ ದಿಗ್ಬಂಧನ ವಿರೋಧಿಸಿ ಪತ್ರಕರ್ತರ ಪ್ರತಿಭಟನೆ

Update: 2019-11-12 16:19 GMT
ಫೋಟೊ: Twitter/StandWithKashmir

ಶ್ರೀನಗರ, ನ.12: ಕಾಶ್ಮೀರದಲ್ಲಿ ಕಳೆದ 100 ದಿನಗಳಿಂದಲೂ ಇಂಟರ್‌ನೆಟ್‌ಗೆ ದಿಗ್ಬಂಧನ ಮುಂದುವರಿದಿರುವುದನ್ನು ವಿರೋಧಿಸಿ ಕಾಶ್ಮೀರದ ಪತ್ರಕರ್ತರ ತಂಡವೊಂದು ಶ್ರೀನಗರದಲ್ಲಿರುವ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಶಾಂತಿಯುತ ಪ್ರತಿಭಟನೆ ಹಮ್ಮಿಕೊಂಡಿತ್ತು.

ತಮ್ಮ ಲ್ಯಾಪ್‌ಟಾಪ್‌ಗಳನ್ನು ಕೈಯಲ್ಲಿ ಹಿಡಿದುಕೊಂಡು, ಜೊತೆಗೆ ‘100 ದಿನಗಳಾದರೂ ಇಂಟರ್‌ನೆಟ್ ಸಂಪರ್ಕವಿಲ್ಲ’ ಎಂಬ ಫಲಕವನ್ನು ಪ್ರದರ್ಶಿಸಿ ಪತ್ರಕರ್ತರು ಪ್ರತಿಭಟನೆ ನಡೆಸಿದರು. ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ 370ನೇ ವಿಧಿಯನ್ನು ಆಗಸ್ಟ್ 5ರಂದು ರದ್ದುಗೊಳಿಸಿದ ಬಳಿಕ ರಾಜ್ಯದಲ್ಲಿ ಇಂಟರ್‌ನೆಟ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ. ಪತ್ರಕರ್ತರು ವರದಿ ಕಳುಹಿಸಲು ನೆರವಾಗಲು ಸರಕಾರ ಮಾಧ್ಯಮ ಕೇಂದ್ರವನ್ನು ಸ್ಥಾಪಿಸಿದೆ. ಆದರೆ ತಡೆರಹಿತ ರೀತಿಯಲ್ಲಿ ವರದಿ ಮಾಡಲು ಅನುಕೂಲವಾಗುವ ಹೈಸ್ಪೀಡ್ ಬ್ರಾಡ್‌ಬ್ಯಾಂಡ್ ಸಂಪರ್ಕ ವ್ಯವಸ್ಥೆ ಮಾಡಬೇಕೆಂದು ಪತ್ರಕರ್ತರು ಆಗ್ರಹಿಸುತ್ತಿದ್ದಾರೆ.

ಕಾಶ್ಮೀರದಲ್ಲಿ ಪತ್ರಕರ್ತರಿಗೆ ಎದುರಾಗಿರುವ ಅತ್ಯಂತ ಕೆಟ್ಟ ಪರಿಸ್ಥಿತಿ ಇದಾಗಿದ್ದು ಅತ್ಯಂತ ಅವಮಾನಕರವಾಗಿದೆ. ಯುದ್ಧದ ಪರಿಸ್ಥಿತಿಯಲ್ಲೂ ಈ ರೀತಿ ನಡೆಯುವುದಿಲ್ಲ ಎಂದು ಪತ್ರಕರ್ತ ಮಜೀದ್ ಮಕ್ಬೂಲ್ ಹೇಳಿದ್ದಾರೆ. ಇಂಟರ್‌ನೆಟ್ ವ್ಯವಸ್ಥೆಗೆ ಒತ್ತಾಯಿಸುವುದು ನಮ್ಮ ಮೂಲಭೂತ ಹಕ್ಕಾಗಿದೆ ಎಂದು ಪತ್ರಕರ್ತರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News